ಕರ್ನಾಟಕಪ್ರಮುಖ ಸುದ್ದಿ

ಚಳಿಗಾಲದ ಅಧಿವೇಶನ ಪ್ರಾರಂಭ: ಶಾಸಕರು, ಸಚಿವರ ಗೈರು

ಬೆಳಗಾವಿ,ನ.13-ಸುವರ್ಣಸೌಧದಲ್ಲಿ ಸೋಮವಾರದಿಂದ ಆರಂಭಗೊಂಡಿರುವ 8ನೇ ಚಳಿಗಾಲದ ಅಧಿವೇಶನದ ಮೊದಲ ದಿನವೇ ಬಹುತೇಕ ಶಾಸಕರು, ಸಚಿವರು ಗೈರಾಗಿದ್ದಾರೆ.

ಕಲಾಪದ ಆರಂಭಕ್ಕೂ ಮುನ್ನ ಅಧಿವೇಶನದಲ್ಲಿ ಕೇವಲ 17 ಮಂದಿ ಶಾಸಕರು ಮಾತ್ರ ಹಾಜರಾಗಿದ್ದನ್ನು ಅಸಮಾಧಾನಗೊಂಡ ಸ್ಪೀಕರ್ ಕೆ.ಬಿ.ಕೋಳಿವಾಡ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು. ನಂತರ ಕಲಾಪ ಆರಂಭಗೊಂಡಿತ್ತು.

ಕಲಾಪದಲ್ಲಿ 53 ಶಾಸಕರು ಹಾಗೂ ಕೇವಲ 8 ಮಂದಿ ಸಚಿವರು ಮಾತ್ರ ಭಾಗವಹಿಸಿದ್ದರು. ಉಳಿದ ಶಾಸಕರು, ಸಚಿವರು ಎಲ್ಲಿಗೆ ಹೋಗಿರುವುದಾಗಿ ಸ್ಪೀಕರ್ ಪ್ರಶ್ನಿಸಿದರು. ಇದಕ್ಕೆ ಬಿಜೆಪಿ ಶಾಸಕರು ಧ್ವನಿಗೂಡಿಸಿದರು.

ವಿಧಾನಸಭೆಯಲ್ಲಿ ಮಾಜಿ ಸಿಎಂ ಧರಂಸಿಂಗ್, ಪತ್ರಕರ್ತೆ ಗೌರಿ ಲಂಕೇಶ್ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಕಲಾಪ ಪುನರಾರಂಭಗೊಂಡಿತು. ಖಾಸಗಿ ವೈದ್ಯರ ಮುಷ್ಕರದ ಬಗ್ಗೆ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಪ್ರಸ್ತಾಪಿಸಿ, ಖಾಸಗಿ ವೈದ್ಯರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ಮತ್ತೊಂದೆಡೆ ವಿಧಾನಪರಿಷತ್ ನಲ್ಲಿ ಒಬ್ಬರೂ ಸಚಿವರು ಭಾಗವಹಿಸದಿರುವುದನ್ನು ಖಂಡಿಸಿ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿ ಶಾಸಕರು ಸಭಾತ್ಯಾಗ ನಡೆಸಿದರು. (ವರದಿ-ಎಂ.ಎನ್)

Leave a Reply

comments

Related Articles

error: