ಕರ್ನಾಟಕಪ್ರಮುಖ ಸುದ್ದಿ

ಜ.19-21 : ಸಾವಯವ, ಸಿರಿಧಾನ್ಯಗಳ ಅಂತರರಾಷ್ಟ್ರೀಯ ವಾಣಿಜ್ಯ ಮೇಳ -ಸಚಿವ ಕೃಷ್ಣಬೈರೇಗೌಡ

ಬೆಂಗಳೂರು (ನ.7): ಬೆಂಗಳೂರಿನ ಅರಮನೆ ಮೈದಾನದಲ್ಲಿ 2018ರ ಜನವರಿ 19 ರಿಂದ 21ರ ವರೆಗೆ ಮೂರು ದಿನಗಳ ಕಾಲ ಸಾವಯವ ಮತ್ತು ಸಿರಿಧಾನ್ಯ ಅಂತರರಾಷ್ಟ್ರೀಯ ವಾಣಿಜ್ಯ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಸಾವಯವ ಮತ್ತು ಸಿರಿಧಾನ್ಯಗಳು-2018 ಅಂತರರಾಷ್ಟ್ರೀಯ ವಾಣಿಜ್ಯ ಮೇಳ’ದ ನೂತನ ವೆಬ್‍ಸೈಟ್ ಮತ್ತು ಲೋಗೋವನ್ನು ಅನಾವರಣ ಮಾಡಿ ಮಾತನಾಡಿದ ಸಚಿವರು ಕರ್ನಾಟಕ ರಾಜ್ಯವು ಸಾವಯವ ಹಾಗೂ ಸಿರಿಧಾನ್ಯಗಳ ರಾಜಧಾನಿಯಾಗಿ ರೂಪುಗೊಳ್ಳುತ್ತಿದೆ ಎಂದರು.

ಸಚಿವ ಕೃಷ್ಣ ಬೈರೇಗೌಡ.

ಕಳೆದ ಏಪ್ರಿಲ್‍ನಲ್ಲಿ ರಾಷ್ಟ್ರೀಯ ಮಟ್ಟದ ಬೃಹತ್ ಸಾವಯವ ಸಿರಿಧಾನ್ಯಗಳ ಮೇಳವನ್ನು ಆಯೋಜಿಸಲಾಗಿತ್ತು, ಅದಕ್ಕೆ ವ್ಯಾಪಕ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವ ಹಿನ್ನಲೆಯಲ್ಲಿ ಇದೀಗ ಅಂತಾರಾಷ್ಟ್ರೀಯ ಮಟ್ಟದ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದರು.

ಸಮ್ಮೇಳನದ ಯಶಸ್ವಿಗಾಗಿ ಹಾಗೂ ಪ್ರಚಾರಕ್ಕಾಗಿ ಈಗಾಗಲೇ ದಕ್ಷಿಣ ಭಾರತದ ಅತಿದೊಡ್ಡ ನಗರಗಳಾದ ಹೈದರಬಾದ್, ಚನ್ನೈ ಹಾಗೂ ಕೊಚ್ಚಿನ್ ನಗರಗಳಲ್ಲಿ ರೋಡ್ ಶೋಗಳನ್ನು ನಡೆಸಲಾಗಿದ್ದು ಮುಂಬರುವ ದಿನಗಳಲ್ಲಿ ದೇಶದ ಮಹಾನಗರಗಳಾದ ದೆಹಲಿ ಸೇರಿದಂತೆ ಮುಂಬೈ ನಗರಳಲ್ಲೂ ರೋಡ್ ಶೋಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮೇಳದ ಬಗ್ಗೆ ಗಮನ ಸೆಳೆಯಲು ಅಮೇರಿಕ, ಜಪಾನ್ ಸೇರಿದಂತೆ ಇತರೆ ದೇಶಗಳ ಉದ್ದಿಮೆದಾರರನ್ನು ಈ ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ ಎಂದರು.

ನಮ್ಮ ಸಾವಯವ ಪದ್ಧತಿ ದೇಶ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಜನವರಿ ನಡೆಯುವ ಮೇಳದಲ್ಲಿ, ಕೃಷಿಕರು, ಮಾರಾಟಗಾರರು, ಖರೀದಿದಾರರು ಹಾಗೂ ಸಾವಯವ ಉತ್ಪನ್ನಗಳನ್ನು ಸಂಸ್ಕರಿಸುವವರು ಭಾಗವಹಿಸಲಿದ್ದು ಕೃಷಿ ಸಲಕರಣೆಗಳು ಸೇರಿದಂತೆ ಸಾವಯವ ಉತ್ಪನ್ನಗಳ ಪ್ರದರ್ಶನವನ್ನು ಸಹ ಏರ್ಪಡಿಸಲಾಗಿದೆ.

ಸಾವಯವ ಮತ್ತು ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ. ನಮ್ಮ ಸರ್ಕಾರ ಕಳೆದ ಮೂರು ವರ್ಷಗಳಿಂದ ಸಾವಯವ ಪದಾರ್ಥಗಳ ಉತ್ಪಾದನೆಗಾಗಿ ಹೆಚ್ಚಿನ ಆಧ್ಯತೆ ನೀಡಿ ಕೆಲಸ ಮಾಡುತ್ತಿದೆ. ಬೆಂಗಳೂರು ನಗರ ಒಂದರಲ್ಲೆ ಸುಮಾರು 250ಕ್ಕೂ ಹೆಚ್ಚು ಸಿರಿಧಾನ್ಯಗಳ ಮಳಿಗೆಗಳಿವೆ, ಸಾವಯವ ಹಾಗೂ ಸಿರಿಧಾನ್ಯಗಳಿಗೆ ದೇಶದಲ್ಲೇ ಬೆಂಗಳೂರು ಅತಿ ದೊಡ್ಡ ಮರುಕಟ್ಟೆ ಆಗಿದೆ ಎಂದು ಸಚಿವರು ತಿಳಿಸಿದರು.

ರೈತರು ಬೆಳೆಯುವ ಸಾವಯವ ಕೃಷಿ ಪದಾರ್ಥಗಳಿಗೆ ಉತ್ತಮ ಬೆಲೆ ಸಿಗಬೇಕು. ಅಂತಹದ್ದೊಂದು ಕೆಲಸವನ್ನು ಸರ್ಕಾರ ಮಾಡಲು ಮುಂದಾಗಿದ್ದು ಆ ನಿಟ್ಟಿನಲ್ಲಿ ಉದ್ದಿಮೆದಾರರಿಗೆ ಹಾಗೂ ಗ್ರಾಹಕರಲ್ಲಿ ಸಿರಿ ಧಾನ್ಯಗಳ ಬಗ್ಗೆ ಅರಿವು ಮೂಡಿಸುವಂತ ಕೆಲಸ ಮಾಡಲಾಗುತ್ತಿದೆ. ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕರೆ ಸಾವಯವ ಕೃಷಿ ಚಟುವಟಿಕೆಗಳಲ್ಲಿ ಇನ್ನೂ ಹೆಚ್ಚಿನ ರೈತರು ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ ಎಂದರು.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲೂ ಇತ್ತೀಚೆಗೆ ಸಾವಯವ ಹಾಗೂ ಸಿರಿಧಾನ್ಯಗಳ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನು ಮನಗಂಡು ಅಂತರರಾಷ್ಟ್ರೀಯ ಮಾರುಕಟ್ಟೆಗೂ ಹೆಜ್ಜೆ ಇಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಸಿರಿಧಾನ್ಯ ನಮ್ಮ ಸಂಪ್ರಾದಾಯಿಕ ಆಹಾರ ಪದ್ಧತಿ. ಅಲ್ಲದೇ ಪೌಷ್ಠಿಕ ಅಂಶವುಳ್ಳ ಆಹಾರ. ಇಂತಹ ಆಹಾರ ಸೇವಿಸುವುದರ ಮೂಲಕ ಹಲವು ರೋಗಗಳಿಂದ ದೂರವಿರಬಹುದು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಾವಯವ ಕೃಷಿ ಮಿಷಿನ್ ಅಧ್ಯಕ್ಷರಾದ ಸೋಮಶೇಖರ್, ಕೃಷಿ ಇಲಾಖೆಯ ಕಾರ್ಯದರ್ಶಿ ಮಹೇಶ್ವರ ರಾವ್, ಆಯುಕ್ತರಾದ ಸತೀಶ್ ಸೇರಿದಂತೆ ಸಾವಯವ ಮತ್ತು ಸಿರಿಧಾನ್ಯಗಳ-2018 ಅಂತರರಾಷ್ಟ್ರೀಯ ವಾಣಿಜ್ಯ ಮೇಳದ ಸಹಭಾಗಿತ್ವದ ಹಲವು ಸಂಸ್ಥೆಗಳ ಪದಾದಿಕಾರಿಗಳು, ಕೃಷಿ ಇಲಾಖೆಯ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.

(ಎನ್‍ಬಿಎನ್‍)

Leave a Reply

comments

Related Articles

error: