ಮೈಸೂರು

ಟಿಪ್ಪು ಒಬ್ಬ ನಿಜವಾದ ದೇಶಭಕ್ತ: ಡಾ.ಎಚ್.ಸಿ. ಮಹದೇವಪ್ಪ

‘ಟಿಪ್ಪು ಸುಲ್ತಾನ್ ಒಂದು ಜನಾಂಗಕ್ಕೆ ಸೇರಿದ ವ್ಯಕ್ತಿಯಲ್ಲ. ಆತ ನಿಜವಾದ ರಾಷ್ಟ್ರವಾದಿ. ಆತ ತನ್ನ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟಿದ್ದ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ಜಿಲ್ಲಾಡಳಿತ ಮತ್ತು ಕನ್ನ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಲಾಮಂದಿರದಲ್ಲಿ  ಆಯೋಜಿಸಲಾಗಿದ್ದ ಟಿಪ್ಪು ಸುಲ್ತಾನನ 267ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ದೇಶಕ್ಕಾಗಿ ಹೋರಾಟ ಮಾಡಿ ಜೀವತೈದ ಏಕೈಕ ವ್ಯಕ್ತಿ ಟಿಪ್ಪು ಎಂದು ಅಭಿಪ್ರಾಯಪಟ್ಟರು.

ಟಿಪ್ಪುವನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಮಹದೇವಪ್ಪ, ಟಿಪ್ಪುವನ್ನು ಟೀಕಿಸುವವರು ತಮ್ಮ ಇತಿಹಾಸದ ಜ್ಞಾನವನ್ನು ಹೆಚ್ಚಿಸಕೊಳ್ಳಲಿ. ಮರಾಠರಿಂದ ಅಪವಿತ್ರಗೊಂಡಿದ್ದ ಶೃಂಗೇರಿ ದೇವಸ್ಥಾನವನ್ನು ಮರುಸ್ಥಾಪಿಸಿದ್ದು ಟಿಪ್ಪು. ಆದಾಗ್ಯೂ ಆತನನ್ನು ಹಿಂದೂ ವಿರೋಧಿ ಎಂದು ಹೇಗೆ ಕರೆಯುತ್ತೀರಿ? ಎಂದು ಪ್ರಶ್ನಿಸಿದರು.

ಟಿಪ್ಪು ಶೃಂಗೇರಿ ದೇವಸ್ಥಾನದ ಸ್ವಾಮೀಜಿಗೆ ಪತ್ರ ಬರೆದು ಆರ್ಥಿಕ ಸಹಾಯ ನೀಡುವ ಪ್ರಸ್ತಾಪ ಮಾಡಿರುವುದನ್ನು ಸ್ಕಾಟಿಷ್ ಇತಿಹಾಸಕಾರ ವಿಲಿಯಮ್ ಡಾಲ್ರಿಂಪಲ್ ಅವರು ತಮ್ಮ ಲೇಖನವೊಂದರಲ್ಲಿ ಹೇಳಿದ್ದಾರೆ. ಟಿಪ್ಪು 156 ದೇವಸ್ಥಾನಗಳಿಗೆ ಸಹಾಯ ನೀಡಿದ್ದ. ಚೀನಾದ ಕೃಷಿ ತಂತ್ರಜ್ಞಾನಗಳನ್ನು ಭಾರತಕ್ಕೆ ತಂದು ಅನೇಕ ಅಭಿವೃದ್ಧಿಗೆ ಕಾರಣನಾಗಿದ್ದ ಎಂದೂ ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಉರ್ದು ಅಕಾಡೆಮಿಯು ಟಿಪ್ಪು ಸುಲ್ತಾನ್ ಜೀವನ ಮತ್ತು ಕನಸಿನ ಬಗ್ಗೆ ಎರಡು ಪುಸ್ತಕಗಳನ್ನು ಬಿಡುಗಡೆಗೊಳಿಸಿತು.

ಶಾಸಕ ವಾಸು ಮತ್ತು ಎಂ.ಕೆ. ಸೋಮಶೇಖರ್, ಮೇಯರ್ ಬಿ.ಎಲ್‍. ಬೈರಪ್ಪ, ಜಿಲ್ಲಾಧಿಕಾರಿ ರಂದೀಪ್ ಡಿ., ಮೈಸೂರು ಮೌಲಾನ ಉಸ್ಮಾನ್ ಶರೀಫ್ ಸರ್ ಕಾಝಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

comments

Related Articles

error: