ಮೈಸೂರು

ಪತ್ನಿ ಅಗಲಿಕೆಯಿಂದ ನೊಂದು ಪತಿ ಆತ್ಮಹತ್ಯೆ

ಪತ್ನಿಯ ಅಕಾಲಿಕ ಸಾವಿನಿಂದ ಮನನೊಂದ ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆಯೊಂದು ಸಂಭವಿಸಿದೆ. ಮೈಸೂರಿನ ಕೂರ್ಗಳ್ಳಿ ನಿವಾಸಿ ಸ್ವಾಮಿಗೌಡ ಅವರ ಮಗ ಲೋಕೇಶ್ (43) ಎಂಬುವರೇ ಆತ್ಮಹತ್ಯೆಗೆ ಶರಣಾದವರು.

ಮೂಲತಃ ಮೈಸೂರು ತಾಲೂಕು ಇಲವಾಲ ಹೋಬಳಿ ಆನಂದೂರು ಗ್ರಾಮದವರಾದ ಲೋಕೇಶ್ ಬೆಮೆಲ್ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದ ನೌಕರನಾಗಿ ಕೆಲಸ ಮಾಡುತ್ತಿದ್ದು, ಮಕ್ಕಳ ವಿದ್ಯಾಭ್ಯಾಸದ ಉದ್ದೇಶದಿಂದ ಕೂರ್ಗಳ್ಳಿಯಲ್ಲಿ ವಾಸವಾಗಿದ್ದರು. ನ.1 ರಂದು ಪತ್ನಿ ಲಕ್ಷ್ಮಮ್ಮ ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಅಗಲಿಕೆಯ ವೇದನೆಯನ್ನು ತಾಳಲಾರದೆ ಲೋಕೇ‍ಶ್ ನ.3 ರಂದು ಸಂಜೆ 5 ಗಂಟೆ ವೇಳೆ ಆನಂದೂರಿನ ತಮ್ಮ ತೋಟದ ಬಳಿ ವಿಷ ಸೇವಿಸಿ ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ರಾತ್ರಿ 9 ಗಂಟೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪತಿ ಪತ್ನಿಯರಿಬ್ಬರೂ ಸಾವನ್ನಪ್ಪಿರುವುದರಿಂದ ದಂಪತಿಯ ಇಬ್ಬರು ಪುತ್ರರು ಅನಾಥರಾಗಿದ್ದು, ಅವರ ಸಂಬಂಧಿಕರು ರೋಧಿಸುತ್ತಿದ್ದ ದೃಶ‍್ಯ ಹೃದಯ ಕಲಕುವಂತಿತ್ತು. ಇಬ್ಬರು ಮಕ್ಕಳು 9 ನೇ ತರಗತಿ ಮತ್ತು ಪಿಯುಸಿ ಓದುತ್ತಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡಿರುವ ಇಲವಾಲ ಪೊಲೀಸರು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಇಂದು ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಕುಟುಂಬಕ್ಕೆ ಒಪ್ಪಿಸಿದರು.

Leave a Reply

comments

Related Articles

error: