ಪ್ರಮುಖ ಸುದ್ದಿಮೈಸೂರುಸಿಟಿ ವಿಶೇಷ

ಮೈಸೂರಿನಲ್ಲಿ ಕೋತಿ ಹಾವಳಿಯಿಂದ ಕಂಗೆಟ್ಟ ನಿವಾಸಿಗಳು; ಜನರ ಕೂಗಿಗೆ ಓಗೊಡುತ್ತಿಲ್ಲ ಮಹಾನಗರ ಪಾಲಿಕೆ

ಮೈಸೂರಿನಲ್ಲಿ ಕೋತಿಗಳ ಹಾವಳಿಯಿಂದ ನಗರದ ಜನರಿಗೆ ತೀವ್ರ ತೊಂದರೆಯಷ್ಟೇ ಅಲ್ಲದೆ, ಅವುಗಳ ಚೇಷ್ಟೆ ನಿಯಂತ್ರಣವೇ ಸಾಧ್ಯವಿಲ್ಲವೇನೊ ಎನ್ನುವ ಮನೋಭಾವ ಕಾಡುತ್ತಿದ್ದು. ಕೆಲವೊಂದು ಪ್ರದೇಶಗಳಲ್ಲಿ ಇವುಗಳ ಕಾಟದಿಂದ ಸಾಮಾನ್ಯ ಜನಜೀವನಕ್ಕೆ ಕುತ್ತು ಒದಗಿದೆ ಎನ್ನುವುದು ಹಲವಾರು ನಿವಾಸಿಗಳ ದೂರಾಗಿದೆ.

ಮಹಿಳೆಯರು ಮಕ್ಕಳು ನಿರ್ಭಯವಾಗಿ ಓಡಾಡುವಂತಿಲ್ಲ, ಮಾರುಕಟ್ಟೆಯಿಂದ ವಸ್ತುಗಳನ್ನು ತರುವುದು ದುಸ್ತರವಾಗುತ್ತಿದೆ. ಕೈಗೆ ಸಿಕ್ಕಿದ ವಸ್ತುಗಳನ್ನು ಅಪಹರಿಸಿ ಪರಾರಿಯಾಗುತ್ತಿರುವ ಕೋತಿ ಹಾವಳಿಗೆ ನಿಯಂತ್ರಣವೇ ಇಲ್ಲವೇ ಎನ್ನುವುದು ಅವರ ಪ್ರಶ್ನೆ?

‘ಸಿಟಿಟುಡೆ’ ಈಚೆಗೆ ನಡೆಸಿದ ನಗರ ಪ್ರದಕ್ಷಿಣೆಯಲ್ಲಿ ಮೈಸೂರಿನ ಹಲವಾರು ವಸತಿ ಬಡಾವಣೆಗಳಲ್ಲಿ ಕೋತಿ ಹಾವಳಿ ಸಮಸ್ಯೆಯ ಗಂಭೀರತೆಯನ್ನು ಅರಿಯಲು ಸಾಧ್ಯವಾಯಿತು. ಮೈಸೂರಿನ ಮಹಾನಗರಪಾಲಿಕೆ ಹಾಗೂ ಆರಣ್ಯ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ತೋರದೆ ಕೈಕಟ್ಟಿ ಕುಳಿತಿರುವುದಕ್ಕೂ ನಿವಾಸಿಗಳು ತೀವ್ರ ಆಕ್ರೋಶವ್ಯಕ್ತಪಡಿಸಿದ್ದಾರೆ.

web-monkey-1ಗಂಭೀರ ಸಮಸ್ಯೆಯಾದ ಕೋತಿ ಹಾವಳಿ :

ಇವುಗಳ ಹಾವಳಿಯು ಎಷ್ಟೊಂದು ಗಂಭೀರ ಸಮಸ್ಯೆಯಾಗಿದೆಯೆಂದರೆ ಮನೆಯಲ್ಲಿ ಚಾರ್ಜ್ ಗೆ ಹಾಕಿದ ಮೊಬೈಲ್ ಪೋನ್ ಗಳನ್ನು ಹೊತ್ತೊಯ್ಯುತ್ತಿವೆ. ಬಿಸಿಲಿಗೆ ಬಟ್ಟೆ ಒಣಗಿ ಹಾಕಿದರೆ ಎಲ್ಲೆಂದರಲ್ಲಿ ಕದ್ದು ಪರಾರಿಯಾಗುತ್ತವೆ. ಮಕ್ಕಳ ಆಟಿಕೆ, ಶಾಲಾ ಬ್ಯಾಗ್, ಟಿಫಿನ್ ಡಬ್ಬ ಯಾವುದನ್ನೂ ಬಿಡುತ್ತಿಲ್ಲ. ಅವುಗಳ ಕಾಟಕ್ಕೆ ಭಯಪಟ್ಟು ಮಕ್ಕಳು ಮನೆ ಹೊರಗೆ ಆಟವಾಡುವುದೇ ದುಸ್ತರವಾಗಿದೆ ಎನ್ನುವುದು ನಿವಾಸಿಗಳ ಅಳಲು.

ವಿದ್ಯಾರಣ್ಯಪುರಂ ನಿವಾಸಿ ಮಂಜುನಾಥ್ ಮಾತನಾಡಿ, ಕೋತಿಗಳು ಹಲವಾರು ದಿನಗಳಿಂದ ಪ್ರತಿನಿತ್ಯ ಮನೆಗೆ ದಾಳಿ ನಡೆಸಿ ಸಾಮಾನ್ಯ ಜೀವನಕ್ಕೆ ತೊಂದರೆಯುಂಟು ಮಾಡುತ್ತಿವೆ. ಮಹಡಿ ಮೇಲೆ ಬಟ್ಟೆಗಳನ್ನು ಒಣಗಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಮನೆಯ ಮೇಲೆ ಹತ್ತಿ ವಿಪರೀತ ಹಾವಳಿ ನಡೆಸುತ್ತವೆ. ಅಲ್ಲಿರುವ ಇಟ್ಟಿಗೆಗಳನ್ನು ಎತ್ತಿ ಬಿಸಾಡುತ್ತವೆ. ಇದರಿಂದ ಯಾವ ಸಮಯದಲ್ಲಿ ನಮ್ಮ ಮೇಲೆ ಇಟ್ಟಿಗೆ ಬೀಳುತ್ತವೇಯೋ ಎನ್ನುವ ಆತಂಕ ಹಾಗೂ ಭಯದಿಂದ ಜೀವನ ನಡೆಸುವಂತಾಗಿದೆ ಎನ್ನುವುದು ವಿದ್ಯಾರಣ್ಯಪುರಂನ ದೇವಮ್ಮನ ನುಡಿಗಳು.

ಮಹಾಪೌರರಿಗೆ ಪತ್ರ :

ಈ ಬಗ್ಗೆ ನಗರಸಭಾ ಸದಸ್ಯ ಎಂ.ವಿ. ರಾಮಪ್ರಸಾದ್ ಅವರು ಪ್ರತಿಕ್ರಿಯಿಸಿ ನನ್ನ ವಾರ್ಡಿನ ಬಹುತೇಕ ಭಾಗ ಕೋತಿಗಳ ಹಾವಳಿ ವಿಪರೀತವಾಗಿದ್ದು ನಿಯಂತ್ರಣಕ್ಕಾಗಿ ರಬ್ಬರ್ ಗುಂಡುಗಳನ್ನು ಹಾರಿಸಲಾಗುತ್ತಿತ್ತು. ಇತ್ತೀಚೆಗೆ ಅವುಗಳು ಇದಕ್ಕೂ ಜಗುತ್ತಿಲ್ಲ. ಈಗಾಗಲೇ ಸಮಸ್ಯೆಯ ಗಂಭೀರತೆ ತಿಳಿಸಲು ಹಲವಾರು ಬಾರಿ ಮಹಾಪೌರರಿಗೆ ಪತ್ರ ಬರೆಯಲಾಗಿದೆ. ಕೋತಿ ಹಾವಳಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ಪ್ರದರ್ಶಿಸಿದರು.

ನಗರದಲ್ಲಿರುವ ಕೋತಿ ಹಾವಳಿ ಸಮಸ್ಯೆಯನ್ನು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಗಮನಕ್ಕೆ ತರಲಾಗಿದೆ, ಅವುಗಳ ನಿಯಂತ್ರಣ ಹೇಗೆ ಎನ್ನುವುದೇ ತಿಳಿಯದಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ತತ್‍ಕ್ಷಣದಿಂದಲೇ ಕೋತಿಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕೋರಲಾಗಿದ್ದು ಈ ಬಗ್ಗೆ ಮಹಾನಗರ ಪಾಲಿಕೆಯೂ ನೇರವಾಗಿ ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಮಹಾಪೌರ ಬಿ.ಎಲ್. ಭೈರಪ್ಪ ಅಸಹಾಯಕತೆ ತೋರಿದರು.

ಕೋತಿಗಳ ನಿಯಂತ್ರಣಕ್ಕೆ ಬಳಸಲಾಗುತ್ತಿದ್ದ ಆವಿ ಗುಂಡುಗಳಿಗೂ ಅವು ಹೆದರುತ್ತಿಲ್ಲ. ಕೋತಿಗಳನ್ನು ಪಂಜರದಲ್ಲಿ ಬಂಧಿಸಿ ಎಂದು ಹಲವರು ಸಲಹೆ ನೀಡಿದ್ದು, ಇದು ನಮ್ಮ ಇಲಾಖೆ ವ್ಯಾಪ್ತಿಗೆ ಒಳಪಡುವುದಿಲ್ಲ. ವನ್ಯಜೀವಿ ಕಾಯ್ದೆಯಡಿ ಅವುಗಳನ್ನು ಬಂಧಿಸಿ ಅರಣ್ಯದಲ್ಲಿ ಬಿಡುಗಡೆಗೊಳಿಸಬೇಕು. ಈ ಕಾರ್ಯಾಚರಣೆ ನಡೆಸಲು ಕೇವಲ ಅರಣ್ಯ ಇಲಾಖೆಗೆ ಮಾತ್ರ ಹಕ್ಕಿದೆ. ಪ್ರಾಣಿಗಳನ್ನು ಬಂಧಿಸುವ ಹಾಗೂ ಘಾಸಿಗೊಳಿಸುವ ಹಕ್ಕು ಇಲಾಖೆಗಿಲ್ಲ ಎಂದು ಪಶುವೈದ್ಯ ಡಾ. ಸುರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಕರಿಕಾಳನ್ ಮಾತನಾಡಿ ಷೆಡ್ಯೂಲ್ 34 ಅಡಿಯಲ್ಲಿ ಪ್ರಾಣಿಗಳನ್ನು ಸಾಯಿಸುವುದು ಅಥವಾ ಬಂಧಿಸುವುದು ವನ್ಯಜೀವಿ ಸಂರಕ್ಷಣೆ ಕಾಯ್ದೆ ಸೆಕಷನ್ 11.1(ಬಿ) ಶಿಕ್ಷಾರ್ಹವಾಗಿದೆ. ಸಾರ್ವಜನಿಕರ ಜನಜೀವಕ್ಕೆ ಹಾನಿಯುಂಟಾಗುವ ಸಂದರ್ಭ ಪರಿಗಣಿಸಿ ವಿಶೇಷ ಷರತ್ತಿನ ಮೇಲೆ ವನ್ಯಜೀವಿ ಕಾವಲುಗಾರರ ಸಮಕ್ಷಮದಲ್ಲಿಯೇ ಕಾರ್ಯಾಚರಣೆ ನಡೆಸಿ ಅವುಗಳನ್ನು ಬಂಧಿಸಿ ಅರಣ್ಯ ಪ್ರದೇಶದಲ್ಲಿ ಬಿಡುಗಡೆಗೊಳಿಸಲು ಗ್ರಾಮಪಂಚಾಯ್ತಿ ಹಾಗೂ ಪೌರಾಡಳಿತಕ್ಕೆ ತುರ್ತು ಸಮಯದಲ್ಲಿ ಮಾತ್ರ ಇಲಾಖೆಯಿಂದ ಅನುಮತಿ ನೀಡಲಾಗುವುದು ಎಂದು ತಿಳಿಸಿದರು.

ರಾಜ್ಯಪಾಲ ವಜುಬಾಯಿ ವಾಲಾ ಅವರು ವಿಶ್ವ ಪ್ರಸಿದ್ಧ ನಾಡಹಬ್ಬ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆಯಲ್ಲಿಯೂ ತಾತ್ಕಾಲಿಕವಾಗಿ ಕೋತಿಗಳನ್ನು ಬೆದರಿಸಿ ಓಡಿಸಲಾಯಿತೇ ಹೊರತು ಅವುಗಳನ್ನು ಬಂಧಿಸಿರಲಿಲ್ಲ. ಕೋತಿಗಳ ಹಾವಳಿಯ ಬಗ್ಗೆ ಮಹಾನಗರ ಪಾಲಿಕೆಯಿಂದ ಇಲಾಖೆಗೆ ಯಾವುದೇ ದೂರು ಬಂದಿಲ್ಲ, ನಿವಾಸಿಗಳಿಂದ ಕೆಲವೊಂದು ದೂರವಾಣಿ ಕರೆಗಳು ಮಾತ್ರ ಬಂದಿವೆ. ಮಹಾನಗರ ಪಾಲಿಕೆಯಿಂದ ಸಮಸ್ಯೆ ನಿಯಂತ್ರಿಸಲು ಕೋರಿಕೆ ಬಂದರೆ ವನ್ಯಜೀವಿ ಕಾವಲುಗಾರರು ಕೋತಿಗಳನ್ನು ನಿಯಂತ್ರಿಸಲು ಸನ್ನದ್ದಾಗಿದ್ದಾರೆ ಎಂದು ತಿಳಿಸಿದರು.

ಕೋತಿ ಸಮಸ್ಯೆ ಜಾಗತಿಕವಾ%e0%b2%b8%e0%b2%82%e0%b2%b8%e0%b2%a4%e0%b3%8d-%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%95%e0%b3%8a%e0%b2%a4%e0%b2%bf%e0%b2%97%e0%b2%b3%e0%b3%81ಗಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯ ಸಂಸತ್ ಭವನ ಹಾಗೂ ರಾಷ್ಟ್ರಪತಿ ಭವನದಲ್ಲಿಯೂ ಕೋತಿಗಳ ಹಾವಳಿಯಿಂದ ಜನಪ್ರತಿನಿಧಿಗಳೇ ಕಳೆದ ಹಲವಾರು ವರ್ಷಗಳಿಂದ ತೀವ್ರ ತೊಂದರೆಗೀಡಾಗಿದ್ದು ಹಾಗೂ ರಕ್ಷಣಾ ಪಡೆಯವರಿಗೆ ತಲೆನೋವಾಗಿದ್ದನ್ನು  ಇಲ್ಲಿ ಉಲ್ಲೇಖಿಸಬಹುದು.

Leave a Reply

comments

Related Articles

error: