ಕರ್ನಾಟಕಮೈಸೂರು

ಒಬ್ಬರನೊಬ್ಬರು ಗೌರವಿಸಿದಾಗ ಮಾತ್ರ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ : ಸಿ.ಜಿ ಹುನಗುಂದ

ಹಾಸನ (ನ.7): 12ನೇ ಶತಮಾನದಲ್ಲಿ ಬಸವಣ್ಣ ಅವರು ವಚನಗಳ ರಚನೆ ಮೂಲಕ ಮಾನವ ಹಕ್ಕುಗಳ ಬಗ್ಗೆ ಪ್ರತಿಪಾದಿಸಿದವರು. ಮನುಷ್ಯರದ್ದು ಮಾನವಧರ್ಮ, ಒಬ್ಬರನೊಬ್ಬರು ಗೌರವಿಸಿಕೊಂಡಾಗ ಮಾತ್ರ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದು ಮಾನವ ಹಕ್ಕುಗಳ ಆಯೋಗದ ಸದಸ್ಯರು ಮತ್ತು ನಿವೃತ್ತ ನ್ಯಾಯಾಧೀಶರಾದ ಸಿ.ಜಿ ಹುನಗುಂದ ಅವರು ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಕಲಾ ಕಾಲೇಜು ಸಭಾಂಗಣದಲ್ಲಿ ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಹಾಸನ ಘಟಕ ಮತ್ತು ಸರ್ಕಾರಿ ಕಾನೂನು ಕಾಲೇಜು ಸಂಯುಕ್ತಾಶ್ರಯದಲ್ಲಿ ನಡೆದ ಮಾನವ ಹಕ್ಕುಗಳ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಉಪನ್ಯಾಸ ನೀಡಿದ ಅವರು ಮಾನವ ಹಕ್ಕುಗಳು ಉಲ್ಲಂಘನೆ ಆದಾಗ ಮಾತ್ರ ಮಾನವ ಹಕ್ಕುಗಳ ಬಗ್ಗೆ ಪ್ರಚಾರ ಮಾಡಲಾಗುತ್ತದೆ. ಮನುಷ್ಯ ಹುಟ್ಟಿನಿಂದ ಸ್ವತಂತ್ರ, ಸಮಾನತೆಯೇ ಮೂಲಭೂತ ಹಕ್ಕು ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕಿದೆ ಎಂದರು.

ಮಾನವ ಜೀವ ಧರೆಗೆ ಬಂದಾಗ ಜೀವನದ ಜೊತೆ ಬಂದಂತಹ ಹಕ್ಕುಗಳೇ ಮಾನವ ಹಕ್ಕುಗಳು. ಮಾನವ ಹಕ್ಕುಗಳು ಎಂದರೆ ಸ್ವಾತಂತ್ರ್ಯ, ಸಮಾನತೆ, ಘನತೆ, ಜೀವನ ಆಗಿರುತ್ತದೆ. ಮಾನವ ಸಂಸ್ಕೃತಿ ಬೆಳೆಸಿಕೊಳ್ಳುವ ಮೂಲಕ ಮಾನವ ಹಕ್ಕುಗಳನ್ನು ಉಳಿಸೋಣ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ನ್ಯಾಕ್ ಸಂಸ್ಥೆಯಿಂದ ಉತ್ತಮ ವಿದ್ಯಾಸಂಸ್ಥೆಯೆಂದು ಬಿರುದು ಪಡೆಯಬೇಕಾದರೆ ಕಡ್ಡಾಯವಾಗಿ ವರ್ಷಕ್ಕೊಮ್ಮೆ ಮಾನವ ಹಕ್ಕುಗಳ ಕುರಿತು ಅರಿವು ಮೂಡಿಸುವ ಕಾರ್ಯಾಗಾರ ಮಾಡಿದ್ದಲ್ಲಿ ಮಾತ್ರ ಪ್ರಮಾಣ ಪತ್ರವನ್ನು ಪಡೆಯಲು ಅರ್ಹವಾಗಿರುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ.ಜಿ. ಕೃಷ್ಣೇಗೌಡ ಅವರು ಮಾತನಾಡಿ, ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಸಿ.ಜಿ ಹುನಗುಂದ ಅವರ ಉಪನ್ಯಾಸ ಕೇಳಿದ ವಿದ್ಯಾರ್ಥಿಗಳ ಮನ ಪರಿವರ್ತನೆಯಾಗುವ ಮೂಲಕ ಉತ್ತಮ ಪ್ರಜೆಯಾಗಿ ರೂಪುಗೊಳ್ಳುವಂತೆ ಅವರು ಹೇಳಿದರು.

ಬುದ್ಧನ ತತ್ವ, ಬಸವಣ್ಣ ಅವರ ವಚನಗಳು ಗಾಂಧಿ, ಅಂಬೇಡ್ಕರ್, ದಾಸರ ಸಂಗತಿಗಳು ಮಾನವ ಹಕ್ಕುಗಳ ಸಿದ್ಧಾಂತಕ್ಕೆ ಹೋರಾಡಿದವರು, ಅವರ ತತ್ವ, ಆದರ್ಶಗಳನ್ನು ಪಾಲಿಸೋಣ ಮತ್ತು ಜನಸಾಮಾನ್ಯರಲ್ಲಿ ಮಾನವ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಎಲ್ಲರೂ ಶ್ರಮಿಸೋಣ ಎಂದು ಅವರು ಹೇಳಿದರು.

ಮಾನವ ಹಕ್ಕುಗಳ ಆಯೋಗ ಹಾಸನ ಘಟಕದ ಅಧ್ಯಕ್ಷರಾದ ವಿಶ್ವನಾಥ್, ಸರ್ಕಾರಿ ಕಾನೂನು ಕಾಲೇಜು ಪ್ರಾಂಶುಪಾಲರಾದ ಮಡಿವಾಳ್, ಉಪನ್ಯಾಸಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಮತ್ತಿತತರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಭೆ: ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಸಿ.ಜಿ. ಹುನಗುಂದ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಸ್ಪತ್ರೆಗಳಲ್ಲಿ ಮತ್ತು ಶಾಲಾ-ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳ ಕುರಿತು ವಿಚಾರಿಸಿದರು ಮತ್ತು ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದರು.

(ಎನ್‍ಬಿಎನ್‍)

Leave a Reply

comments

Related Articles

error: