ಕರ್ನಾಟಕ

ತಂಬಾಕು ನಿಯಂತ್ರಣ ಸಾಮಾಜಿಕ ಜವಾಬ್ದಾರಿ : ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ

ರಾಜ್ಯ(ಚಾಮರಾಜನಗರ) ನ. 7:- ಜಿಲ್ಲೆಯ ಎಲ್ಲಾ ಸರ್ಕಾರಿ ಇಲಾಖೆ, ಕಚೇರಿಗಳು, ಶೈಕಣಿಕ ಸಂಸ್ಥೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ನಿಷೇಧದ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತಂಬಾಕು ನಿಯಂತ್ರಣ ಘಟಕದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜು ವಿದ್ಯಾರ್ಥಿಗಳು ಧೂಮಪಾನದಂತಹ ದುಷ್ಚಟಗಳಿಗೆ ಬಲಿಯಾಗುತ್ತಿದ್ದು, ಅವರಿಗೆ ಅರಿವು ಮೂಡಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿಯೂ ತಂಬಾಕು ಸೇವನೆಯಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಪರಿಣಾಮಕಾರಿಯಾಗಿ ತಿಳಿವಳಿಕೆ ನೀಡುವಂತಹ ಕಾರ್ಯವು ನಡೆಯಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು. ತಂಬಾಕು ನಿಯಂತ್ರಣ ಮಾಡುವುದು ಸಾಮಾಜಿಕ ಜವಾಬ್ದಾರಿಯೂ ಆಗಿದೆ. ಅಲ್ಲದೆ ಜೀವನದ ಬಹುಮುಖ್ಯ ಹೊಣೆಗಾರಿಕೆಯೂ ಅಗತ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು. ಈಗಾಗಲೇ ತಹಸೀಲ್ದಾರ್ ನೇತೃತ್ವದಲ್ಲಿ ತಾಲೂಕುಗಳಲ್ಲಿ ತಂಬಾಕು ನಿಯಂತ್ರಣಕ್ಕಾಗಿ ತಂಡ ರಚಿಸಲಾಗಿದೆ. ಪೋಲೀಸ್ ಇಲಾಖೆ ಕೂಡ ಈ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು ಉಳಿದ ಶಿಕ್ಷಣ, ಆರೋಗ್ಯ ಇಲಾಖೆಗಳು  ಪ್ರಕರಣ ದಾಖಲಿಸಿ ವರದಿ ಮಾಡಬೇಕು ಎಂದರು.   ಜಿಲ್ಲೆಯಲ್ಲಿ ತಂಬಾಕು ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಪ್ರಸಕ್ತ ಮಾಹೆಯಿಂದಲೇ ವ್ಯಾಪಕವಾಗಿ ಎಲ್ಲ ಕಡೆ ಭೇಟಿ ನೀಡಿ ಪ್ರಕರಣ ದಾಖಲಿಸಬೇಕು. ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲೂ ಕಾರ್ಯಾಚರಣೆ ನಡೆಸಬೇಕು ಎಂದು ಗಾಯತ್ರಿ ತಿಳಿಸಿದರು.

ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಂಗಡಿ ಮುಂಗಟ್ಟುಗಳು ಪರವಾನಗಿ ಹಾಗೂ ನವೀಕರಣ ನೀಡಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಕುರಿತ ಎಲ್ಲಾ ಜಾಹಿರಾತುಗಳನ್ನು ತೆರವುಗೊಳಿಸಿ, ತಂಬಾಕು ನಿಯಂತ್ರಣ ನಾಮಫಲಕ ಅಳವಡಿಸಿಕೊಂಡಿರುವುದನ್ನು ಧೃಢಿಕರಿಸಿರಬೇಕು. ಈ ಕುರಿತು ಜಿಲ್ಲೆಯ ಸಮಗ್ರ ವರದಿಯನ್ನು ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಕಚೇರಿಗೆ ಸಲ್ಲಿಸಬೇಕೆಂದು ರಾಜ್ಯಮಟ್ಟದ ಅಧಿಕಾರಿ ಹನುಮಂತಪ್ಪ ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಎಸ್. ಗೀತಾ ಪ್ರಸನ್ನ, ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷರಾದ ಸುರೇಶ್, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. (ಆರ್.ವಿ.ಎಸ್,ಎಸ್.ಎಚ್)

Leave a Reply

comments

Related Articles

error: