ಕರ್ನಾಟಕಪ್ರಮುಖ ಸುದ್ದಿ

ಸಮಾಜದ ಬದಲಾವಣೆಗೆ ಜನರ ಮನಸ್ಥಿತಿ ಬದಲಾಗಬೇಕಿದೆ: ಎ.ಮಂಜು

ಹಾಸನ (ನ.7): ಕನಕದಾಸರು ಶತಶತಮಾನಗಳ ಹಿಂದೆ ಜಾತಿ ಪದ್ಧತಿ, ಸಾಮಾಜಿಕ ಅಸಮಾನತೆಗಳನ್ನು ಹೋಗಲಾಡಿಸಲು ಪ್ರಯತ್ನಿಸಿದವರು. ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಆದರೆ ಇನ್ನಷ್ಟೂ ಬದಲಾಗಬೇಕು, ಜನರ ಮನಸ್ಥಿತಿ ಬದಲಾಗಬೇಕು ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎ.ಮಂಜು ಅವರು ಹೇಳಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಸಂತ ಶ್ರೇಷ್ಠ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರು ನಮ್ಮೆಲ್ಲರ ದಾರಿ ದೀಪ ಅವರ ಚಿಂತನೆ, ಆದರ್ಶಗಳು ಎಂದೆಂದಿಗೂ ಅನುಕರಣೀಯ 16ನೇ ಶತಮಾನದಲ್ಲಿ ಕನಕದಾಸರು ತೊರಿದ ಅರಿವಿನ ದಾರಿಯಲ್ಲಿ ನಾವು ಪರಿವರ್ತನೆಯ ಬದುಕನ್ನು ಕಟ್ಟಿಕೊಳ್ಳುತ್ತ ಸಾಗಿದ್ದೇವೆ ಎಂದರು.

ಮಹನೀಯರ ತತ್ವ ಆದರ್ಶಗಳನ್ನು ಜೀವಂತವಾಗಿಡುವ ನಿಟ್ಟಿನಲ್ಲಿ ಬುದ್ಧ, ಬಸವಣ್ಣ, ಕನಕದಾಸರ ಆದರ್ಶಗಳನ್ನು ಅನುಕರಿಸಿ ಜಾತ್ಯತೀತತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಎಲ್ಲಾ ಶಾಲಾ-ಕಾಲೇಜುಗಳು ಶ್ರಮಿಸಬೇಕು ಎಂದು ಹೇಳಿದರು.

ಶಾಸಕರಾದ ಹೆಚ್.ಎಸ್.ಪ್ರಕಾಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನಕದಾಸರೊಬ್ಬ ಸಂತ, ಕೀರ್ತನೆಕಾರ, ಕವಿ, ಸಾಹಿತಿ, ಭಕ್ತ ಚಿಂತಕ, ವಿಚಾರವಾದಿ, ದಕ್ಷ ಆಡಳಿತಗಾರ ಎಂದರು ಯಾವುದೇ ಜಯಂತಿ ಆಚರಣೆ ಮಾಡುವುದಷ್ಟೇ ಅಲ್ಲ ಅವರ ತತ್ವ ಬೋಧನೆಗಳನ್ನು ಪಾಲನೆ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಅದ್ಯಕ್ಷರಾದ ಶ್ವೇತಾ ದೇವರಾಜು ಅವರು ಮಾತನಾಡಿ, ಜಯಂತಿ ಆಚರಣೆಗಳ ಮೂಲಕ ಸಮುದಾಯದವರನ್ನು ಗುರುತಿಸುವ ಕೆಲಸ ಆಗಬೇಕು ಎಂದರಲ್ಲದೇ ಪುರಂದರ ದಾಸರನ್ನು ಮತ್ತು ಕನಕದಾಸರನ್ನು ಅಶ್ವಿನಿ ಪ್ರಿಯರು ಎಂದು ಕರೆಯಲಾಗುತ್ತದೆ. ಕನಕದಾಸರು ಸಮಾಜದಲ್ಲಿರುವ ತೊಂದರೆಗಳನ್ನು ಸಮಾಜಿಕ ಹಿತದೃಷ್ಟಿಯಿಂದ ಸರಳ ಭಾಷೆಯಲ್ಲಿ ಕೀರ್ತನೆಗಳನ್ನು ಹಾಡಿ ಸಮಾನತೆಗಾಗಿ ಹೋರಾಡಿದವರು ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಬಿ.ಟಿ.ಸತೀಶ್ ಅವರು ಮಾತನಾಡಿ ಕನಕದಾಸರು ಹಾಗೂ ಪುರಂದರ ದಾಸರು ಸಮಾಕಾಲೀನದಲ್ಲಿ ಅವರು ರಚಿಸಿದ ದಾಸ ಸಾಹಿತ್ಯ, ಪರಂಪರೆ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಸ್ವರೂಪಕ್ಕೆ ಕಾರಣವಾಯಿತು. ತಮ್ಮ ಕೀರ್ತನೆಗಳ ಮೂಲಕವೇ ಸಾಮಾಜಿಕ ಅಸಮಾನತೆಯ ವಿರುದ್ಧ ಪ್ರತಿಭಟಿಸಿದವರು ಕನಕದಾಸರು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯರು ಮತ್ತು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಪಟೇಲ್ ಶಿವಪ್ಪ ಅವರು ಮಾತನಾಡಿ ಮಹನೀಯರ ಚಿಂತನೆಗಳು, ಆದರ್ಶಗಳು ಇನ್ನೂ ಹೆಚ್ಚು ಹೆಚ್ಚು ಜನರಿಗೆ ತಲುಪಬೇಕು ಆ ನಿಟ್ಟಿನಲ್ಲಿ ಸಹಕಾರಿಯಾಗುತ್ತದೆ ಎಂದ ಅವರು ಕಾರ್ಯಕ್ರಮವನ್ನು ಉತ್ತಮವಾಗಿ ಸಂಘಟಿಸಿರುವ ಜಿಲ್ಲಾಡಳಿತಕ್ಕೆ ಅಭಿನಂದನೆಯನ್ನು ಸೂಚಿಸಿದರು.

ವಿಶೇಷ ಉಪನ್ಯಾಸ: ಎ.ವಿ.ಕೆ ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಸೀ.ಚ. ಯತೀಶ್ವರ ಅವರು ಕನಕದಾಸರ ಜೀವನ ಚರಿತ್ರೆ ಮತ್ತು ಅವರ ಕೀರ್ತನೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಗಮನ ಸೆಳೆದ ಅದ್ಧೂರಿ ಮೆರವಣಿಗೆ: ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಕುಂಭ ಮೇಳ, ಜಾನಪದ ಕಲಾತಂಡದೊಂದಿಗೆ ಕನಕದಾಸರ ಭಾವಚಿತ್ರವನ್ನು ಇರಿಸಲಾಗಿದ್ದ ಬೆಳ್ಳಿರಥವನ್ನು ಎನ್.ಆರ್.ವೃತ್ತದ ಮೂಲಕ ಹಾಸನಾಂಬ ಕ್ಷೇತ್ರಕ್ಕೆ ಅದ್ಧೂರಿಯಾಗಿ ಕರೆ ತರಲಾಯಿತು.

ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ: ಕನಕದಾಸರ ಜಯಂತಿ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕನಕ ಸಾಹಿತ್ಯ ಲೋಕ ಪ್ರಬಂಧ ಸ್ಪರ್ಧೆಯನ್ನು ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಏರ್ಪಡಿಸಲಾಗಿತು. ಪ್ರಬಂಧ ಸ್ಪರ್ಧೆಯಲ್ಲಿ ಗೆದ್ದ ಮಕ್ಕಳಿಗೆ ನಗದು ಬಹುಮಾನವನ್ನು ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಯಿತು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಹೆಚ್.ಪಿ. ಮೋಹನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಆರ್.ಕೃಷ್ಣ ಕುಮಾರ್, ಜಿಲ್ಲಾ ಕನ್ನಡ ಮತ್ತು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಯಕರ ಹಳ್ಳಿ ಮಂಜೇಗೌಡ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಜಾನಕಿ, ಅಪರ ಜಿಲ್ಲಾಧಿಕಾರಿ ಪೂರ್ಣಿಮ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಎನ್‍ಬಿಎನ್‍)

Leave a Reply

comments

Related Articles

error: