ಪ್ರಮುಖ ಸುದ್ದಿಮೈಸೂರು

ಶೇ.50ರಷ್ಟು ಅನುಪಾತ, ವಿಳಂಬ ನೀತಿ ಖಂಡಿಸಿ ಮುಡಾ ಮುಂದೆ ಪ್ರತಿಭಟನೆ

ಮೈಸೂರು, ನ. 3 : ಗೃಹ ನಿರ್ಮಾಣ ಸಹಕಾರ ಸಂಘಗಳು ಬಡಾವಣೆ ನಿರ್ಮಾಣ ಮಾಡಲು ಮುಡಾದಿಂದಾಗುತ್ತಿರುವ ಅಡಚಣೆಯನ್ನು ಖಂಡಿಸಿ ನ.8ರಂದು ಬೆಳಗ್ಗೆ 11 ಗಂಟೆಯಿಂದ ಮುಡಾ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದು ಎಂದು ಮಧುವನ ಹೆಚ್.ಪಿ.ಸಿಎಸ್ ಅಧ್ಯಕ್ಷ ಮತ್ತು ಕ್ರಿಯಾ ಸಮಿತಿ ಸಂಚಾಲಕ ಡಿ.ಟಿ.ಪ್ರಕಾಶ್ ತಿಳಿಸಿದರು.

1991ರಲ್ಲಿ ನಿವೃತ್ತ ನೌಕರರು ಗೃಹ ನಿರ್ಮಾಣ ಸಹಕಾರ ಸಂಘಗಳ ಒಕ್ಕೂಟ ನಿರ್ಮಿಸಿಕೊಂಡು ಮೈಸೂರಿನ ಹೊರ ವಲಯದಲ್ಲಿ 150 ಎಕರೆ ಅಧಿಕ ಭೂಮಿಯಲ್ಲಿ ಅನೇಕ ಬಡಾವಣೆಗಳನ್ನು ನಿರ್ಮಿಸಿದ್ದಾರೆ. ಬಡಾವಣೆಗಳ  ಜಮೀನಿನಲ್ಲಿ ಶೇ 50:50 ಅನುಪಾತದಲ್ಲಿ ನಿವೇಶನ ವಿತರಣೆಗೆ 2010ರ ಫೆ.11ರಂದು ನಡೆದ ಮುಡಾ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಶೇ.50:50ರ ಅನುಪಾತಕ್ಕೆ ಕ್ರಿಯಾ ಸಮಿತಿಯಿಂದ ಶಾಶ್ವತ ವಿರೋಧವಿದೆ ಎಂದು ಶುಕ್ರವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನುಡಿದರು.

ಶೇ.50:50 ಅನುಪಾತಕ್ಕೆ ಕ್ರಿಯಾ ಸಮಿತಿಯ ವಿರೋಧಿಸಿದ್ದರಿಂದ, ಗೃಹ ನಿರ್ಮಾಣ ಒಕ್ಕೂಟಗಳಿಗೆ ನಿವೇಶನ ಮಂಜೂರಾತಿಯಲ್ಲಿ ಮುಡಾ ವಿಳಂಬ ನೀತಿ ಅನುಸರಿಸುತ್ತಿದೆ, ಇದರಿಂದಾಗಿ ಕಳೆದ ಹತ್ತು ವರ್ಷಗಳಿಂದಲೂ ಸಂಘದ ಸದಸ್ಯರಿಗೆ ನಿವೇಶನ ಹಂಚಿಕೆಯಲ್ಲಿ ತೀವ್ರ ಅನ್ಯಾಯವಾಗುತ್ತಿದ್ದು, ಮುಡಾದ ನಿರ್ಲಕ್ಷ್ಯದಿಂದಾಗಿ ನಿವೇಶನಾಕಾಂಕ್ಷಿಗಳಲ್ಲಿ ಅಸಮಾಧಾನ ಮೂಡಿದೆ ಎಂದು ತಿಳಿಸಿ, ಮುಡಾ ಬಯಸುವ ರೀತಿ ಶೇ.50:50ರಷ್ಟು ಬಡಾವಣೆ ನಿರ್ಮಿಸಿದರೆ ಸಂಘಕ್ಕೆ ತೀವ್ರ ಆರ್ಥಿಕ ನಷ್ಟವುಂಟಾಗುವುದು, ಈ ಬಗ್ಗೆ ಮುಡಾ ಮಾಜಿ ಹಾಗೂ ಹಾಲಿ ಅಧ್ಯಕ್ಷರಿಗೆ ಮತ್ತು ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ, ಎಲ್ಲಾ ತಿಳಿದಿರುವ ಪ್ರಾಧಿಕಾರ ಸೂಕ್ತ ನಿರ್ಣಯ ಕೈಗೊಳ್ಳದೇ ವೃಥಾ ಕಾಲಾಹರಣ ಮಾಡುತ್ತಿದೆ ಎಂದು ಆರೋಪಿಸಿದರು.

ಮುಡಾ ವಿಳಂಬ ನೀತಿಯನ್ನು ಖಂಡಿಸಿ ಕಳೆದ ಮೇ.23ರಂದು ಪ್ರತಿಭಟನೆಗೆ ಮುಂದಾಗಿದ್ದ ಕ್ರಿಯಾ ಸಮಿತಿಗೆ, ಮಾತುಕತೆ ಮೂಲಕ ಸಮಸ್ಯೆ ಇತ್ಯಾರ್ಥಗೊಳಿಸುವುದಾಗಿ ಮುಡಾ ಅಧ್ಯಕ್ಷರು ಭರವಸೆ ನೀಡಿದ್ದರು, ಈ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಗಿತ್ತು, ಆದರೆ ಇಂದಿಗೂ ಸಮಸ್ಯೆ ಬಗೆಹರಿಸಲು ಸಂಬಂಧಿಸಿದವರು ನಿರಾಸಕ್ತಿ ವಹಿಸಿದ್ದು ಇದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸುಬ್ಬಣ್ಣ , ಜೆ.ಪುಟ್ಟಸ್ವಾಮಿ, ಹೆಚ್. ರಮೇಶ್, ನಾಗಭೂಷಣ್ ಮೊದಲಾದವರು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: