ಮೈಸೂರು

ಮನುಷ್ಯ-ಮನುಷ್ಯರ ನಡುವೆ ದ್ವೇಷ ಬಿತ್ತಬಾರದು: ಜ್ಞಾನಪ್ರಕಾಶ ಸ್ವಾಮೀಜಿ

ಸಮಾಜದ ಶಾಂತಿ ಕದಡಿ ಮನುಷ್ಯ ಮನುಷ್ಯರ ನಡುವೆ ದ್ವೇಷ ಬಿತ್ತುವವರು ಆತಂಕವಾದಿಗಳು ಎಂದು ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ಮೈಸೂರಿನ ಉದಯಗಿರಿ ಮತ್ತು ಕೆಸರೆಯ ಟಿಪ್ಪು ಸುಲ್ತಾನ್ ಟ್ರಸ್ಟ್ ವತಿಯಿಂದ ಮಿಲಾದ್ ಭಾಗ್ ನಲ್ಲಿ ಏರ್ಪಡಿಸಿದ್ದ ಟಿಪ್ಪು ಜಯಂತಿಯನ್ನು ಜ್ಞಾನಪ್ರಕಾಶ ಸ್ವಾಮೀಜಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಟಿಪ್ಪು ಹಿಂದೂ ವಿರೋಧಿಯಾಗಿರಲಿಲ್ಲ. ಆತ ಎಂದಿಗೂ ರಾಷ್ಟ್ರದ್ರೋಹಿಗಳನ್ನು ಕ್ಷಮಿಸಲಿಲ್ಲ. ಟಿಪ್ಪು ಕೊಡಗಿನವರ ತಲೆ ಕಡಿದನೆಂದು ಆತನನ್ನು ದೂಷಿಸಲಾಗುತ್ತದೆ. ಆದರೆ ಮರಾಠ ಪೇಶ್ವೆಗಳು ಅದೆಷ್ಟು ಮಂದಿಯ ತಲೆ ಕಡಿದು ಹಾಕಿಲ್ಲ ಎಂದು ಪ್ರಶ್ನಿಸಿದರಲ್ಲದೇ ಯಾರೂ ಸಮಾಜದ ಶಾಂತಿ ಕದಡಬಾರದು. ವೃಥಾ ಮನುಷ್ಯ ಮನುಷ್ಯರ ನಡುವೆ ದ್ವೇಷ ಬಿತ್ತಬಾರದು ಎಂದರು.

ಟಿಪ್ಪು ಧಾರ್ಮಿಕ, ಆರ್ಥಿಕ, ಸಾಮಾಜಿಕ ಸುಧಾರಣೆಗಳನ್ನು ಮಾಡಿದರು. ದಲಿತರು, ಮುಸ್ಲಿಮರಿಗೆ ಭೂಮಿಯ ಹಕ್ಕನ್ನು ನೀಡಿದರು. ಆತ ಮತಾಂಧನೇ ಆಗಿದ್ದರೆ ಶ್ರೀರಂಗಪಟ್ಟಣದಲ್ಲಿ ರಂಗನಾಥ ದೇಗುಲ ಉಳಿಯುತ್ತಿರಲಿಲ್ಲ. ಅವರ ಆದರ್ಶಗಳನ್ನು ಭಾವನಾತ್ಮಕವಾಗಿ ಎಲ್ಲರೂ ಗೌರವಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರಪಾಲಿಕೆಯ ಸದಸ್ಯ ಸಂದೇಶಸ್ವಾಮಿ, ಸರ್ ಖಾಜಿ ಮಹಮ್ಮದ್ ಉಸ್ಮಾನ್ ಷರೀಫ್, ಎಸ್.ಡಿ.ಪಿ.ಐ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಖಲಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: