ಕರ್ನಾಟಕ

ಕೊಡಗಿನಲ್ಲಿ ಪರಿವರ್ತನಾ ರ್ಯಾಲಿ ಇಲ್ಲ : ಬಿಜೆಪಿ ಗರಂ

ರಾಜ್ಯ(ಮಡಿಕೇರಿ) ನ.7:- ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಪರಿವರ್ತನಾ ರ್ಯಾಲಿಯನ್ನು ಕೊಡಗು ಜಿಲ್ಲೆಯಲ್ಲಿ ನಡೆಸಲು ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ನ.8 ರಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವ ಕಾರ್ಯಕ್ರಮವಿತ್ತು.

ಆದರೆ ಪರಿವರ್ತನಾ ರ್ಯಾಲಿ ಸಂದರ್ಭ ಬಿಗಿಬಂದೋಬಸ್ತ್ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಅನಾನುಕೂಲವಾಗುತ್ತಿರುವುದರಿಂದ ನ.8 ಕ್ಕೆ ಬದಲಾಗಿ ನ.10 ರ ನಂತರ ರ್ಯಾಲಿ ನಡೆಸುವಂತೆ ಜಿಲ್ಲಾ ಪೊಲೀಸರು ಸಲಹೆ ನೀಡಿದ್ದಾರೆ ಎಂದು ತಿಳಿಸಿರುವ ಜಿಲ್ಲಾ ಬಿಜೆಪಿ ನಿಗದಿತ ದಿನದಂದು ಕಾರ್ಯಕ್ರಮ ನಡೆಸಲು ಅನುಮತಿ ನಿರಾಕರಿಸಿದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ‘ಪರಿವರ್ತನಾ ರ್ಯಾಲಿ’ಗೆ ಕೊಡಗು ಜಿಲ್ಲಾಡಳಿತ ಅನುಮತಿ ನಿರಾಕರಿಸಿದ್ದು, ಇದು ರಾಜ್ಯ ಸರ್ಕಾರದ ಒತ್ತಡದಿಂದ ಆಗಿರುವ ಬೆಳವಣಿಗೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಪರಿವರ್ತನಾ ರ್ಯಾಲಿ ನಡೆಯುತ್ತಿದ್ದು, ನವೆಂಬರ್ 8 ರಂದು ಮಡಿಕೇರಿಯಲ್ಲಿ ಕಾರ್ಯಕ್ರಮ ನಡೆಯಬೇಕಾಗಿತ್ತು. ಆದರೆ, ಜಿಲ್ಲಾಡಳಿತ ಅನುಮತಿ ನಿರಾಕರಿಸಿದ್ದು, ಇದರ ಹಿಂದೆ ರಾಜ್ಯ ಸರ್ಕಾರದ ಒತ್ತಡವಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಸರ್ಕಾರ ಯಾವುದೇ ಷಡ್ಯಂತ್ರಗಳನ್ನು ಮಾಡಿದರು ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವುದಲ್ಲದೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆಯೆಂದು ಭವಿಷ್ಯ ನುಡಿದರು. ಟಿಪ್ಪು ಜಯಂತಿಯ ಕಾರಣಕ್ಕಾಗಿ ಪರಿವರ್ತನಾ ರ್ಯಾಲಿಗೆ ಅಡ್ಡಿಪಡಿಸಲಾಗಿದೆಯೆಂದು ರಾಬಿನ್ ದೇವಯ್ಯ ಆರೋಪಿಸಿದರು. ಕಾಂಗ್ರೆಸ್ ಪಕ್ಷ ಅಧಃಪತನದತ್ತ ಸಾಗುತ್ತಿದ್ದು, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸರ್ಕಾರದ ಕೊನೆಯ ಮುಖ್ಯಮಂತ್ರಿಯಾಗಲಿದ್ದಾರೆಂದು ಭವಿಷ್ಯ ನುಡಿದರು. ಕೊಡಗು ಜಿಲ್ಲೆಯ ಜನರ ಭಾವನೆಗೆ ವಿರುದ್ಧವಾಗಿ ರಾಜ್ಯ ಸರ್ಕಾರ ಬಲವಂತವಾಗಿ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾಗಿದೆಯೆಂದು ಆರೋಪಿಸಿರುವ ಜಿಲ್ಲಾ ಬಿಜೆಪಿ, ಜಯಂತಿಯನ್ನು ಕೈಬಿಡುವಂತೆ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿ ಕುಶಾಲಪ್ಪ ,ಜಿಲ್ಲಾ ವಕ್ತಾರ ನಾಪಂಡ ಕಾಳಪ್ಪ, ಪ್ರಧಾನ ಕಾರ್ಯದರ್ಶಿಗಳಾದ ರಾಬಿನ್ ದೇವಯ್ಯ,  ಬಾಲಚಂದ್ರ ಕಳಗಿ ಹಾಗೂ ನಗರಾಧ್ಯಕ್ಷರಾದ ಮಹೇಶ್ ಜೈನಿ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: