ಕರ್ನಾಟಕಪ್ರಮುಖ ಸುದ್ದಿಮೈಸೂರು

ಮೈಸೂರಿನಲ್ಲಿ ಕುಮಾರಪರ್ವ, ವಿಕಾಸವಾಹಿನಿ ಯಾತ್ರೆಗೆ ಚಾಲನೆ : ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ; ಜೆಡಿಎಸ್ 113 ರ ಗಡಿ ತಲುಪಿ ಅಧಿಕಾರಕ್ಕೆ ಬರುವುದು ಶತಸಿದ್ದ ಹೆಚ್.ಡಿ.ಕುಮಾರಸ್ವಾಮಿ

ಮೈಸೂರು,ನ.7:-  ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ  ಮೈಸೂರಿನಲ್ಲಿಂದು ಜೆಡಿಎಸ್ ನಿಂದ ಕುಮಾರಪರ್ವ ಹಾಗೂ ವಿಕಾಸವಾಹಿನಿ ಯಾತ್ರೆಗೆ ಚಾಲನೆ ದೊರಕಿದೆ.

ಸಮಾವೇಶದ ಯಶಸ್ಸಿಗೆ ಪ್ರಾರ್ಥಿಸಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಎಚ್.ಡಿ ದೇವೇಗೌಡ ತಮ್ಮ ಪತ್ನಿ ಚೆನ್ನಮ್ಮನವರ ಜೊತೆ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಎಚ್.ಡಿ ದೇವೇಗೌಡ ದಂಪತಿಯ ಜೊತೆ  ಸ್ಥಳೀಯ ಜೆಡಿಎಸ್  ಕಾರ್ಯಕರ್ತರು ಇದ್ದರು. ಇದೇವೇಳೆ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ  ಅವರು ಪತ್ನಿ ಅನಿತಾ ಜೊತೆ ಚಾಮುಂಡೇಶ್ವರಿ ದೇವಾಲಯಕ್ಕೆ ಆಗಮಿಸಿ ಕುಟುಂಬ ಸಮೇತರಾಗಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಕುಮಾರಪರ್ವಕ್ಕೆ ವಿಕಾಸವಾಹಿನಿ ವಾಹನ ಸಿದ್ಧಗೊಳಿಸಲಾಗಿದ್ದು, ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಕಾಸವಾಹಿನಿ  ವಾಹನಕ್ಕೆ ಪೂಜೆ ನಡೆಸಲಾಗಿದೆ. ವಿಕಾಸವಾಹಿನಿ ಯಾತ್ರೆ ಚಾಮುಂಡಿಬೆಟ್ಟದ ದೇವಾಲಯದಿಂದ ಆರಂಭವಾಗಿದೆ. ಬಸ್ ಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ವಾಹನದಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ಕುಳಿತು ಯಾತ್ರೆ ಆರಂಭಿಸಿದ್ದಾರೆ. ಮಗನ ಆಗಮನಕ್ಕೂ ಮೊದಲೇ ಆಗಮಿಸಿದ ದೇವೇಗೌಡ ದಂಪತಿ  ದೇವಾಲಯದಲ್ಲಿ ಮಗನಿಗಾಗಿ ಎರಡು ಗಂಟೆಗಳ ಕಾಲ ಕಾದು ಕುಳಿತಿದ್ದರು.

ಪತ್ನಿ ಅನಿತಾ ಜೊತೆ ಬಸ್ ಏರಿದ ಹೆಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 113 ರ ಗಡಿ ತಲುಪಿ ಅಧಿಕಾರಕ್ಕೆ ಬರುವುದು ಶತಸಿದ್ದ. ಇತ್ತೀಚಿನ ಬಹುತೇಕ ಸಮೀಕ್ಷೆಗಳು ಜೆಡಿಎಸ್ 65 ಸ್ಥಾನ ಗಳಿಸಲಿದೆ ಎಂದು ಹೇಳಿವೆ, ಆದರೆ ಇದನ್ನು ಮೀರಿ 113ರ ಗಡಿ ತಲುಪುವುದೇ ನಮ್ಮ ಏಕೈಕ ಗುರಿಯಾಗಿದೆ ಎಂದರು. ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಎಲ್ಲಾ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು ಎಂದು ತಿಳಿಸಿದರು. ಜೆಡಿಎಸ್ ತೊರೆದಿದ್ದ ಬಹುತೇಕ ನಾಯಕರು ಮತ್ತೆ ಜೆಡಿಎಸ್ ಗೆ ಸೇರ್ಪಡೆಯಾಗಲು ಸಂಪರ್ಕದಲ್ಲಿದ್ದಾರೆ. ಆದರೆ ಕಡೆ ಕ್ಷಣದಲ್ಲಿ ಪಕ್ಷಕ್ಕೆ ಬರುವವರಿಗೆ ರೆಡ್ ಕಾರ್ಪೆಟ್ ಹಾಸುವುದಿಲ್ಲ. ಅವಕಾಶವಾದಿ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ ಎಂದರು. ಜೆಡಿಎಸ್‌ನದ್ದು ಯಾವುದೇ ಮಿಷನ್ ಇಲ್ಲ. ಈ ಬಾರಿ ಅಧಿಕಾರಕ್ಕೆ ಬರೋದೆ ನಮ್ಮ ಗುರಿ. ಕುಮಾರ ಪರ್ವ ಮೂಲಕ ನಾವು ಯಾವುದೇ ಪಕ್ಷಗಳಿಗೆ ಸಂದೇಶ ನೀಡಬೇಕಿಲ್ಲ. ನಾನು ಸಂದೇಶ ನೀಡಬೇಕಿರುವುದು ರಾಜ್ಯದ ಜನರಿಗೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಲಾಗುವುದು. ರಾಜ್ಯದಲ್ಲಿ ರೈತರ ಆತ್ಮಹತ್ಯೆ ನಿಲ್ಲಿಸಬೇಕು. ಮೊದಲು ಜೆಡಿಎಸ್ ಇತರೆ ಸಾಲಿನಲ್ಲಿ ಇತ್ತು. ಆದರೆ ಸಮೀಕ್ಷೆಗಳಲ್ಲಿ ಜೆಡಿಎಸ್ ಸಂಖ್ಯೆ 60ಕ್ಕೆ ಏರಿದೆ. ಅದನ್ನ 113ಕ್ಕೆ ಏರಿಸುವುದು ನನ್ನ ಧ್ಯೇಯ. ಈ ಕಾರಣಕ್ಕಾಗಿಯೇ ನಾನು ರಾಜ್ಯ ಪ್ರವಾಸ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಈ ಸಂದರ್ಭ ಶಾಸಕ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಸೇರಿದಂತೆ ಜೆಡಿಎಸ್ ಪ್ರಮುಖರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: