ಮೈಸೂರು

ಯಾವುದೇ ವಿಷಯವನ್ನು ಅಧ್ಯಯನ ಮಾಡಿದಷ್ಟೂ ಹೆಚ್ಚಿನ ಜ್ಞಾನಾರ್ಜನೆ ಆಗಲಿದೆ : ಪ್ರೊ. ದಯಾನಂದ ಮಾನೆ

ಮೈಸೂರು,ನ.8:-  ಯಾವುದೇ ವಿಷಯವನ್ನು ಹೆಚ್ಚಿನ ಅಧ್ಯಯನ ಮಾಡಿದಷ್ಟೂ ಹೆಚ್ಚಿನ ಜ್ಞಾನಾರ್ಜನೆ ಆಗಲಿದೆ ಎಂದು  ಮೈಸೂರು ವಿವಿ ಕುಲಪತಿ ಪ್ರೊ. ದಯಾನಂದ ಮಾನೆ ತಿಳಿಸಿದರು.

ಅವರು ಬುಧವಾರ  ಮಹಾರಾಣಿ ಮಹಿಳಾ ಕಾಲೇಜು ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಸಮ್ಮೇಳನ ಆಯೋಜನಾ ಸಮಿತಿ, ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಮತ್ತು ಮಹಾರಾಣಿ ಕಲಾ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನದ ಅಂಗವಾಗಿ ಶಿಕ್ಷಣ ಹಾಗೂ ಶೋಷಿತ ಸಮುದಾಯಗಳ ವಿಮೋಚನೆ ಕುರಿತು ಆಯೋಜಿಸಿದ್ದ ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು  ಯಾವುದೇ ಸಮಾಜವು ವಿದ್ಯಾರ್ಜನೆ ಇಲ್ಲದೆ ಪ್ರಗತಿ ಹೊಂದಲಾರದು. ಸಮಾಜದ ಎಲ್ಲ ವರ್ಗದವರು ವಿದ್ಯಾವಂತರಾದಲ್ಲಿ ಮಾತ್ರ ಅದು ಪ್ರಗತಿ ಹೊಂದುತ್ತದೆಂಬ ಖಚಿತ ನಿಲುವನ್ನು ಅಂಬೇಡ್ಕರ್ ಹೊಂದಿದ್ದರು. ಅದರಿಂದಲೇ ವಿದ್ಯಾರ್ಜನೆಗೆ ಹೆಚ್ಚು ಒತ್ತು ನೀಡಿದ್ದರು. ಅಂಬೇಡ್ಕರ್ ಶೋಷಿತ ವರ್ಗದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರಲ್ಲದೇ ಅವರು  ಸಮಾಜದ ಮುಖ್ಯ ವಾಹಿನಿಗೆ ಬರುವ ದಿಸೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶ್ರಮಿಸಿದ್ದರು ಎಂದರು.

ಅಂಬೇಡ್ಕರ್ ರಚಿಸಿರುವ ಭಾರತ ಸಂವಿಧಾನವು ವಿಶ್ವದಾದ್ಯಂತ ಖ್ಯಾತಿ ಗಳಿಸಿದೆ. ಅದರಲ್ಲಿನ ಬಹಳಷ್ಟು ಅಂಶಗಳಿಂದ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯವಾಗಿದೆ. ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ  ಪ್ರೊ.ಜೆ.ಸೋಮಶೇಖರ್, ಕಾಲೇಜು ಪ್ರಾಂಶುಪಾಲ ಡಾ.ಎಂ.ಚನ್ನಬಸವೇಗೌಡ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಸಂಯೋಜನಾಧಿಕಾರಿ ಡಾ.ಎಸ್.ನರೇಂದ್ರಕುಮಾರ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: