ಪ್ರಮುಖ ಸುದ್ದಿಮೈಸೂರು

ಜೆ.ಡಿ.ಎಸ್. ಗೆ ಅಲ್ಪಸಂಖ್ಯಾತರ ಸಾಮೂಹಿಕ ರಾಜೀನಾಮೆ : ಜಿ.ಪಂ ಅಧ‍್ಯಕ್ಷೆ ನಯಿಮಾ ಸುಲ್ತಾನ ನಕಾರ

ಮೈಸೂರು, ನ.9 :  ಅಲ್ಪ ಸಂಖ್ಯಾತರು ಸಾಮೂಹಿಕವಾಗಿ ಜೆ.ಡಿಎಸ್ ತೊರೆಯುತ್ತಿರುವುದು ಕೇವಲ ವಂದತಿ, ಯಾರು ರಾಜೀನಾಮೆ ನೀಡಿಲ್ಲ, ನೀಡುವ ಪ್ರಶ್ನೆಯೇ ಇಲ್ಲ, ಪಕ್ಷವು ಅಲ್ಪಸಂಖ್ಯಾತರಿಗೆ ಉತ್ತಮ ಅವಕಾಶ ನೀಡಿದೆ, ಅದಕ್ಕೆ ನಿದರ್ಶನವಾಗಿ ಜಿ.ಪಂ. ಅಧ್ಯಕ್ಷೆಯನ್ನಾಗಿ ನನಗೆ ಅವಕಾಶ ನೀಡಿರುವುದೇ ಸಾಕ್ಷಿಯೆಂದು ಜಿ.ಪಂ. ಅಧ್ಯಕ್ಷೆ ನಯಿಮಾ ಸುಲ್ತಾನ್ ನಜೀರ್ ಅಹಮದ್ ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು .

ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಾತ್ಯತೀತ ಜನತಾದಳದಲ್ಲಿ ಅಲ್ಪಸಂಖ್ಯಾತರನ್ನು ಕಡೆಗಣಿಸಿದ್ದು, ಅವಕಾಶ ನೀಡದೆ ಗುಲಾಮರಂತೆ ಕಾಣುತ್ತಿದ್ದರೆಂದು ಖಂಡಿಸಿ  ಈಚೆಗೆ ಎನ್.ಆರ್ ಕ್ಷೇತ್ರದ ಜೆಡಿಎಸ್ ಅಲ್ಪಸಂಖ್ಯಾತ ಘಟಕದಿಂದ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು, ಇದಕ್ಕೆ ಸ್ಪಷ್ಟನೆ ನೀಡಿದ ಅವರು, ಪಕ್ಷದಲ್ಲಿ ಯಾವ ಒಡಕು ಇಲ್ಲ, ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಅಲ್ಪ ಸಂಖ್ಯಾತರಿಗೆ ವಿಫುಲ ಅವಕಾಶ ನೀಡಿದ್ದಾರೆ, ನನಗೆ ಉನ್ನತ ಸ್ಥಾನ ನೀಡುವಲ್ಲಿ ಅಲ್ಪಸಂಖ್ಯಾತರನ್ನು ಪ್ರೋತ್ಸಾಹಿಸುತ್ತಿದ್ದಾರೆ, ಜಿಲ್ಲೆಯಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಅವರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು ಇದನ್ನು ಸಹಿಸದ ಕೆಲವು ಕಿಡಿಗೇಡಿಗಳು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯ ಹೊಂದಿರುವುದರಿಂದ ಇದನ್ನು ಸಹಿಸದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ, 5 ವರ್ಷಕ್ಕೊಮ್ಮೆ ಪಕ್ಷವನ್ನು ಬದಲಾಯಿಸುವ ಕೆಲವರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ, ಅಲ್ಲದೇ ವಿನಃ ಕಾರಣ ನೀಡುವ ಹೇಳಿಕೆಗಳಿಂದ ಸಮಾಜದಲ್ಲಿ ಕೋಮುಭಾವನೆ, ಸಾಮರಸ್ಯಕ್ಕೆ ಹಾಗೂ  ಸಾಮಾಜಿಕ ಸ್ವಾಸ್ಥತೆಗೆ ಕಂಟಕವಾಗಿದ್ದು, ಇಂತಹವರಿಂದ ಜಾಗೃತಿ ಅವಶ್ಯವೆಂದು ಎನ್.ಆರ್.ಕ್ಷೇತ್ರದ ಜೆ.ಡಿಎಸ್ ಅಧ್ಯಕ್ಷ ಮೊಹಮದ್ ಶರೀಫ್ ತಿಳಿಸಿದರು.

ಮುಖಂಡ ಸಂದೇಶ ಸ್ವಾಮಿ ವಿರುದ್ಧ ಹೇಳಿಕೆ ನೀಡುವ ಮೂಲಕ ಕೆಲವರು ವೈಯುಕ್ತಿಕ ತೇಜೋವಧೆಗೆ ಮುಂದಾಗಿದ್ದರು, ಇದನ್ನು ಪಕ್ಷ ಸಹಿಸುವುದಿಲ್ಲ, ಕ್ಷೇತ್ರದಲ್ಲಿ ಜೆಡಿಎಸ್ ಪ್ರಬಲವಾಗಿದೆ ಎನ್ನುವುದಕ್ಕೆ ಈಚೆಗೆ ನಡೆದ ಪಕ್ಷದ ಸಮಾವೇಶವೇ ಸಾಕ್ಷಿಯಾಗಿದೆ, ಇದನ್ನು ಸಹಿಸದವರು ಪಕ್ಷಕ್ಕೆ ಧಕ್ಕೆಯುಂಟು ಮಾಡಲು ಯತ್ನಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಪ ಸಂಖ್ಯಾತರ ಸಾಮೂಹಿಕ ರಾಜೀನಾಮೆ ವಿಷಯವನ್ನು ಪಕ್ಷದ ಅಲ್ಪಸಂಖ್ಯಾತ ಮುಖಂಡರು ಸಾರಾಸಗಟಾಗಿ ಖಂಡಿಸಿದರು.  ಮುಂದಿನ ದಿನಗಳಲ್ಲಿ ಪಕ್ಷದಿಂದ ಅಲ್ಪ ಸಂಖ್ಯಾತರ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಫೈರೋಜ್ ಖಾನ್, ಪಾಲಿಕೆ ಮಾಜಿ ಸದಸ್ಯ ಕಮ್ರುದ್ದೀನ್ ಖಾನ್,  ಎನ್.ಆರ್.ಕ್ಷೇತ್ರದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮ್ರಾನ್ ಶರೀಫ್ ಮೊದಲಾದವರು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: