ಕರ್ನಾಟಕಪ್ರಮುಖ ಸುದ್ದಿ

ಲಾರಿ ಮುಷ್ಕರ ಮುಂದೂಡಿಕೆ

ರಾಜ್ಯ(ಬೆಂಗಳೂರು)ನ.6:- ಆರ್‌ಟಿಓ ಅಧಿಕಾರಿಗಳಿಂದ ಎದುರಾಗುವ ಕಿರುಕುಳ ತಪ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಇದೇ 10 ರಿಂದ ರಾಜ್ಯಾದ್ಯಂತ ಲಾರಿ ಮುಷ್ಕರ ನಡೆಸಲು ಮುಂದಾಗಿದ್ದ ಲಾರಿ ಮಾಲೀಕರ ಸಂಘಟನೆಗಳು ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಿವೆ.

ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಅವರೊಂದಿಗೆ ರಾಜ್ಯ ಮಾಲೀಕರ ಸಂಘಟನೆಗಳ ಒಕ್ಕೂಟದ ವಿವಿಧ ಲಾರಿ ಮಾಲೀಕರ ಸಂಘಟನೆಗಳ, ಪದಾಧಿಕಾರಿಗಳು ನಡೆಸಿದ ಸಭೆ ಫಲಪ್ರದವಾದ ಹಿನ್ನೆಲೆಯಲ್ಲಿ ಒಂದು ತಿಂಗಳ ಮಟ್ಟಿಗೆ ಮುಷ್ಕರವನ್ನು ಮುಂದೂಡಲು ಲಾರಿ ಮಾಲೀಕರ ಸಂಘ ನಿರ್ಧರಿಸಲಿದೆ. ಆರ್ ಟಿಓ ಅಧಿಕಾರಿಗಳಿಂದ ಕಿರುಕುಳ, ಟೋಲ್ ಸೇರಿದಂತೆ ವಿವಿಧ ಲಾರಿ ಮಾಲೀಕರ ಬೇಡಿಕೆ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಿ ಬಗೆಹರಿಸುವುದಾಗಿ ಸಾರಿಗೆ ಸಚಿವ ರೇವಣ್ಣ ಲಾರಿ ಮಾಲೀಕರ ಸಂಘಟನೆಗಳ ಪದಾಧಿಕಾರಿಗಳಿಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಸರ್ಕಾರ ನೀಡಿರುವ ಭರವಸೆಯಂತೆ ಒಂದು ತಿಂಗಳೊಳಗಾಗಿ ಬೇಡಿಕೆಗಳನ್ನು ಈಡೇರಿಸದರೆ ಮುಷ್ಕರ ನಡೆಸುವುದಿಲ್ಲ. ಇಲ್ಲದಿದ್ದರೆ ಅನಿವಾರ್ಯವಾಗಿ ಬೇಡಿಕೆ ಈಡೇರಿಕೆಗಾಗಿ ಒಂದು ತಿಂಗಳ ಬಳಿಕ ರಾಜ್ಯಾದ್ಯಂತ ಮುಷ್ಕರವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರಾಜ್ಯ ಮಾಲೀಕರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ. ಚೆನ್ನಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಗೋಪಾಲ ಸ್ವಾಮಿ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಕೆಲ ನೀತಿಗಳಿಂದಾಗಿ ಲಾರಿ ಮಾಲೀಕರು ಸಂಕಷ್ಟ ಎದುರಿಸುವಂತಾಗಿದೆ. ಇದರಿಂದ ಸಮಸ್ಯೆಗೆ ಸಿಲುಕಿದ್ದಾರೆ. ಅಲ್ಲದೆ ಇತ್ತೀಚೆಗೆ ಜಿಎಸ್‌ಟಿ ದರ ಏರಿಕೆಯಿಂದ ಮತ್ತಷ್ಟು ಸಮಸ್ಯೆಗೆ ಸಿಲುಕುವಂತಾಗಿದೆ. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹುಡುಕುವಂತೆ ಸಾರಿಗೆ ಸಚಿವರಿಗೆ ಮನವಿ ಮಾಡಿದ್ದು ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ತಾತ್ಕಾಲಿಕವಾಗಿ ಮುಷ್ಕರವನ್ನು ಮುಂದೂಡಲಾಗಿದೆ ಎಂದಿದ್ದಾರೆ.

ಹೆಚ್.ಎಂ. ರೇವಣ್ಣರೊಂದಿಗೆ ನಡೆದ ಸಭೆಯಲ್ಲಿ ಬೆಂಗಳೂರು ನಗರ ಲಾರಿ ಮಾಲೀಕರ ಮತ್ತು ಏಜೆಂಟರ ಸಂಘ, ಯಶವಂತಪುರ ಲಾರಿ ಮಾಲೀಕರ ಸಂಘ ಬೆಂಗಳೂರು, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ 150 ಅಧಿಕ ಲಾರಿ ಮಾಲೀಕರು ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿ, ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ. (ಕೆ.ಎಸ್ಎಸ್.ಎಚ್)

Leave a Reply

comments

Related Articles

error: