ಮೈಸೂರು

ವರದಿ ಬಂದ ನಂತರ ಮುಂದಿನ ನಿರ್ಧಾರ: ಸಿಎಂ ಸಿದ್ದರಾಮಯ್ಯ

ರಾಯಚೂರಿನಲ್ಲಿ ನಡೆದ ಟಿಪ್ಪು ಜಯಂತಿ ಆಚರಣೆಯ ಸಭಾಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಅಶ್ಲೀಲ ಚಿತ್ರಗಳನ್ನು ನೋಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತಕ್ಷಣವೇ ಸಚಿವರಿಂದ ವರದಿ ನೀಡುವಂತೆ ಕೇಳಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿ ಈ ಪ್ರಕರಣ ನಿಜವೋ ಸುಳ್ಳೋ ಗೊತ್ತಿಲ್ಲ. ಪ್ರಕರಣದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ದೂರವಾಣಿ ಮೂಲಕ ನಾನು ತನ್ವೀರ್ ಸೇಠ್ ಅವರ ಬಳಿ ವರದಿ ಕೇಳಿದ್ದೇನೆ. ವರದಿ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.

ಅವರಿಂದ ರಾಜೀನಾಮೆ ಪಡೆದುಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ರಾಜೀನಾಮೆ ಕೇಳುವುದಕ್ಕೆ ಮುನ್ನ ಘಟನೆಯ ಬಗ್ಗೆ ತಿಳಿದುಕೊಳ್ಳಬೇಕಲ್ಲವೇ? ಬಿಜೆಪಿಯವರು ಸದನದೊಳಗೆ ಎಲ್ಲರ ಎದುರು ಅಶ್ಲೀಲ ದೃಶ್ಯ ನೋಡಿದ್ದರು. ಅದಕ್ಕೆ ರಾಜೀನಾಮೆಗೆ ಆಗ್ರಹಿಸಿದ್ದೆವು. ಇದೀಗ ವರದಿ ಬರಲಿ ಆ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ತನ್ವೀರ್ ಸೇಠ್ ಅವರಿಂದ ವಿವರಣೆ ಪಡೆದ ನಂತರ ಪ್ರತಿಕ್ರಿಯೆ ನೀಡುತ್ತೇನೆ. ಮಾಧ್ಯಮದವರು ಟಿವಿಯಲ್ಲಿ ತೋರಿಸಿದ ತಕ್ಷಣ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ವರದಿ ಬರಲಿ ನಂತರ ನೋಡೋಣ ಎಂದರು.

Leave a Reply

comments

Related Articles

error: