ಪ್ರಮುಖ ಸುದ್ದಿಮೈಸೂರುಸಿಟಿ ವಿಶೇಷ

ಮೈಸೂರಿನಲ್ಲಿ ಹೆಚ್ಚಾಗಿದೆ ಅಡ್ಡಾದಿಡ್ಡಿ ಪಾರ್ಕಿಂಗ್: ನೋಡಿಯೂ ನೋಡದಂತಿರುವ ಪೊಲೀಸರು

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸುಗಮ ಸಂಚಾರಕ್ಕಾಗಿ ಎಂ-ಟ್ರ್ಯಾಕ್ ವ್ಯವಸ್ಥೆ ಜಾರಿಯಾಗಿರುವ ಬಗ್ಗೆ ಎಲ್ಲರಿಗೂ ತಳಿದಿರಬಹುದು. ಆದರೆ ಈ ವ್ಯವಸ್ಥೆಯ ಪರಿಣಾಮಕಾರಿ ಅನುಷ್ಠಾನವಾಗದೆ ಜನರು ಕಿರಿಕಿರಿ ಅನುಭವಿಸುವಂತಾಗಿದೆ.

ಮೈಸೂರಿನಲ್ಲಿ ಟ್ರಾಫಿಕ್ ಸಮಸ್ಯೆ ಅಷ್ಟಾಗಿ ಇಲ್ಲದಿರಬಹುದು. ಭವಿಷ್ಯದ ದೃಷ್ಟಿಯಿಂದ ಈ ಹಿಂದಿನ ಮೈಸೂರು ನಗರ ಪೊಲೀಸ್ ಆಯುಕ್ತರಾದ ಡಾ.ಎಂ.ಎ.ಸಲೀಂ ಅವರು ಈ ವ್ಯವಸ್ಥೆ ಜಾರಿ ಬಗ್ಗೆ ಚಿಂತಿಸಿ ನಿರ್ಧಾರ ತೆಗೆದುಕೊಂಡಿದ್ದರು. ಆದರೆ ಈ ಉದ್ದೇಶದ ಅರ್ಧವನ್ನೇ ಬುಡಮೇಲು ಮಾಡುವಂತೆ ಕೆಲವು ವಾಹನ ಸವಾರರು ನಡೆದುಕೊಳ್ಳುತ್ತಿದ್ದು, ಕಂಡಕಂಡಲ್ಲಿ ವಾಹನಗಳನ್ನ ನಿಲ್ಲಿಸಿಕೊಂಡು ಇತರೆ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಕಿರಿ-ಕಿರಿ ಉಂಟುಮಾಡುತ್ತಿದ್ದಾರೆ.

ಇದರಿಂದ ಮೈಸೂರಿನ ಅಂದ ನೋಡಲು ಬರುವ ಪ್ರವಾಸಿಗರಿಗೂ ತಪ್ಪುಸಂದೇಶ ರವಾನೆಯಾಗುತ್ತಿದೆ. ಮುಖ್ಯವಾಗಿ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹಲವು ರಸ್ತೆ, ವೃತ್ತಗಳಲ್ಲಿ ಅಡ್ಡಾ-ದಿಡ್ಡಿ ವಾಹನ ನಿಲ್ಲಿಸಿದ್ದರೂ ಪೊಲೀಸರು ನೋಡಿಯೂ ನೋಡದವರಂತೆ ವರ್ತಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನೋ-ಪಾರ್ಕಿಂಗ್ ಇದ್ರು ಡೋಂಟ್ ಕೇರ್…

ಎಂ-ಟ್ರ್ಯಾಕ್ ಜಾರಿ ಮಾಡಿರುವ ಉದ್ದೇಶವೇ ವಾಹನ ಸಂಚಾರ ಸುಗಮಗೊಳಿಸಲೆಂದು. ಆದರೆ ಹಲವು ಸವಾರರು ಪ್ರಮುಖ ವೃತ್ತ ಹಾಗೂ ರಸ್ತೆಗಳ ಅಂಚಿನಲ್ಲೇ 10-20 ನಿಮಿಷಗಳ ಕಾಲ ವಾಹನ ನಿಲ್ಲಿಸುತ್ತಿದ್ದರೂ ಪೊಲೀಸರು ಕಂಡೂ ಕಾಣದಂತಿರುವುದು ಸಾರ್ವಜನಿರ ಗಮನಕ್ಕೆ ಬಂದಿದೆ. ತಮಗೆ ಅನುಕೂಲಕರ ಕೆಲಸಕ್ಕಾಗಿ ಹೀಗೆ ವಾಹನ ನಿಲುಗಡೆ ಮಾಡುತ್ತಿರುವುದು ಪಾದಚಾರಿಗಳು ಹಾಗೂ ಇತರೆ ವಾಹನ ಸವಾರರ ಸಂಚಾರಕ್ಕೆ ತೊಂದರೆಯಾಗಿ ಪರಿಣಮಿಸಿದೆ.

ನಗರದ ಕೆ.ಆರ್ ವೃತ್ತದಿಂದ ಬಸ್ ನಿಲ್ದಾಣದ ಕಡೆಗೆ ಬರುವ ಮಾರ್ಗ, ಮೈಸೂರು ನಗರ ಪಾಲಿಕೆ ಮುಂಭಾಗ, ಪಾಠಶಾಲಾ ಜಂಕ್ಷನ್, ಅರಮನೆ ವೃತ್ತ ಇಲ್ಲೆಲ್ಲವೂ ನೋ-ಪಾರ್ಕಿಂಗ್ ಬೋರ್ಡ್ ಗಳಿದ್ದರೂ ಅಲ್ಲಿಯೇ ಜೀಪ್, ಕಾರು, ಆಟೊ ಮತ್ತು ಇತರೆ ವಾಹನಗಳನ್ನು ನಿಲ್ಲಿಸಿಕೊಂಡು ಕಾಲ ಕಳೆಯುತ್ತಿರುವುದು ನಿತ್ಯ ಕಂಡುಬರುವ ದೃಶ್ಯವಾಗಿದೆ.

ಆದರೆ ದೇವರಾಜ ಸಂಚಾರಿ ಠಾಣಾ ವ್ಯಾಪ್ತಿಗೆ ಬರುವ ಈ ಸ್ಥಳಗಳಲ್ಲೆಲ್ಲ ಪೊಲೀಸರು ಮಾತ್ರ ಏನನ್ನು ಕೇಳದೆ ಮೌನ ವಹಿಸಿರೋದು ಮಾತ್ರ ಬೇಸರವಾಗುತ್ತಿದೆ ಅಂತಾರೆ ಸ್ಥಳೀಯ ಪಾದಚಾರಿಗಳು.

ಹೆಚ್.ಡಿ.ಕೋಟೆ ಕಡೆಯ ವಾಹನಗಳ ಹಾವಳಿ:

ನೋ ಪಾರ್ಕಿಂಗ್ ನಲ್ಲಿ ವಾಹನಗಳನ್ನ ನಿಲ್ಲಿಸೋದೆ ತಪ್ಪು. ಆದರೆ ಇಲ್ಲಿ ವಾಹನಗಳನ್ನ 30ನಿಮಿಷದ ವರೆಗೂ ನಿಲ್ಲಿಸಿಕೊಂಡು ಕೋಟೆ-ಕೋಟೆ ಎಂದು ಕೂಗುತ್ತಾರೆ. ಇಲ್ಲಿಂದಲ್ಲೇ ನಿತ್ಯವೂ ಎಚ್.ಡಿ.ಕೋಟೆಗೆ ಈ ಖಾಸಗಿ ಜೀಪ್-ಗಳು ಸೀಟ್ ಲೆಕ್ಕದಲ್ಲಿ ಜನರನ್ನ ತುಂಬಿಸಿಕೊಂಡು ಹೋಗುವುದರಿಂದ ಈ ಪದಗಳು ಆಗಿಂದ್ದಾಗೆ ಕಿವಿಗೆ ಬೀಳ್ತಾ ಇರ್ತಾವೆ. ಪೊಲೀಸರು ಮಾತ್ರ ಇವರ ಪಕ್ಕದಲ್ಲೇ ನಿಂತಿದ್ದರೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ.

ರಾಜ್ಯ ಸಾರಿಗೆ ಸಂಸ್ಥೆಗೂ ಲಾಸ್:

ಖಾಸಗಿಯವರ ಅಬ್ಬರದಿಂದ ಸರ್ಕಾರಿ ಸ್ವಾಮ್ಯದ ಕೆ.ಎಸ್.ಆರ್.ಟಿ.ಸಿ.ಗೆ ಹೊಡೆತ ಬಿದ್ದಿದೆ. ಇಲ್ಲಿ ನಿತ್ಯವೂ ಸಾವಿರಾರು ಜನ ಎಚ್.ಡಿ.ಕೋಟೆಗೆ ಹೋಗ್ತಾರೆ. ಆದರೆ ಈ ಮಾರ್ಗಕ್ಕೆ ಇರೋದು ಕೆಲವು ಬಸ್ ಗಳು ಮಾತ್ರ. ಇದರಿಂದ ಖಾಸಗಿ ಜೀಪ್ ಗಳು ಇದರ ಲಾಭ ಪಡೆದಿವೆ. ಜೊತೆಗೆ ರಸ್ತೆಯಲ್ಲೇ ನಿಲ್ಲಿಸಿ ಪ್ರಯಾಣಿಕರನ್ನು ಪಿಕಪ್ ಮಾಡುತ್ತಾ ಸಂಚಾರಕ್ಕೂ ತೊಂದರೆ ಕೊಡುತ್ತಿವೆ.

ತಕ್ಷಣ ಕ್ರಮ ಜಾರಿ: ಸಂಚಾರ ವಿಭಾಗದ ಡಿಸಿಪಿ ರುದ್ರಮುನಿ

ನಗರದಲ್ಲಿ ನೋ ಪಾರ್ಕಿಂಗ್ ನಲ್ಲಿ ವಾಹನ ನಿಲುಗಡೆಯ ಬಗ್ಗೆ ನಿಮ್ಮಿಂದ ಮಾಹಿತಿ ಬಂದಿದೆ. ನಾನೂ ಈ ಕೂಡಲೇ ಆ ವ್ಯಾಪ್ತಿಯ ಇನ್ಸ್ಪೆಕ್ಟರ್ ಗೆ ತಿಳಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆದೇಶ ನೀಡುತ್ತೇನೆಂದು ‘ಸಿಟಿಟುಡೆ’ ಜೊತೆ ಮಾತನಾಡಿದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ರುದ್ರಮುನಿ ಅವರು ತಿಳಿಸಿದ್ದಾರೆ.

ಜನಸಾಮಾನ್ಯರ, ಪ್ರವಾಸಿಗರ ಹಾಗೂ ವಾಹನ ಸವಾರರ ಹಿತದೃಷ್ಠಿಯಿಂದ ನಿಲುಗಡೆ ನಿಷೇಧವಿರುವಲ್ಲಿ ವಾಹನ ನಿಲುಗಡೆಗೆ ಮಾಡಲು ಪೊಲೀಸರು ಅವಕಾಶ ನೀಡಬಾರದು ಎಂಬುದೇ ‘ಸಿಟಿಟುಡೆ’ ಆಶಯ. ಈ ವರದಿ ಬಳಿಕವಾದರೂ ನೋ-ಪಾರ್ಕಿಂಗ್ ನಲ್ಲಿ ವಾಹನಗಳು ನೋ-ಪಾರ್ಕ್ ಆಗ್ತಾವಾ..? ಸಂಚಾರ ಕಿರಿಕಿರಿ ತಪ್ಪುತ್ತದಾ..? ಕಾದು ನೋಡಬೇಕಿದೆ.

~ ಸುರೇಶ್ ಎನ್.

img-20161109-wa0015-web

Leave a Reply

comments

Related Articles

error: