ದೇಶಪ್ರಮುಖ ಸುದ್ದಿವಿದೇಶ

ಶ್ರವಣಬೆಳಗೊಳದಲ್ಲಿ ಅಂತಾರಾಷ್ಟ್ರೀಯ ಪ್ರಾಕೃತ ಸಮ್ಮೇಳನಕ್ಕೆ ಕೇಂದ್ರ ಸಚಿವ ಅನಂತ ಕುಮಾರ್ ಚಾಲನೆ

ಶ್ರವಣಬೆಳಗೊಳ, ನ.3 (ಆಚಾರ್ಯ ಶ್ರೀ ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿ ಸಭಾ ಮಂಟಪ): ಎರಡನೇ ಪ್ರಾಕೃತ ವಿಶ್ವವಿದ್ಯಾನಿಲಯವನ್ನು ಮಹಾವೀರನ ಜನ್ಮಸ್ಥಳದ ಬಿಹಾರದ ವೈಶಾಲಿಯಲ್ಲಿ ಸ್ಥಾಪನೆ ಮಾಡುವಂತೆ ಬಿಹಾರ ಸರ್ಕಾರ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗಳನ್ನು ಮನವಿ ಮಾಡಲಾಗುವುದು ಎಂದು ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರ ಮಂತ್ರಿ ಅನಂತ್‍ಕುಮಾರ್ ಶುಕ್ರವಾರ ಆಶ್ವಾಸನೆ ನೀಡಿದರು.

ಮಹಾಮಸ್ತಕಾಭಿಷೇಕ ಮಹೋತ್ಸವ ರಾಷ್ಟ್ರಮಟ್ಟದ ದಿಗಂಬರ ಜೈನ ವ್ಯವಸ್ಥಾಪಕ ಸಮಿತಿ ಆಯೋಜಿಸಿರುವ ಗೊಮ್ಮಟೇಶ್ವರ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ-2018ರ ನಿಮಿತ್ತ ಶ್ರವಣಬೆಳಗೊಳದಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಿರುವ ಅಂತಾರಾಷ್ಟ್ರೀಯ ಪ್ರಾಕೃತ ಸಮ್ಮೇಳನವನ್ನು ಆಚಾರ್ಯ ಶ್ರಿ ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿ ವಿರಚಿತ ಗೊಮ್ಮಟಸಾರ ಎಂಬ 1000 ವರ್ಷ ಹಳೆಯದಾದ ಒಲೆಗರಿಯನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು.

ಪ್ರಾಕೃತ ಭಾಷೆ ಮತ್ತು ಸಂಸ್ಕೃತ ಭಾಷೆ ಭಾರತೀಯ ಸಂಸ್ಕೃತಿಯ ತಳಹದಿ ಇದ್ದಂತೆ. ದೇಶದ ಪ್ರಥಮ ಪ್ರಾಕೃತ ವಿಶ್ವವಿದ್ಯಾನಿಲಯ ಶ್ರವಣಬೆಳಗೊಳದಲ್ಲಿ ಸ್ಥಾಪನೆಯಾಗಿರುವುದು ಸಂತೋಷದ ವಿಷಯ. ಕೇಂದ್ರ ಸರ್ಕಾರವು ವಿಶ್ವವಿದ್ಯಾನಿಲಯಕ್ಕೆ ಅಗತ್ಯ ಹಣಕಾಸಿನ ನೆರವು ನೀಡುತ್ತದೆ. ಈ ವಿಚಾರವಾಗಿ ನಾನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವೇಡ್‍ಕರ್ ಜೊತೆ ಮಾತನಾಡುತ್ತೇನೆ. ಅದರ ಜೊತೆಗೆ ಎರಡನೇ ವಿಶ್ವವಿದ್ಯಾನಿಲಯವನ್ನು ವೈಶಾಲಿಯಲ್ಲಿ ಸ್ಥಾಪನೆಯಾವುದು ಮುಖ್ಯ ಆ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಜೋತೆ ಮಾತನಾಡುತ್ತೇನೆ ಎಂದರು.

ಮಹಾಮಸ್ತಕಾಭಿಷೇಕದ ವಿಷಯವಾಗಿ ದೆಹಲಿ ಪ್ರತಿನಿಧಿ :

ಮಹಾಮಸ್ತಕಾಭಿಷೇಕದ ಕೆಲಸ ಕಾರ್ಯಗಳಿಗೆ ತಾವು ಮಠದ ದೆಹಲಿ ಪ್ರತಿನಿಧಿಯಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ಸಚಿವರು ಭರವಸೆ ನೀಡಿದರು. ಮಹಾಮಸ್ತಕಾಭಿಷೇಕಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕೆ ಬೇಕಾದ ವ್ಯವಸ್ಥೆ ಒದಗಿಸಲು ಮಠದ ಪರವಾಗಿ ಕೇಂದ್ರ ಸರ್ಕಾರದ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತೇನೆ.

ಮಹಾಮಸ್ತಕಾಭಿಷೇಕಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗುವುದು ಎಂದು ಸ್ವಾಮೀಜಿ ಹೇಳಿದ್ದಾರೆ. ಮಠದ ಪರವಾಗಿ ಆಹ್ವಾನ ಪತ್ರಿಕೆಯನ್ನು ಪ್ರಧಾನಿಯವರಿಗೆ ತಲುಪಿಸಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತೇನೆ ಎಂದರು.

ಸಮ್ಮೇಳನದ ಸಾನಿಧ್ಯವಹಿಸಿದ್ದ ಕ್ಷೇತ್ರದ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿ ಆಶೀರ್ವಚನ ನೀಡುತ್ತಾ ಮಸ್ತಕಾಭಿಷೇಕ ಮಹೋತ್ಸವಕ್ಕ ರಾಜ್ಯ ಸರ್ಕಾರದ ಕೊಡುಗೆ ಅಪಾರ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರನ್ನು ಶ್ಲಾಘಿಸುವುದು ನಮ್ಮ ಕರ್ತವ್ಯ. ಇಂದು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರೋ ಅನಂತಕುಮಾರ್ ರವರಿಗೆ ಧನ್ಯವಾದ ಹೇಳಿದ ಸ್ವಾಮಿಜಿ ಕಳೆದ ಭಾರಿಯ ಮಹಾಮಸ್ತಕಾಬಿಷೇಕದಲ್ಲಿ ಕೇಂದ್ರ ಸರ್ಕಾರ 90ಕೋಟಿ ರೂ. ಅನುದಾನ ನೀಡಲಾಗಿತ್ತು. ಅದೇ ರೀತಿ ಈಬಾರಿಯೂ ಮಸ್ತಕಾಭಿಷೇಕಕ್ಕೆ ಅನುದಾನ ಸಿಗಲಿದೆ ಎಂಬ ಭಾವನೆ ನಮ್ಮದು ಎಂದರು. ಸಂಸ್ಕೃತಿಯ ಉಳಿವಿಗೆ ಪ್ರಾಕೃತ ಭಾಷೆ ಕೂಡಾ ಮುಖ್ಯವಾದದ್ದು. ವೈಶಾಲಿ ಪಟ್ಟಣದಲ್ಲಿ ಪ್ರಾಕೃತ ವಿವಿ ಸ್ಥಾಪನೆ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರಕ್ಕೆ ಇದೇ ವೇಳೆ ಧನ್ಯವಾದ ಅರ್ಪಿಸಿದರು.

ಶ್ರವಣಬೆಳಗೂಳಕ್ಕೆ ರೈಲ್ವೇ ಸಂಪರ್ಕವನ್ನ ಕೊಡುಗೆಯಾಗಿ ನೀಡಿದ ಮಾಜಿ ಪ್ರಧಾನಿ ದೇವೇಗೌಡರಗೂ ಸ್ವಾಮಿಜಿ ಅಭಿನಂದನೆ ಸಲ್ಲಿಸಿದರು.

ಹಿರಿಯ ಸಾಹಿತಿ ನಾಡೋಜ ಹಂಪ ನಾಗರಾಜಯ್ಯ ಸ್ವಾಗತಿಸಿದರು. ಫ್ರಾನ್ಸ್ ದೇಶದ ಪ್ಯಾರಿಸ್ ವಿಶ್ವವಿದ್ಯಾಲಯದ ಪ್ರೊ.ನಳಿನಿ ಬಲ್ಬೀರ್ ಪ್ರಮುಖ ಭಾಷಣ ಮಾಡಿದರು. ಸಮ್ಮೇಳನದ ಅಧ್ಯಕ್ಷತೆಯನ್ನು ಪ್ರೇಮ್ ಸುಮನ್ ಜೈನ್‍ವಹಿದ್ದರು. ಮಹಾಮಸ್ತಕಾಭಿಷೇಕ ಮಹೋತ್ಸವದ ರಾಷ್ಟ್ರೀಯ ಅಧ್ಯಕ್ಷೆ ಸರಿತ ಎಂ.ಕೆ.ಜೈನ್, ಕಾರ್ಯಾದ್ಯಕ್ಷ ಎಸ್.ಜಿತೇಂದ್ರಕುಮಾರ್, ಕಾರ್ಯದರ್ಶಿ, ಕಾರ್ಯದರ್ಶಿ ವಿನೋದ್ ದೊಡ್ಡಣ್ಣನವರ್, ಸಹ ಕಾರ್ಯದರ್ಶಿ ಸುರೇಶ್ ಪಾಟೀಲ್ ಸಾಂಘ್ಲಿ ಉಪಸ್ಥಿತರಿದ್ಧರು.

(ಎನ್‍ಬಿಎನ್‍)

Leave a Reply

comments

Related Articles

error: