ಮೈಸೂರು

ಖಾಸಗಿ, ಸರ್ಕಾರಿ ಉದ್ಯೋಗಗಳಿಗಿಂತ ಸ್ವಂತ ಉದ್ಯೋಗ ಹೆಚ್ಚು ಮಹತ್ವ: ಡಿಸಿ

2015-16ನೇ ಸಾಲಿನ ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮದಡಿ ನೀಡುವ ಸಹಾಯಧನದ ಫಲಾನುಭವಿಗಳ ಆಯ್ಕೆಯ ಸಂದರ್ಶನಕ್ಕೆ ಜಿಲ್ಲಾಧಿಕಾರಿ ಡಿ.ರಂದೀಪ್ ಚಾಲನೆ ನೀಡಿದರು.

ಗುರುವಾರ ನಗರದ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಫಲಾನುಭವಿಗಳ ಆಯ್ಕೆಯ ಸಂದರ್ಶವನ್ನು ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಡಿ. ರಂದೀಪ್ ಸಂದರ್ಶಿಸಿದರು. ಬಳಿಕ ಮಾತನಾಡಿದ ಅವರು, ಇಂದು ಖಾಸಗಿ ಹಾಗೂ ಸರ್ಕಾರಿ ಉದ್ಯೋಗಗಳಿಗಿಂತ ಸ್ವಂತ ಉದ್ಯೋಗ ಹೆಚ್ಚು ಮಹತ್ವ ಪಡೆದುಕೊಂಡಿದೆ. ಕೇಂದ್ರ ಸರ್ಕಾರ ಪ್ರತಿಯೊಬ್ಬರೂ ಉದ್ಯೋಗವಂತರಾಗಿ ಇತರರಿಗೂ ಉದ್ಯೋಗ ನೀಡುವಂತಾಗಲಿ ಎಂಬ ಉದ್ದೇಶದಿಂದ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಯುವಕರು ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಬಳಿಕ ಮಾತನಾಡಿದ ಲೀಡ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಕೆ.ಎನ್. ಶಿವಲಿಂಗಯ್ಯ, ಪ್ರತಿ ವರ್ಷವೂ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮದಡಿ ಸಾಲ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಈ ವರ್ಷವೂ ಆಯೋಜಿಸಲಾಗಿದೆ. ಕಳೆದ ವರ್ಷ 104 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಈ ಬಾರಿ ಅನುದಾನ ಹಾಗೂ ಸಬ್ಸಿಡಿ ಆಧಾರದ ಮೇಲೆ 68 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಎಲ್ಲರಿಗೂ ಸಾಲ ಮರುಪಾವತಿ ಸೇರಿದಂತೆ ಉದ್ಯೋಗ ನಡೆಸಲು ಬೇಕಾದ ಪ್ರಮುಖ ಅಂಶಗಳನ್ನು ತಿಳಿಸುವ ತರಬೇತಿಯನ್ನು ನೀಡಲಾಗುತ್ತದೆ. ಸಾಲ ಮರುಪಾವತಿಗೆ ಅನುದಾನದ ಮೊತ್ತದ ಆಧಾರದ ಮೇಲೆ ಅವಧಿಯನ್ನು ನಿಗದಿ ಮಾಡಲಾಗುತ್ತದೆ ಎಂದು ಹೇಳಿದರು.

ಯೋಜನೆಯ ವ್ಯಾಪ್ತಿಗೆ ಡಿಐಸಿ, ಕೆವಿಐಬಿ ಹಾಗೂ ಕೆವಿಐಸಿ ಒಳಪಡಲಿದ್ದು, ಮೂರು ಇಲಾಖೆಗಳಿಂದ ಒಟ್ಟು 600 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಡಿಐಸಿ 28, ಕೆವಿಐಬಿ 20 ಹಾಗೂ ಕೆವಿಐಸಿಯಲ್ಲಿ 20 ಒಟ್ಟು 68 ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಉತ್ಪಾದನೆಗೆ ಸಂಬಂಧಿಸಿದಂತೆ ಉದ್ದಿಮೆ ಆರಂಭಿಸಿದರೆ 25 ಲಕ್ಷ, ಸೇವಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉದ್ದಿಮೆ ಆರಂಭಿಸಿದರೆ 10 ಲಕ್ಷದವರೆಗೂ ಸಾಲ ನೀಡಲಾಗುತ್ತದೆ. ಈ ಯೋಜನೆಗೆ ವಯಸ್ಸಿನ ಮಿತಿಯಿಲ್ಲ. ನಗರ ಹಾಗೂ ಗ್ರಾಮೀಣ ಭಾಗದ ಎಲ್ಲಾ ವಯೋಮಾನದವರು ಅರ್ಜಿ ಸಲ್ಲಿಸಬಹುದು. ನಗರ ಪ್ರದೇಶದ ಅಭ್ಯರ್ಥಿಗಳಿಗೆ ಶೇ.15, ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಶೇ.25 ಹಾಗೂ ವಿಶೇಷ ಅನುದಾನದಡಿ ಆಯ್ಕೆಯಾದವರಿಗೆ ಶೇ. 35ರಷ್ಟು ಸಬ್ಸಿಡಿ ನೀಡಲಾಗುತ್ತದೆ.

ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಕೆ.ಎನ್. ಶಿವಲಿಂಗಯ್ಯ, ಜಂಟಿ ನಿರ್ದೇಶಕ ರಾಮಕೃಷ್ಣೇಗೌಡ ಸೇರಿದಂತೆ ಪ್ರಮುಖ ಬ್ಯಾಂಕುಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

comments

Related Articles

error: