ಮೈಸೂರು

ಅಚ್ಚುಕಟ್ಟಿಗೆ ನೀರು ಒದಗಿಸದ ಸರ್ಕಾರ ಪ್ರತಿ ಎಕರೆಗೆ 20ಸಾವಿರ ಪರಿಹಾರ ತುಂಬಿಕೊಡುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ನ.8:-ಅಕಾಲಿಕ ಮಳೆಯಿಂದಾಗಿ ಬೆಳೆನಷ್ಟ ಪರಿಹಾರ ತುಂಬಿಕೊಡಲು ನಿಗದಿತ ಅವಧಿಯಲ್ಲಿ ಅಚ್ಚುಕಟ್ಟಿಗೆ ನೀರು ಒದಗಿಸದ ಸರ್ಕಾರ ಪ್ರತಿ ಎಕರೆಗೆ 20ಸಾವಿರ ಪರಿಹಾರ ತುಂಬಿಕೊಡಲು, ಸಹಕಾರ ಸಂಘಗಳಲ್ಲಿರುವ ಬಾಕಿ ಸಾಲವನ್ನು ಮನ್ನಾ ಮಾಡಲು, ಜಿಲ್ಲೆಯ ಎಲ್ಲಾ ಅಚ್ಚುಕಟ್ಟಿನ ನಾಲೆಗಳನ್ನು ದುರಸ್ತಿ ಮಾಡಲು, ಮೆಕ್ಕೆ ಜೋಳ ಖರೀದಿ ಕೇಂದ್ರ ತೆರೆಯಲು ಕಾರ್ಖಾನೆಗಳು ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಯಿತು.

ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಆಡಳಿತ ಮತ್ತು ವಿರೋಧ ಪಕ್ಷಗಳು 2018ರ ಚುನಾವಣೆಗೆ ಸಿದ್ಧರಾಗಿ ಬಣ್ಣ ಬಣ್ಣದ ಮಾತಿಗಳನ್ನಾಡುತ್ತಾ ಊರು ಕೇರಿ ಮನೆ ಮನೆಗೆ ಹೋಗುತ್ತಿದ್ದಾರೆ. ರೈತ ಸಾವು ನೋವು ಪಕ್ಷಗಳ ಮನಸ್ಸನ್ನು ಕಾಡುತ್ತಿಲ್ಲ. ಜಿಲ್ಲೆಯಲ್ಲಿ ಬಿದ್ದ ಅಕಾಲಿಕ ಮಳೆಯಿಂದಾಗಿ ರೈತರ ಕೋಟ್ಯಾಂತರ ರೂ. ಫಸಲು ನಷ್ಟವಾಗಿದೆ. ಬೆಳೆವಿಮೆ ಪರಿಹಾರ ಇನ್ನೂ ಪಾವತಿಯಾಗಿಲ್ಲ. ಹಾಲಿನ ದರವನ್ನು ಇಳಿಸಿ ಹಾಲು ಉತ್ಪಾದಕರು ಕಂಗಾಲಾಗಿದ್ದಾರೆ. ಮುಸುಕಿನ ಜೋಳದ ಬೆಲೆ ಕುಸಿದು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಜಿಲ್ಲೆಯ ರೈತರು ಮತ್ತು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದರೂ ಸರಕಾರ ಜಿಲ್ಲಾಡಳಿತ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಅಕಾಲಿಕ ಮಳೆಯಿಂದ ಜಿಲ್ಲೆಯ ರೈತರು ಬೆಳೆದಿದ್ದ ಹತ್ತಿ ಫಸಲು ನಷ್ಟವಾಗಿದೆ. ತರಕಾರಿ ಫಸಲು ನಾಶವಾಗಿದೆ. ಇವುಗಳ ನಷ್ಟವನ್ನು ಸರಕಾರ ತುಂಬಿಕೊಡಬೇಕು. ಹವಾಮಾನ ಹೊಂದಿಕೆಗೆ ಅನುಗುಣವಾಗಿ ಅಲ್ಪಾವಧಿ ಬೆಳೆ ಬೆಳೆಯಲು ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ಒದಗಿಸಬೇಕು. ಹೊಸ ಸಾಲ ನೀಡಬೇಕು. ನಿಗಧಿತ ಕಾಲಾವಧಿಯೊಳಗೆ ಅಚ್ಚುಕಟ್ಟುದಾರರಿಗೆ ನೀರು ಒದಗಿಸದ ಕಾರಣ ರೈತರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಈ ಕಾರಣ ಸರಕಾರ ಪ್ರತಿ ಎಕರೆಗೆ 20ಸಾವಿರ ನಷ್ಟ ತುಂಬಿ ಕೊಡಬೇಕು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಅಕ್ರಮ ತಡೆಯಲು ಕೂಡಲೇ ಜಿಲ್ಲಾಧಿಕಾರಿಗಳು ರೈತರ ಮತ್ತು ಅಧಿಕಾರಿಗಳ ಸಭೆ ಕರೆದು ಚರ್ಚೆ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಡಗಲಪುರ ನಾಗೇಂದ್ರ, ಪ್ರೊ.ಕೆ.ಸಿ.ಬಸವರಾಜು, ಎಂ.ಎಸ್.ಅಶ್ವತ್ಥನಾರಾಯಣ ರಾಜೇ ಅರಸ್, ಕೆ.ಎಂ.ಪುಟ್ಟಸ್ವಾಮಿ, ಹೆಚ್.ಸಿ.ಲೋಕೇಶ್ ರಾಜೇ ಅರಸ್, ಸರಗೂರು ನಟರಾಜ್, ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ಕೆಂಪೇಗೌಡ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: