ಪ್ರಮುಖ ಸುದ್ದಿಮೈಸೂರು

ನಕಲಿ ಮತದಾರರು : ಪ್ರಕರಣವನ್ನು ಸಿಬಿಐಗೆ ವಹಿಸಲು ಎಂ.ಕೆ.ಎಸ್. ಆಗ್ರಹ

ಮೈಸೂರು,ನ.4 : ತಮ್ಮ ಪ್ರಭಾವ ಬೀರಿ ಕೆ.ಆರ್.ಕ್ಷೇತ್ರದ ಬಹಳಷ್ಟು ಬಿಜೆಪಿ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂಬ ಮಾಜಿ ಸಚಿವ ಎಸ್.ಎ.ರಾಮದಾಸ್ ಆರೋಪವನ್ನು ಶಾಸಕ ಎಂ.ಕೆ.ಸೋಮಶೇಖರ್ ಅಲ್ಲಗೆಳೆದು, ನಕಲಿ ಮತದಾರರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಟಿಕೆಟ್ ತಪ್ಪುವ ಭಯದಲ್ಲಿ ಮಾಜಿ ಸಚಿವ ರಾಮದಾಸ್ ಸದಾ ಸುದ್ದಿಯಲ್ಲಿರಲೂ ಓವರ್ ಆಕ್ಟಿಂಗ್ ಮಾಡುತ್ತಿದ್ದಾರೆಂದು ವ್ಯಂಗ್ಯವಾಡಿ, ಸ್ವತಃ ಬಿಜೆಪಿಯವರೇ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಿಂದೀಚಿಗೆ ಮಾಜಿ ಪಾಲಿಕೆ ಅಧಿಕಾರಿಗಳಾದ ಕೃಷ್ಣ ಮತ್ತು ರಂಗನಾಥ ಅವರುಗಳು ಸುಮಾರು 20,000 ಸುಳ್ಳು ಮತದಾರರನ್ನು ಸೇರ್ಪಡೆಗೊಳಿಸಿದ್ದು ಈ ಬಗ್ಗೆ ಕೂಲಂಕುಷ ತನಿಖೆಯಾಗಬೇಕೆಂದು ಒತ್ತಾಯಿಸಿದರು.

ಮತಪಟ್ಟಿಯಿಂದ ನಕಲಿ ಮತದಾರರನ್ನು ಕೈಬಿಡುವಂತೆ ಒತ್ತಾಯಿಸಿ ನಾನು ಚುನಾವಣಾ ಆಯುಕ್ತರಾದ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರಕ್ಕೆ ಕ್ರಮ ಕೈಗೊಂಡಿದ್ದಾರೆ. ಶ್ರೀರಾಂಪುರದ ಮನೆ.ನಂ.5ರಲ್ಲಿ ಕೇವಲ ಇಬ್ಬರು ವಾಸಿಸುತ್ತಿದ್ದು ಅಲ್ಲಿ 18 ಮತಗಳು, ಮನೆ ನಂ.6ರಲ್ಲಿ 21 ಮತದಾರರನ್ನು ಸೃಷ್ಟಿಸಿದ್ದಾರೆ, ಅಲ್ಲದೇ ಖಾಲಿ ನಿವೇಶನಗಳಲ್ಲಿಯೂ ನಕಲಿ ಮತದಾರರನ್ನು ರಾಮದಾಸ್ ಅವರ ಶಿಷ್ಯರು ಹುಟ್ಟು ಹಾಕಿದ್ದಾರೆಂದು ಟೀಕಾಪ್ರಹಾರ ನಡೆಸಿ, ಈ ವಿಷಯವಾಗಿ ಕೇವಲ ನ್ಯಾಯಾಂಗ ತನಿಖೆ ಮಾತ್ರವಲ್ಲದೇ, ಸಿಬಿಐ ತನಿಖೆಯಾಗಿ ತಪ್ಪಿತಸ್ಥರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಬೇಕೆಂದು ಆಗ್ರಹಿಸಿದರು.

2013 ರಲ್ಲಿ 2 ಲಕ್ಷ 16 ಸಾವಿರ 623 ಮತದಾರರಿದ್ದ ಪಟ್ಟಿಯೂ 2017ರಲ್ಲಿ ಬರೋಬ್ಬರಿ 19,377 ಹೆಚ್ಚಾಗುವ ಮೂಲಕ 2 ಲಕ್ಷ 36 ಸಾವಿರ ಮತದಾರರು ಏರಿಕೆಯಾಗಿದ್ದು,  ಒಟ್ಟು 20 ಸಾವಿರಕ್ಕೂ ಅಧಿಕ ನಕಲಿ ಮತದಾರರು ಪಟ್ಟಿಯೊಳ್ಳಗೆ ಸೇರಿದ್ದರು, ಎಲ್ಲೆಲ್ಲಿ ಖಾಲಿ ನಿವೇಶನವಿದೆಯೋ, ಅಲ್ಲಲ್ಲಿ ನಕಲಿ ಮತದಾರರನ್ನು ಸೇರಿಸಿದ್ದಾರೆ. ಅಲ್ಲದೇ ಮುಂದಿನ ಚುನಾವಣೆಯಲ್ಲಿ ತಮಗೆ ಟಿಕೇಟ್ ಸಿಗುವುದಿಲ್ಲವೋ, ಸುದ್ದಿಯಲ್ಲಿಲ್ಲದಿದ್ದರೆ ಎಲ್ಲಿ ಜನರು ತಮ್ಮನ್ನು ಮರೆತು ಬಿಡುತ್ತಾರೋ ಎಂಬ ಆತಂಕದಿಂದ  ಈ ರೀತಿ ಸುದ್ದಿಗೋಷ್ಠಿ ನಡೆಸುವ ಮೂಲಕ ರಾಮದಾಸ್ ಅತಿಯಾದ ನಾಟಕವಾಡುತ್ತಿದ್ದಾರೆ ಎಂದು ಆಪಾದಿಸಿದರು.

ಅಸ್ಲಾಂ ಯಾರೆಂಬುದೇ ನನಗೆ ಗೊತ್ತಿಲ್ಲ, ಅಲ್ಪಸಂಖ್ಯಾತರ ಹೆಸರನ್ನು ಸೃಷ್ಟಿಸಿಕೊಂಡು ಬಿಜೆಪಿಯು ಜಾತಿ ರಾಜಕಾರಣ ನಡೆಸುತ್ತಿದೆ. ನನ್ನ ಕ್ಷೇತ್ರದಲ್ಲಿಯೇ 20 ಸಾವಿರ ನಕಲಿ ಮತದಾರರು ಸೃಷ್ಟಿಸಿದ್ದಾರೆಂದರೆ ಚಾಮುಂಡಿ  ಸೇರಿದಂತೆ ಇತರೆ ಕ್ಷೇತ್ರದಲ್ಲಿ ಇನ್ನೇಷ್ಟು ನಕಲಿ ಮತದಾರರಿಬಹುದು ಆತಂಕ ವ್ಯಕ್ತಪಡಿಸಿದರು.

ನಕಲಿ ಮತದಾರರ ವಿರುದ್ಧ ಸಿಬಿಐ ತನಿಖೆಯಾಗಿ ತಪ್ಪಿತಸ್ಥರನ್ನು ಜೈಲಿಗಟ್ಟಬೇಕೆಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಪಾಲಿಕೆ ಸದಸ್ಯ ಸುನೀಲ್, ಸೋಮಶೇಖರ್ ಮತ್ತಿತರರು ಶಾಸಕರಿಗೆ ಸಾಥ್ ನೀಡಿದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: