ಪ್ರಮುಖ ಸುದ್ದಿಮೈಸೂರು

ನ.24-26 : 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಡಲಾಗಿದೆ ಭೂರೀ ಭೋಜನೆ ವ್ಯವಸ್ಥೆ

ಮೈಸೂರು, ನ.6:-  ನವೆಂಬರ್ 24 ರಿಂದ 26 ರವರೆಗೆ ನಡೆಯಲಿರುವ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಿಸಲು ಮೈಸೂರು ಜಿಲ್ಲೆ ಸಜ್ಜುಗೊಳ್ಳುತ್ತಿದ್ದು, ಕಾರ್ಯಕ್ರಮದ ರೂಪುರೇಷೆ ಹಾಗೂ ವಿವಿಧ ಸಮಿತಿಗಳ ಸಿದ್ಧತೆ ಕುರಿತಂತೆ ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಸರ್ಕಾರಿ ಅತಿಥಿಗೃಹದಲ್ಲಿ ಸಭೆ ನಡೆಸಲಾಯಿತು.

ಭಾನುವಾರ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು ಈಗಾಲೇ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಕಾರ್ಯಕ್ರಮದ ಆಯೋಜನೆಗೆ 8 ಕೋಟಿ ರೂ ಬಿಡುಗಡೆ ಮಾಡುವಂತೆ ಕೋರಲಾಗಿದೆ. ಸಮಿತಿಗಳ ಮುಖ್ಯಸ್ಥರು ಕ್ರಿಯಾಯೋಜನೆಗಳನ್ನು ಸಿದ್ಧಪಡಿಸಿಕೊಂಡು ಅನುದಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವಂತೆ ತಿಳಿಸಿದರು. ವಸತಿ, ಸಾರಿಗೆ ಹಾಗೂ ಆಹಾರ ಸಮಿತಿಯ ಕೆಲಸಗಳು ಹೆಚ್ಚು ಮಹತ್ವದಾಗಿದ್ದು, ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳು ಹಾಗೂ ಸಾಹಿತಿಗಳು ವಾಸ್ತವ್ಯದ ಬಗ್ಗೆ ತಿಳಿದಿಕೊಳ್ಳಲು  ಬಸ್ ಹಾಗೂ ರೈಲ್ವೆ ನಿಲ್ದಾಣದ ಬಳಿ ಮಾಹಿತಿ ಕೇಂದ್ರ ಹಾಗೂ ಸಹಾಯವಾಣಿ ತೆರೆಯುವಂತೆ ತಿಳಿಸಿದರು. ವಾಸ್ತವ್ಯಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲಾ ಕಾಲೇಜುಗಳ ಮುಖ್ಯಸ್ಥರೊಂದಿಗೆ, ಹೋಟೆಲ್ ಮಾಲೀಕರೊಂದಿಗೆ ಸಭೆ ನಡೆಸಿ ತೀರ್ಮಾನಗಳನ್ನು ಕೈಗೊಳ್ಳಿ. ವಾಸ್ತವ್ಯದ ಸ್ಥಳದಿಂದ ವೇದಿಕೆಗೆ ಆಗಮಿಸಲು ಬೇಕಿರುವ ಸಾರಿಗೆ ವ್ಯವಸ್ಥೆಯನ್ನು ಸಹ ಅಚ್ಚುಕಟ್ಟಾಗಿ ಕಲ್ಪಿಸಿ.  ಹಿರಿಯ ಸಾಹಿತಿಗಳು ಹಾಗೂ ಗಣ್ಯರಿಗೆ ಸಮನ್ವಯ  ಅಧಿಕಾರಿ ನಿಯೋಜಿಸುವಂತೆ ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಅವರು ಮಾತನಾಡಿ. ಮೆರವಣಿಗೆ ಸಮಿತಿಯಿಂದ  ಸಮ್ಮೇಳನದ ಅಧ್ಯಕ್ಷರನ್ನು ಮಲ್ಲಿಗೆ ಹೂವಿನಿಂದ ಅಲಂಕರಿಸಿದ ರಥದಲ್ಲಿ ಕರೆತರಲು  ಯೋಜಿಸಲಾಗಿದೆ. 600 ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, 300 ಸ್ಥಳೀಯ ಕಲಾವಿದರಿಗೆ ಹಾಗೂ 300 ಹೊರ ಜಿಲ್ಲೆಯ ಕಲಾವಿದರಿಗೆ ಅವಕಾಶ  ನೀಡಲಾಗುವುದು. ಕಲಾವಿದರಿಗೆ ಸಂಭಾವನೆ ನಿಗದಿಪಡಿಸಬೇಕಿದೆ ಎಂದರು. ಶಾಲಾ ಕಾಲೇಜುಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ 5000 ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಪಿನಲ್ಲಿ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗುವುದು. ಇದಲ್ಲದೇ 200 ಮಹಿಳೆಯರು ಕಳಸ ಹೊತ್ತು ಮೆರವಣಿಗೆಯಲ್ಲಿ ಸಾಗಲಿದ್ದಾರೆ. ಸಿಂಗಾರಗೊಂಡ ಎತ್ತಿನಗಾಡಿ, ಅಟೋ ರಿಕ್ಷಾಗಳು, ಕುದುರೆ ಸಾರೋಟು, ಪೊಲೀಸ್ ಬ್ಯಾಂಡ್  ತಂಡಗಳು  ಭಾಗವಹಿಸಲಿದೆ ಎಂದರು. ಸಂಜೆ 6 ರಿಂದ 9 ರವರೆಗೆ 6 ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮುಖ್ಯ ವೇದಿಕೆಯಲ್ಲಿ 12 ಕಾರ್ಯಕ್ರಮ ಹಾಗೂ ಇನ್ನುಳಿದ ವೇದಿಕೆಗಳಲ್ಲಿ 75 ಕಾರ್ಯಕ್ರಮಗಳನ್ನು ಆಯೋಜಿಸಲಗುವುದು. ಕನ್ನಡ ನಾಡು, ನುಡಿ, ಕಲೆ, ಸಂಸ್ಕೃತಿ  ಕುರಿತಂತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಕನ್ನಡ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ದಸರಾ ಸಂದರ್ಭದಲ್ಲಿ ಅವಕಾಶ ದೊರೆಯದ ಕಲಾವಿದರಿಗೆ ಅವಕಾಶ ಕಲ್ಪಿಸಲು ಚಿಂತಿಸಲಾಗುವುದು ಎಂದರು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಡಾ.ಕಾ ರಾಮೇಶ್ವರಪ್ಪ ಅವರು ಮಾತನಾಡಿ 24 ರಿಂದ 26 ರವರೆಗೆ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ರುಚಿ ರುಚಿಯಾದ ಊಟ ಉಣಬಡಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಗಣ್ಯರಿಗೆ, ನೋಂದಣಿ ಮಾಡಿಕೊಂಡಿರುವವರಿಗೆ ಹಾಗೂ ಸಾರ್ವಜನಿಕರಿಗೆ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಊಟದ ವಿಧ ಮಾತ್ರ ಎಲ್ಲರಿಗೂ ಒಂದೇ ತರವಾಗಿರುತ್ತದೆ. ನವೆಂಬರ್ 24 ರಂದು ಬೆಳಿಗ್ಗೆ ಉಪಹಾರ- ಇಡ್ಲಿ, ವಡೆ, ಖಾರಪೊಂಗಲ್, ಕಾಫಿ/ಟೀ, ಮಧ್ಯಾಹ್ನದ ಊಟಕ್ಕೆ –ರಾಗಿಮುದ್ದೆ, ಉರುಳಿ ಕಟ್ಟು, ಕಜ್ಜಾಯ, ಬಾಳೆ ಹಣ್ಣು, ಮೆಂಥ್ಯ ಬಾತ್, ಅನ್ನಸಾಂಬರ್, ತಿಳಿಸಾರು, ಗಟ್ಟಿ ಮಜ್ಜಿಗೆ, ಹಪ್ಪಳ ಉಪ್ಪಿನಕಾಯಿ, ರಾತ್ರಿ ಊಟಕ್ಕೆ-ಪೂರಿ, ಸಾಗು, ಅಕ್ಕಿಪಾಯಸ, ಅನ್ನಸಾಂಬರ್, ತಿಳಿಸಾರು, ಗಟ್ಟಿ ಮಜ್ಜಿಗೆ, ಹಪ್ಪಳ ಉಪ್ಪಿನಕಾಯಿ, ನವೆಂಬರ್ 25 ರಂದು ಬೆಳಿಗ್ಗೆ ಉಪಹಾರ- ಉಪ್ಪಿಟ್ಟು, ಕೇಸರಿಬಾತ್, ಮಸಾಲೆವಡೆ ಕಾಫಿ/ಟೀ, ಮಧ್ಯಾಹ್ನದ ಊಟಕ್ಕೆ –ಚಪಾತಿ ಈರನಗೆರೆ ಬದನೆಕಾಯಿ ಪಲ್ಯ, ಹೋಳಿಗೆ, ತುಪ್ಪ, ಮೇಲುಕೋಟೆ ಪುಳಿಹೋಗರೆ,   ಅನ್ನಸಾಂಬರ್, ತಿಳಿಸಾರು, ಗಟ್ಟಿ ಮಜ್ಜಿಗೆ, ಹಪ್ಪಳ ಉಪ್ಪಿನಕಾಯಿ, ರಾತ್ರಿ ಊಟಕ್ಕೆ- ಸಿರಿಧಾನ್ಯ ಪಾಯಸ, ವೆಜ್ ಪಲಾವ್,  ಅನ್ನ-ಸೊಪ್ಪಿನಸಾಂಬರ್, ತಿಳಿಸಾರು, ಗಟ್ಟಿ ಮಜ್ಜಿಗೆ, ಹಪ್ಪಳ ಉಪ್ಪಿನಕಾಯಿ, ನವೆಂಬರ್ 26 ರಂದು ಬೆಳಿಗ್ಗೆ ಉಪಹಾರ- ಶಾವಿಗೆಬಾತ್ ಮತ್ತು ರೈಸ್‍ಬಾತ್ ಚಟ್ನಿ, ಕಾಫಿ/ಟೀ, ಮಧ್ಯಾಹ್ನದ ಊಟಕ್ಕೆ –ರಾಗಿ ರೊಟ್ಟಿ,ಜೋಳದ ರೊಟ್ಟಿ, ಅಕ್ಕಿ ರೊಟ್ಟಿ, ಮೈಸೂರು ಪಾಕ್, ಕಳ್ಳೆಹುಳ್ಳಿ, ಹುಚ್ಚಳ್ ಚಟ್ನಿ, ಬಿಸಿಬೇಳೆಬಾತ್,   ಅನ್ನಸಾಂಬರ್, ರಸಂ, ಗಟ್ಟಿ ಮಜ್ಜಿಗೆ, ಹಪ್ಪಳ ಉಪ್ಪಿನಕಾಯಿ, ರಾತ್ರಿ ಊಟಕ್ಕೆ- ವಾಂಗಿಬಾತ್, ರಾಯತಾ, ಲಡ್ಡು, ಅನ್ನಸಾಂಬರ್, ತಿಳಿಸಾರು, ಹಪ್ಪಳ ಉಪ್ಪಿನಕಾಯಿ, ನೀಡಲು ಯೋಜನೆ ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ವಿವಿಧ ಸಮಿತಿಗಳ ಮುಖ್ಯಸ್ಥರು ತಮ್ಮ ಸಮಿತಿಯಿಂದ ಮಾಡಿಕೊಂಡಿರುವ ಯೋಜನೆಗಳನ್ನು ವಿವರಿಸಿದರು.

ಸಭೆಯಲ್ಲಿ ಶಾಸಕ ವಾಸು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯಿಮಾ ಸುಲ್ತಾನ ನಜೀರ್ ಅಹಮದ್, ಮೈಸೂರು ಮಹಾನಗರಪಾಲಿಕೆ ಮಹಾಪೌರ ಎಂ.ಜೆ. ರವಿಕುಮಾರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ. ಧ್ರುವಕುಮಾರ್, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಹೆಚ್.ಎ. ವೆಂಕಟೇಶ್ ಜಿಲ್ಲಾಧಿಕಾರಿ ರಂದೀಪ್ ಡಿ, ಅಪರ ಜಿಲ್ಲಾಧಿಕಾರಿ ಟಿ ಯೋಗೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: