ಕರ್ನಾಟಕ

ಒಗ್ಗಟ್ಟಾಗಿ ದೇಶದ ಅಭಿವೃದ್ಧಿಗೆ ಶ್ರಮಿಸೋಣ: ಮಾಜಿ ಪ್ರಧಾನಿ ದೇವೇಗೌಡ

ಹಾಸನ (ನ.10): ಎಲ್ಲಾ ಸಮುದಾಯ ಮತ್ತು ಸಮಾಜ ಒಗ್ಗಟ್ಟಾಗಿ ದೇಶದ ಅಭಿವೃದ್ಧಿ ಮತ್ತು ಜನಸಾಮಾನ್ಯರ ಕಷ್ಟಗಳನ್ನು ಪರಿಹಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಮಾಜಿ ಪ್ರದಾನ ಮಂತ್ರಿಗಳು ಹಾಗೂ ಲೋಕಸಭಾ ಸದಸ್ಯರಾದ ಹೆಚ್.ಡಿ.ದೇವೇಗೌಡ ಅವರು ಅಭಿಪ್ರಾಯಪಟ್ಟರು.

ಅರಸೀಕೆರೆ ತಾಲ್ಲೂಕು, ಜೇನುಕಲ್ ನಗರದಲ್ಲಿ ವಾಲ್ಮೀಕಿ ನಾಯಕ ಸಂಘದ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಉದ್ಘಾಟನೆ ಹಾಗೂ ವಾಲ್ಮೀಕಿ ಭಾವಚಿತ್ರ ಅನಾವರಣ ಮತ್ತು ವಾಲ್ಮೀಕಿ ಜಯಂತಿ ಮಹೋತ್ಸವ ಸಮಾವೇಶ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಒಂದು ಸಮಾಜ ಈ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ, ಎಲ್ಲಾ ಸಮುದಾಯದವರು ಜೊತೆಗೂಡಿ ನಡೆದಲ್ಲಿ ಅಭಿವೃದ್ಧಿ ಸಾಧ್ಯ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ದಾವಣಗೆರೆ ಜಿಲ್ಲೆಯ ರಾಜನಹಳ್ಳಿ ಹರಿಹರ ತಾಲ್ಲೂಕು ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಜಿಗಳು ವಹಿಸಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಕುರಿತು ಪ್ರವಚನ ನೀಡಿದರು.

ಮಹಿಳಾ ಮತ್ತು ಮಕ್ಕಳು ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷರಾದ ವಿ.ಎಸ್. ಉಗ್ರಪ್ಪ ಅವರು ಮಾತನಾಡಿ ಸಿದ್ದರಾಮಯ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಏಳುವರೆ ಸಾವಿರ ಕೋಟಿ ಮೀಸಲಾಗಿತ್ತು ಅದನ್ನು ಇಪ್ಪತ್ತೆಂಟು ಸಾವಿರ ಕೋಟಿಗೆ ಏರಿಸಿದ್ದಾರೆ ಮತ್ತು ವಿಧಾನ ಸೌಧದ ಮುಂಭಾಗದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಪ್ರತಿಮೆ ಸ್ಥಾಪನೆಗೆ ಕಾರಣಕರ್ತರಾಗಿದ್ದಾರೆ, ರಾಜ್ಯದ ಯಾವುದಾದರೊಂದು ವಿಶ್ವ ವಿದ್ಯಾಲಯಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಅವರ ಹೆಸರಿಡಬೇಕು ಎಂದರು.

ಅರಸೀಕೆರೆ ಕ್ಷೇತ್ರದ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಹೆಚ್.ಡಿ.ದೇವೇಗೌಡ ಅವರೇ ಮೂಲ ಕಾರಣ ಅವರ ಸಂಸದರ ನಿಧಿಯಿಂದ ಹತ್ತು ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ವೇತಾ ದೇವರಾಜ್, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು ಹಾಗೂ ಮಧುಗಿರಿ ಕ್ಷೇತ್ರದ ಶಾಸಕರಾದ ಕೆ.ಎನ್.ರಾಜಣ್ಣ, ಅರಸೀಕೆರೆ ನಗರಸಭೆ ಅಧ್ಯಕ್ಷರಾದ ಎಂ.ಸಮೀಉಲ್ಲಾರವರು, ಅರಸೀಕೆರೆ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಜಿ.ಎಸ್. ಚಂದ್ರಶೇಖರ್, ಪ.ಪಂಗಡ ವಿಭಾಗದ ಅಧ್ಯಕ್ಷರಾದ ವದಿಗೆರೆ ರಮೇಶ್, ವಾಲ್ಮೀಕಿ ಸಮಾಜದ ಮುಖಂಡರಾದ ಪಾರ್ಥಸಾರಥಿ, ಬಸವಲಿಂಗಪ್ಪ, ಶಶಿಧರ, ಕೇಶವ ಜಿ., ವಿಜಯಲಕ್ಷ್ಮೀ, ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಮುದಾಯದ ಮುಖಂಡರು, ಸದಸ್ಯರು, ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

(ಎನ್‍ಬಿಎನ್‍)

Leave a Reply

comments

Related Articles

error: