ಪ್ರಮುಖ ಸುದ್ದಿಮೈಸೂರು

ಮೈಸೂರಿನಲ್ಲಿ ಭಾರತ-ಶ್ರೀಲಂಕಾ ಪ್ಯಾರಾ-ವಾಲಿಬಾಲ್ ಪಂದ್ಯಾವಳಿ ನ.12ರಂದು

ಪ್ಯಾರಾ ಒಲಂಪಿಕ್ ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ನ.12 ಮತ್ತು 13 ರಂದು ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಸೌಹಾರ್ದಯುತ ಪ್ಯಾರಾ – ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಫೆಡರೇಷನ್ ಅಧ್ಯಕ್ಷ ಹೆಚ್. ಚಂದ್ರಶೇಖರ್ ತಿಳಿಸಿದರು.

ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡನೇ ಬಾರಿಗೆ ಮೈಸೂರಿನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳ ವಾಲಿಬಾಲ್ ಪಂದ್ಯಾವಳಿ ನಡೆಯುತ್ತಿದ್ದು, ನ.12 ರಿಂದ ಆರಂಭವಾಗುವ ಈ ಪಂದ್ಯಾವಳಿ 5 ಸೆಟ್ ಗಳನ್ನು ಒಳಗೊಂಡಿದ್ದು, ಅಂತಾರಾಷ್ಟ್ರೀಯ ನಿಯಮಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.

ಪಂದ್ಯಾವಳಿ ಅಂದು ಮ. 2 ಗಂಟೆಗೆ ಪ್ರಾರಂಭವಾಗಲಿದ್ದು, ಶಾಸಕ ಎಂ.ಕೆ. ಸೋಮಶೇಖರ್ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಿ. ರಂದೀಪ್, ಯುವ ಸಬಲೀಕರಣ ಮತ್ತು ಕ್ರೀಡಾ ಪ್ರಾಧಿಕಾರದ ನಿರ್ದೇಶಕ ಅನುಪಮ್ ಅಗರ್ವಾಲ್, ಐಎಎಸ್ ಅಧಿಕಾರಿ ಪ್ರಭಾಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚೆನ್ನಣ್ಣನವರ್, ಜಿಪಂ ಅಧ‍್ಯಕ್ಷೆ ನಯೀಮಾ ಸುಲ್ತಾನ್, ಫೆಡರೇಶನ್ ಸಂಸ್ಥಾಪಕ ಮಹದೇವ್ ಸೇರಿದಂತೆ ಇತರರು ಉಪಸ್ಥಿತರಿರುತ್ತಾರೆ ಎಂದರು.

ಮೈಸೂರಿನಲ್ಲಿ ಜರುಗುವ ಪ್ಯಾರಾ – ವಾಲಿಬಾಲ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಶ್ರೀಲಂಕಾ ತಂಡ ನ.11 ರಂದು ಮೈಸೂರಿಗೆ ಆಗಮಿಸಿ ಅಭ್ಯಾಸ ಮಾಡಲಿದೆ. ಅಂದು ಭಾರತ ತಂಡದ ಆಟಗಾರರು ಸಹ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ನ.12 ರಂದು ಮೊದಲ ಪಂದ್ಯ, ನ.13 ರಂದು ಎರಡನೇ ಪಂದ್ಯ ನಡೆಯಲಿವೆ. ಈ ಪಂದ್ಯಾವಳಿಯ ಐವರು ರೆಫರಿಗಳು ಕಾರ್ಯನಿರ್ವಹಿಸಲಿದ್ದಾರೆ. ಭಾರತದ ವಾಲಿಬಾಲ್ ತಂಡದಲ್ಲಿ 13 ಮಂದಿ ಆಟಗಾರರಿದ್ದು, ಇದರಲ್ಲಿ 7 ಮಂದಿ ಕರ್ನಾಟಕದ ಆಟಗಾರರಿರುವುದು ಹೆಮ್ಮೆಯ ಸಂಗತಿ. ತಂಡವನ್ನು ಹಾಸನ ಮೂಲದ ನಿಶಾಂತ್ ಮುನ್ನಡೆಸಲಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದಲ್ಲದೇ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಮುಂದಿನ ಡಿ 16-18 ರವರೆಗೆ ಪುರುಷರ 6 ನೇ ಹಿರಿಯರ ಪ್ಯಾರಾ – ವಾಲಿಬಾಲ್ ಪಂದ್ಯಾವಳಿಯು ಸಹ ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ದೇಶದ 15 ರಾಜ್ಯಗಳ 225 ಮಂದಿ ಆಟಗಾರರು ಭಾಗವಹಿಸಲಿದ್ದು, ಪಂದ್ಯಾವಳಿಯಲ್ಲಿ ಗೆಲುವು ಪಡೆದ ಮೊದಲ ತಂಡಕ್ಕೆ ಪ್ರಥಮ ಬಹುಮಾನ 1 ಲಕ್ಷ ರೂ. 2 ನೇ  ಬಹುಮಾನ 50 ಸಾವಿರ ರೂ. ಹಾಗೂ 3 ನೇ ತಂಡಕ್ಕೆ 25 ಸಾವಿರ  ಬಹುಮಾನ  ನೀಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ಯಾರಾ ವಾಲಿಬಾಲ್ ಫೆಡರೇಷನ್ ಸಿಇಓ ರಿತೇಶ್ ಅಗರ್ವಾಲ್, ಉಪಾಧ್ಯಕ್ಷ ಎನ್. ಮಂಜುನಾಥ್, ಆಕಾಶ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ. ಸುರೇಶ್, ಎಸ್ ಬಿಎಂ ಮಂಜು, ಸುರೇಶ್ ಕುಮಾರ್, ಆನಂದ್ ಹಾಜರಿದ್ದರು.

Leave a Reply

comments

Related Articles

error: