ಮೈಸೂರು

ಮನಸ್ಸಿನಲ್ಲಿ ಮೂಡಿದ ಚಿತ್ರಣಗಳು ಭಾವನಾತ್ಮಕವಾಗಿ ನವಿರಾಗಿ ಶಿಲೆಗಳ ಮೇಲೆ ಮೂಡಿ ಬರಲು ಹೆಚ್ಚಿನ ಮುತುವರ್ಜಿ ಬೇಕು : ಡಾ.ಗವಿಸಿದ್ದಯ್ಯ

ಮೈಸೂರು,ನ.8:- ಮನಸ್ಸಿನಲ್ಲಿ ಮೂಡಿದ ಚಿತ್ರಣಗಳು ಭಾವನಾತ್ಮಕವಾಗಿ ನವಿರಾಗಿ ಶಿಲೆಗಳ ಮೇಲೆ ಮೂಡಿ ಬರಲು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಪ್ರಭಾರ ನಿರ್ದೇಶಕ ಡಾ.ಗವಿಸಿದ್ದಯ್ಯ ತಿಳಿಸಿದರು.

ಮೈಸೂರು ಮಾನಸ ಗಂಗೋತ್ರಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸೆಮಿನಾರ್ ಹಾಲ್ ನಲ್ಲಿ ಲಲಿತ ಕಲಾ ಅಕಾಡೆಮಿ, ರಾಷ್ಟ್ರೀಯ ಕಲಾ ಅಕಾಡೆಮಿ ನವದೆಹಲಿ ಮತ್ತು ಮೈಸೂರು ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸಲಾದ ಶಿಲ್ಪ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಯಾವುದೇ ಶಿಲ್ಪ ಅತ್ಯಮೂಲ್ಯವಾಗಿ ಮೂಡಿ ಬರಲು ಅಷ್ಟೇ ಉತ್ತಮವಾದ ಪರಿಕರ ಅಗತ್ಯ. ಶಿಲ್ಪಿ ತನ್ನ ಭಾವನೆಯನ್ನು ವ್ಯಕ್ತಪಡಿಸಲು ಶಿಲೆ ಅವನಿಗೆ ಸ್ಪಂದಿಸಬೇಕು. ಶಿಲೆಗಳನ್ನು ಎಚ್ಚರಿಕೆಯಿಂದ, ಜಾಗೃತಿಯಿಂದ ಆಯ್ಕೆ ಮಾಡಬೇಕು. ಶಿಲ್ಪ ಪರಿಪಕ್ವವಾಗಿ ಬರಬೇಕು ಅಂತಾದರೆ ಅತ್ಯುತ್ತಮ ಶಿಲಾಕಲ್ಲನ್ನು ಆಯ್ಕೆಮಾಡಿಕೊಳ್ಳಬೇಕು. ಶಿಲಾಯುಗದಿಂದ, ಆಧುನಿಕತೆಯವರೆಗೂ ಶಿಲ್ಪಗಳನ್ನು ಮರ,ಮಣ್ಣಿನಿಂದಲೂ ಮಾಡಲಾಗಿದೆ. ಪ್ರಾಚೀನ ರಾಜಮನೆತನದವರು  ದೇವಾಲಯಗಳಲ್ಲಿ ಶಿಲ್ಪಗಳನ್ನು ಬಿಟ್ಟುಹೋಗಿದ್ದಾರೆ. ಅವುಗಳನ್ನು ಉಳಿಸಿಕೊಳ್ಳುವ ಪ್ರಯತ್ನವಾಗಬೇಕು. ಅದಕ್ಕೆಂದೇ ಶಿಲ್ಪಶಾಸ್ತ್ರಗಳ ಅಧ್ಯಯನ ನಡೆಸಲಾಗುತ್ತಿದೆ. ಬಾದಾಮಿ, ಐಹೊಳೆ ಪಟ್ಟದಕಲ್ಲಿನ ಶಿಲ್ಪಗಳು ಈಗಲೂ ಕೂಡ ನಾವಿನ್ಯತೆಯನ್ನು ಹೊಂದಿವೆ. ಇದು ಯಾವ ಕಾಲದ್ದು ಎಂದು ಗುರುತಿಸುವಂಥಹ ಶಕ್ತಿಯನ್ನು ವಿದ್ಯಾರ್ಥಿಗಳಿಗೆ ದೊರಕಿಸಿಕೊಡಬೇಕು. ವಿಜಯನಗರ ಅರಸರ ಕಾಲದಲ್ಲಿಯೂ ಶಿಲ್ಪಕಲೆ ಪ್ರಾಮುಖ್ಯತೆ ಪಡೆದಿತ್ತು. ಮೈಸೂರಿನ ಅರಸರು ಕೂಡ ಶಿಲ್ಪಕಲೆಗೆ ಪ್ರಾಮುಖ್ಯತೆ ನೀಡಿದ್ದರು.  ಕಲಾಕೃತಿಗಳಿಗೆ ಬೇಕಾದ ಪರಿಕರಗಳನ್ನು ಒದಗಿಸಿಕೊಟ್ಟು ಅದಕ್ಕೆ ಬೇಕಾದ ಮಾರುಕಟ್ಟೆಯನ್ನು ಅರಸರು ಒದಗಿಸಿಕೊಡುತ್ತಿದ್ದರು. ಕಾವಾ ವಿದ್ಯಾರ್ಥಿಗಳು ಚಿತ್ರಿಸಿದ ಪೇಂಟಿಂಗ್ಸ್  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಗಂಗ,ಚೋಳ ಯಾರ ಕಾಲದಲ್ಲಿ ರಚಿಸಿದಂತಹ ಕಲಾಕೃತಿಗಳು ಎಂಬುದನ್ನು ಗುರುತಿಸುವಷ್ಟರಮಟ್ಟಿಗೆ ನೈಪುಣ್ಯತೆಯನ್ನು ಪಡೆಯಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಾಮರಾಜೇಂದ್ರ ದೃಶ್ಯಕಲೆಗಳ ಕಾಲೇಜಿನ ಕಲಾ ಇತಿಹಾಸ ವಿಭಾಗದ ವಿಜಯರಾವ್, ಶಿಲ್ಪಲೋಕದ ನಿರ್ದೇಶಕ ಪುಟ್ಟಸ್ವಾಮಿ ಗುಡಿಗಾರ್, ಎಂ.ವಿ.ಕೃಷ್ಣಪ್ಪ, ಡಾ.ವಿ.ಶೋಭಾ, ಡಾ.ರೋಹಿತ್ ಈಶ್ವರ್ ಮತ್ತಿತರರು ಉಪಸ್ಥಿತರಿದ್ದರು. ಶಿಬಿರದಲ್ಲಿ 60ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: