ಮೈಸೂರು

ಐನೂರು, ಒಂದು ಸಾವಿರ ರು. ನೋಟು ರದ್ದು: ಯಳಂದೂರು ತಾಲೂಕಿನಲ್ಲಿ ಸಾರ್ವಜನಿಕರ ಪರದಾಟ

ಯಳಂದೂರು: ಕಪ್ಪು ಹಣ, ಖೋಟಾ ನೋಟು ಮತ್ತು ಭ್ರಷ್ಟಾಚಾರ ತಡೆಗಟ್ಟುವಲ್ಲಿ ಐತಿಹಾಸಿಕ ಕ್ರಮ ಜರುಗಿಸಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಗಳವಾರ ಮಧ್ಯ ರಾತ್ರಿಯಿಂದಲೇ ಜಾರಿಗೆ ಬರುವಂತೆ 500 ಹಾಗೂ 1000 ರು. ನೋಟುಗಳ ಚಲಾವಣೆಯನ್ನು ದೇಶಾದ್ಯಂತ ನಿಷೇಧಿಸಿರುವ ಹಿನ್ನೆಲೆಯಲ್ಲಿ ಯಳಂದೂರು ತಾಲೂಕಿನಲ್ಲಿಯೂ ಕೂಡ ಹಿಂದೆಂದೂ ಕೇಳರಿಯದಂತಹ ಚಿಲ್ಲರೆಯ ಸಮಸ್ಯೆಗೆ ತಾಲೂಕಿನ ಜನತೆ ಈಡಾಗಿದ್ದಾರೆ. ಬುಧವಾರ ಎಂದಿನಂತೆಯೇ 500, 1000 ರು. ನೋಟು ರದ್ದಾಗಿರುವುದು ಕಿವಿಯಿಂದ ಕಿವಿಗೆ ಸಾರ್ವಜನಿಕವಾಗಿ ಹರಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಹೋಟೆಲ್, ಅಂಗಡಿ, ಸಿನಿಮಾ ಮಂದಿರ, ಚಿಲ್ಲರೆ ವ್ಯಾಪಾರಿಗಳು, ಫೈನಾನ್ಸ್‌ದಾರರು 500 ಹಾಗೂ 1000 ರು. ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದರು. ಇದರಿಂದ ವಿಧಿಯಿಲ್ಲದೇ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು.

ಪೆಟ್ರೋಲ್ ಬಂಕ್‌ಗೆ ಮುಗಿಬಿದ್ದ ಗ್ರಾಹಕರು: ಪಟ್ಟಣದ ಆರ್.ಎಸ್.ಎಸ್. ಹಾಗೂ ಪ್ರಮತಿ ಪೆಟ್ರೋಲ್ ಬಂಕ್‌ಗೆ ರಾತ್ರಿಯಿಂದಲೇ ಮುಗಿಬಿದ್ದ ಗ್ರಾಹಕರು ಬಂದವರೆಲ್ಲ 500, 1000 ರು. ನೋಟುಗಳನ್ನು ನೀಡಲು ಆರಂಭಿಸಿದರು. ಇದರಿಂದ ಪೆಟ್ರೋಲ್ ಬಂಕ್ ಮಾಲೀಕರಿಗೆ ಚಿಲ್ಲರೆ ಸಮಸ್ಯೆಯ ಅಭಾವ ಉಂಟಾಯಿತು.

ವ್ಯಾಪಾರ ಸ್ಥಗಿತಗೊಳಿಸಿದ ಕೆಲವು ವರ್ತಕರು: ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿಯ ಸರಪಳಿ ರಸ್ತೆಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಕಟ್ಟಡವನ್ನು ತೆರವುಗೊಳಿಸುತ್ತಿರುವ ಹಿನ್ನೆಲೆಯ ಜೊತೆಗೆ ಕೇಂದ್ರ ಸರ್ಕಾರದ ದಿಟ್ಟ ಕ್ರಮದಿಂದ 500, 1000 ರು. ಗಳಿಗೆ ಚಿಲ್ಲರೆಯನ್ನು ಒದಗಿಸಲಾಗದೇ ಕೆಲವು ಅಂಗಡಿಗಳ ವರ್ತಕರು ಅಂಗಡಿ ಮುಚ್ಚಿ ತಮ್ಮ ಮೌನಾಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಬಸ್‌ಗಳಿಗೆ 500, 1000 ರು. ಕೊಡಲು ಮುಂದಾದ ಪ್ರಯಾಣಿಕರು: ಸರ್ಕಾರಿ ಬಸ್‌ಗಳಲ್ಲಿ 500, 1000 ರು. ನೀಡಬಹುದೆಂಬ ಮಾಹಿತಿಯನ್ನರಿತ ಕೆಲವು ಪ್ರಯಾಣಿಕರು ಕಂಡಕ್ಟರ್‌ಗೆ 500, 1000 ರು. ನೀಡಿ ಚಿಲ್ಲರೆ ಅಭಾವದ ಇಕ್ಕಟ್ಟಿಗೆ ಸಿಲುಕಿ ವಾಗ್ವಾದ ನಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ತೊಂದರೆಯನ್ನು ಅನುಭವಿಸಿದ ಕೂಲಿ ಕಾರ್ಮೀಕರು: ತಾಲೂಕಿನ ರೈತಾಪಿ ಜಮೀನುಗಳಲ್ಲಿ ವ್ಯವಸಾಯದ ಕೂಲಿಗೆ ತೆರಳುತ್ತಿದ್ದ ಕಾರ್ಮಿಕರು ಮಾಲೀಕರು ಕೊಡುತ್ತಿದ್ದ 500, 1000 ರು.  ನೋಟುಗಳನ್ನು ಸ್ವೀಕರಿಸಲಾಗದೆ ಮಾಲೀಕರ ವಿರುದ್ಧ ವಾಗ್ವಾದಕ್ಕಿಳಿಯುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.

ಕೇಂದ್ರ ಸರ್ಕಾರಕ್ಕೆ ಶಾಪ ಹಾಕುತ್ತಿದ್ದ ಕೆಲ ಸಾರ್ವಜನಿಕರು: ಕೇಂದ್ರ ಸರ್ಕಾರದ ನರೇಂದ್ರ ಮೋದಿಯವರ ದಿಟ್ಟ ಕ್ರಮದ ಬಗ್ಗೆ ಸರಿಯಾಗಿ ಅರಿವಿರದ ಕೆಲವು ಸಾರ್ವಜನಿಕರು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ನರೇಂದ್ರ ಮೋದಿರವರಿಗೆ ಶಾಪ ಹಾಕುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.

ಮೋದಿ ವರ ದಿಟ್ಟ ಕ್ರಮದ ಬಗ್ಗೆ ಮೆಚ್ಚುಗೆ: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಪ್ಪು ಹಣ, ಭ್ರಷ್ಟಾಚಾರದ ವಿರುದ್ಧ ತೆಗೆದುಕೊಂಡಿರುವ ಕಟ್ಟುನಿಟ್ಟಿನ 500, 1000 ರು.ಗಳ ನೋಟಿನ ಸ್ಥಗಿತ ಕ್ರಮದ ಬಗ್ಗೆ ಕೆಲವು ಪ್ರಜ್ಞಾವಂತ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.

~ ಗೂಳಿಪುರ ನಂದೀಶ ಎಂ.

Leave a Reply

comments

Related Articles

error: