ದೇಶಪ್ರಮುಖ ಸುದ್ದಿವಿದೇಶ

ಜಗತ್ತಿನಾದ್ಯಂತ ವಾಟ್ಸಪ್ ಸೇವೆ ಅಸ್ತವ್ಯಸ್ತ : ಸ್ವಲ್ಪ ಸಮಯದಲ್ಲೇ ಮರುಪೂರಣ

ವಾಷಿಂಗ್ಟನ್ (ನ.3): ತ್ವರಿತವಾಗಿ ಸಂದೇಶ, ಚಿತ್ರ, ವಿಡಿಯೋ ಕಳುಹಿಸಲು ಸಾಧ್ಯವಾಗುವ ಸ್ಮಾರ್ಟ್‍ಫೋನ್ ಬಳಕೆದಾರರ ಅಚ್ಚುಮೆಚ್ಚಿನ ವಾಟ್ಸಪ್‍ ಸೇವೆಯು ಸರ್ವರ್ ಸಮಸ್ಯೆಯಿಂದಾಗಿ ಜಗತ್ತಿನಾದ್ಯಂತ ಇಂದು ಮಧ್ಯಾಹ್ನ ಕೆಲ ಕಾಲ ಅಸ್ತವಾಗಿತ್ತು.

ಮೊಬೈಲ್ ಗ್ರಾಹಕರು ವಾಟ್ಸಪ್ ಕ್ರ್ಯಾಶ್ ಆದ ಹಿನ್ನೆಲೆಯಲ್ಲಿ ಸಂದೇಶ ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗಲಿಲ್ಲ. ಸುಮಾರು 40 ನಿಮಿಷಗಳ ಕಾಲ ಕ್ರ್ಯಾಶ್ ಆಗಿದ್ದ ವಾಟ್ಸಪ್ ಸೇವೆಯನ್ನು ಬಳಿಕ ಪುನಃಸ್ಥಾಪಿಸಲಾಯಿತು ಮಾಧ್ಯಮಗಳು ವರದಿ ಮಾಡಿವೆ.

ವಾಟ್ಸಪ್ ಸೇವೆಯು ಸ್ವಲ್ಪ ಸಮಯವೇ ಅಸ್ತವ್ಯಸ್ಥವಾದರೂ ತಾವು ಕಳುಹಿಸಿದ ವಾಟ್ಸಪ್‍ನಿಂದ ಸಂದೇಶ ರವಾನೆಯಾಗದಿರುವುದನ್ನು ಕಂಡ ಕೆಲವರು ತಮ್ಮ ಗೆಳೆಯರಿಗೆ, ಪರಿಚಯಸ್ಥರಿಗೆ ಫೋನ್ ಮಾಡಿ ವಿಚಾರಿಸಿಕೊಳ್ಳುತ್ತಿದ್ದುದು ಮತ್ತು ವಾಟ್ಸಪ್ ಸೇವೆ ಎಲ್ಲ ಕಡೆ ಅಸ್ತವ್ಯಸ್ತವಾಗಿರುವುದು ತಿಳಿದು ನಿಟ್ಟುಸಿರು ಬಿಡುವ ದೃಶ್ಯಗಳು ಕಂಡುಬಂತು.

ವಾಟ್ಸಪ್ ಸೇವೆ ಸ್ಥಗಿತಗೊಂಡ ಕಾರಣ ಮೊಬೈಲ್ ಗ್ರಾಹಕರು ಸಂದೇಶ ಕಳುಹಿಸಲು ತಕ್ಷಣದ ಪರಿಹಾರವಾಗಿ ಫೇಸ್‍ಬುಕ್ ಮೆಸೆಂಜರ್ ಮೊರೆ ಹೋದರು ಎಂದು ತಿಳಿದುಬಂದಿದೆ.

ಡೌನ್ ಡಿಟೆಕ್ಟರ್ ಪ್ರಕಾರ ಯುರೋಪನಾದ್ಯಂತ ಸಮಸ್ಯೆ ತಲೆದೋರಿದೆ ಎಂದು ವರದಿ ಮಾಡಿದೆ. ಆದರೆ ಭಾರತ, ಸಿಂಗಾಪುರ್, ಮೋಝಾಂಬಿಕ್, ರಷ್ಯಾ, ವಿಯೆಟ್ನಾಮ್, ಇರಾಕ್ ಸೇರಿದಂತೆ ಜಗತ್ತಿನ ಹಲವಾರು ದೇಶಗಳಲ್ಲಿ ವಾಟ್ಸಪ್ ಸೇವೆ ಸ್ಥಗಿತಗೊಂಡಿತ್ತು ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

(ಎನ್‍ಬಿಎನ್‍)

Leave a Reply

comments

Related Articles

error: