ಕರ್ನಾಟಕಮೈಸೂರು

ಕೆ.ಎಸ್.ಓ.ಯು ಹಗರಣದಲ್ಲಿ ಸಿಎಂ ಸಿದ್ದರಾಮಯ್ಯನವರು ಫಲಾನುಭವಿ : ಗೋ.ಮಧುಸೂದನ ಆರೋಪ

ಮೈಸೂರು,ನ.6 : ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಅಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ವಿಶ್ರಾಂತ ಕುಲಪತಿ ಪ್ರೊ.ರಂಗಪ್ಪ ನೇರ ಭಾಗಿದಾರರಾಗಿದ್ದು, ಮುಖ್ಯಮಂತ್ರಿಗಳ ದಿವ್ಯ ಮೌನವೇ ಇದಕ್ಕೆ ಸಾಕ್ಷಿಭೂತವೆಂದು ಮಾಜಿ ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ ಆರೋಪಿಸಿದರು.

ಶತಮಾನೋತ್ಸವ ಕಂಡ ರಾಜ್ಯದ ಹೆಮ್ಮೆಯ ಪ್ರತೀಕ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರೊ.ರಂಗಪ್ಪ ಮೊಗಲ್ ಸಾಮ್ರಾಜ್ಯದ ಕೊನೆ ದೊರೆ ಬಹದ್ದೂರು ಶಾ ನಂತೆ ಬಂದು ಎರಡು ವಿವಿಗಳನ್ನು ಗುಡಿಸಿ ಗುಂಡಾಂತರ ಮಾಡಿ, 3,25 ಲಕ್ಷ ವಿದ್ಯಾರ್ಥಿಗಳ ಭವಿಷ್ಯವನ್ನು ಮಣ್ಣುಪಾಲಾಗುವ ಆತಂಕಕ್ಕೆ ದೂಡಿದ್ದಾರೆ, ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಇಂತಹ ಬೃಹತ್ ಹಗರಣ ನಡೆದಿದ್ದು ಇದುವರೆಗೂ ಮುಖ್ಯಮಂತ್ರಿಗಳು ಎಲ್ಲಿಯೂ ತುಟಿ ಬಿಚ್ಚಿಲ್ಲ, ದೊಡ್ಡಗೌಡ್ರ ಸಂಬಂಧಿ ಎನ್ನುವ ಕಾರಣದಿಂದ ಪ್ರೊ.ರಂಗಪ್ಪನವರ ವಿರುದ್ಧ ಸಿಎಂ ಧ್ವನಿ ಎತ್ತದೆ ಹಗರಣವನ್ನು  ಪರೋಕ್ಷವಾಗಿ ರಕ್ಷಿಸಿಕೊಂಡು ಬರುತ್ತಿದ್ದಾರೆ,  ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದಷ್ಟೇ ಅಲ್ಲದೇ ಪ್ರೊ.ರಂಗಪ್ಪ ಅವರನ್ನು ರಾಜಕಾರಣಕ್ಕೆ ಅಮಂತ್ರಿಸಿರುವುದು ನಾಚಿಕೆಗೇಡು ಎಂದು ಸಿಎಂ ವಿರುದ್ಧ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಟೀಕಾ ಪ್ರಹಾರ ನಡೆಸಿದರು.

ವಿಶ್ವವಿದ್ಯಾಲಯ ಮುಳುಗಿಸಿದ್ದು ಆಯ್ತು ಇನ್ನೂ ರಾಜಕಾರಣ ! :

ಚಾಮರಾಜ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆಲುವು ಸಾಧಿಸಿ ನಾನೇ ಉನ್ನತ ಶಿಕ್ಷಣ ಸಚಿವನಾಗುವೆ ಎನ್ನುವ ರಂಗಪ್ಪನವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, ಶಿಕ್ಷಣ ಸಚಿವರಾದರೆ ಮುಂದೇ ಎಲ್ಲಾ ತಮ್ಮ ಹಗರಣಗಳನ್ನು ಮುಚ್ಚಿ ಹಾಕುವುದಕ್ಕೆ ನೆರವಾಗುವುದು ಎನ್ನುವ ಲೆಕ್ಕಚಾರದಲ್ಲಿದ್ದಾರೆ. ಇಂತಹವರ ವಿರುದ್ಧ ಚುನಾವಣೆ ನಿಲ್ಲುವುದಕ್ಕೂ ಅಭ್ಯರ್ಥಿಗಳು ಹಿಂದುಮುಂದು ನೋಡುವಂತಾಗಿದೆ ಅಂತಹ ದುಷ್ಟವ್ಯಕ್ತಿತ್ವ ಎಂದು ವಾಗ್ದಾಳಿ ನಡೆಸಿ, ವಿಶ್ವವಿದ್ಯಾನಿಲಯ ಮುಳುಗಿಸಿದ್ದಾಯ್ತು ಇನ್ನೂ ರಾಜಕಾರಣವೊಂದೆ ಉಳಿದಿರುವುದು ಎಂದು ವ್ಯಂಗ್ಯವಾಡಿದರು.

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಒಬ್ಬ ನಾಲಾಯಕ್, ತಮ್ಮ ಬಾಯಿ ತೀಟೆಗಾಗಿ  ಪ್ರೋಪೆಸರ್ ಗಳ ಹಾಗೂ ಉಪಕುಲಪತಿಗಳ ವಿರುದ್ಧ ಹೇಳಿಕೆ ನೀಡಿ ಚಪಲ ತೀರಿಸಿಕೊಳ್ಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ದೇವೇಗೌಡರದು ಪರ್ಟನರ್ ಶಿಫ್ ರಾಜಕಾರಣ ಇದುವರೆಗೂ ಈ ಇಬ್ಬರೂ ವಿವಿಯ ಹಗರಣದ ಬಗ್ಗೆ ಎಲ್ಲಿಯೂ ಧ್ವನಿ ಎತ್ತಿಲ್ಲ, ಪ್ರಮುಖರ ನಿರ್ಲಕ್ಷ್ಯ ಬೇಜವಾಬ್ದಾರಿತನದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಹೇಳಿದರು.

ಗಂಭೀರವಾಗಿ ಪರಿಗಣಿಸಿ :

ಕೆ.ಎಸ್.ಓ.ಯು ನಂತೆಯೇ ಮೈಸೂರು ವಿಶ್ವವಿದ್ಯಾಲಯವೂ ತಾಂತ್ರಿಕ ವಿಭಾಗದಲ್ಲಿ ಬೇನಾಮಿಯಾಗಿ ಆನ್ ಲೈನ್ ಕೋರ್ಸ್ ಗಳನ್ನು ನೆಡಸುತ್ತಿದ್ದು ಈ ಬಗ್ಗೆ ಈಗಾಗಲೇ ಯುಜಿಸಿ ಆಕ್ಷೇಪ ವ್ಯಕ್ತಪಡಿಸಿದೆ,ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಮುಂದೊಂದು ದಿನ ಮೈಸೂರು ವಿಶ್ವವಿದ್ಯಾನಿಲಯವು ಮುಚ್ಚಿಹೋಗುವುದರಲ್ಲಿ ಸಂಶಯವಿಲ್ಲವೆಂದು ಭವಿಷ್ಯ ನುಡಿದರು.

ವಿದೇಶಗಳಲ್ಲಿಯೂ ರಾಜ್ಯದ ಮಾನ ಹರಾಜು :

ಹಗರಣವು ರಾಜ್ಯಕಷ್ಟೇ ಸಿಮೀತವಾಗದೆ ನೆರೆ ದೇಶಗಳಾದ ಶ್ರೀಲಂಕಾ, ನೇಪಾಳ, ಬಾಂಗ್ಲಾ, ದುಬೈ ಅಮೆರಿಕಾ ಸೇರಿದಂತೆ ವಿದೇಶಗಳಲ್ಲಿಯೂ ವಿಶ್ವವಿದ್ಯಾನಿಲಯದ ಬೇನಾಮಿ ಕೋರ್ಸ್ ಗಳ ಕಬಂಧ ಬಾಹು ವ್ಯಾಪಿಸಿದೆ, ಕೆಲವೇ ದುಷ್ಟಕೂಟಗಳ ಅಕ್ರಮದಿಂದಾಗಿ ರಾಜ್ಯ ಮಾನ ವಿದೇಶಗಳಲ್ಲಿಯೂ ಹರಾಜಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬೇಡಿಕೆ :

ಕೆ.ಎಸ್.ಓಯು ಹಾಗೂ ಮೈಸೂರು  ವಿವಿಯಲ್ಲಿ ನಡೆದಿರುವ ಕೋಟ್ಯಾಂತರ ರೂಗಳ ಹಗರಣದ ಕೂಲಂಕುಷ ತನಿಖೆಗಾಗಿ ಸಿಬಿಐಗೆ ವಹಿಸುವಂತೆ ಕೇಂದ್ರ ಉನ್ನತ ಶಿಕ್ಷಣ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರದ ಮೂಲಕ ಒತ್ತಾಯಿಸಲಾಗಿದೆ. ಕೆ.ಎಸ್.ಓ.ಯ ವಿಶ್ವವಿದ್ಯಾಲಯದಲ್ಲಿ ಮಾನ್ಯತೆ ರದ್ದಾದ ಎಲ್ಲಾ ಕೋರ್ಸ್ ಗಳ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಹಿಂತಿರುಗಿಸಿ, ಹಗರಣವನ್ನು ಸಿಬಿಐ ತನಿಖೆಗೆ ವಹಿಸಿ, ತಪ್ಪಿತಸ್ಥರನ್ನು ಜೈಲಿಗಟ್ಟಬೇಕೆಂದು ಒತ್ತಾಯಸಿದ ಅವರು ನೊಂದ ವಿದ್ಯಾರ್ಥಿಗಳಿಗೆ ನ್ಯಾಯ ದೊರೆಯುವವರೆಗೂ ನಿರಂತರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: