ಮೈಸೂರು

ಗೂಂಡಾ ಕಾಯ್ದೆಯಡಿ ನಾಲ್ವರ ಬಂಧನ

ಎಚ್ಚರಿಕೆ ನೀಡಿದ್ದರೂ ಕಾನೂನುಬಾಹಿರ ಕೃತ್ಯಗಳನ್ನು ಮುಂದುವರೆಸಿದ್ದ ಹುಣಸೂರು ಪಟ್ಟಣದ ನಾಲ್ವರು ರೌಡಿ ಶೀಟರ್ ಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅನಿಲ್ ಕುಮಾರ್ (37), ಪಿಎಫ್ಐ ತಾಲೂಕು ಅಧ್ಯಕ್ಷ ಇಪ್ ಜೂರ್ ರೆಹಮಾನ್ ಷರೀಫ್ (37), ಚಾಲಕ ಸುನಿಲ್ ಅಲಿಯಾಸ್ ಪಾಪು (26) ಮತ್ತು ಸೈಯದ್ ಯೂನಿಸ್ (37) ಬಂಧಿತ ರೌಡಿ ಶೀಟರ್ ಗಳು.

ಹುಣಸೂರು ಪಿಐ ಧರ್ಮೇಂದ್ರ, ಜಿಲ್ಲಾ ಅಪರಾಧ ವಿಭಾಗದ ಪಿಐ ಮಹೇಶ್ ಕುಮಾರ್ ನೇತೃತ್ವದಲ್ಲಿ ಬುಧವಾರ ಈ ನಾಲ್ವರನ್ನೂ ಬಂಧಿಸಿದ್ದು, ಸುನಿಲ್, ಸೈಯದ್ ಯೂನಿಸ್ ರನ್ನು ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.

ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ಕಾನೂನು ಬಾಹಿರ ಕೃತ್ಯ ಮುಂದುವರೆಸಿದ್ದ ಈ ನಾಲ್ವರು ರೌಡಿಶೀಟರ್ ಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಬಂಧನದ ಆಜ್ಞೆ ಹೊರಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚೆನ್ನಣ್ಣನವರ್ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳು ಅಂಗೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಇವರನ್ನು ಬಂಧಿಸಲಾಗಿದ್ದು, ಇವರ ಸಹಚರರ ವಿರುದ್ಧವೂ ಗೂಂಡಾ ಕಾಯ್ದೆ, ಗಡಿಪಾರು ಕಾಯ್ದೆ ಅನ್ವಯ ಕಠಿಣ ಕ್ರಮ ಜರುಗಿಸಲು ಜಿಲ್ಲಾ ಪೊಲೀಸರು ಮುಂದಾಗಿದ್ದಾರೆ.

ಸಮಾಜಘಾತುಕರ ಬಗ್ಗೆ ಮಾಹಿತಿ ನೀಡಿ

ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಅಕ್ರಮ ಮರಳು ಗಣಿಗಾರಿಕೆ, ಕ್ರಿಕೆಟ್ ಬೆಟ್ಟಿಂಗ್, ಜೂಜಾಟ, ಅಕ್ರಮ ಮದ್ಯ ಮಾರಾಟ, ಮಾದಕ ದ್ರವ್ಯ ವಸ್ತುಗಳ ಮಾರಾಟ, ಕೋಮುಗಲಭೆ, ಜಾತಿ ಸಂಘರ್ಷಕ್ಕೆ ಪ್ರಚೋದನೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗುವರ ಬಗ್ಗೆ ಸಾರ್ವಜನಿಕರು ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ಕೋರಿದೆ.

Leave a Reply

comments

Related Articles

error: