ಮೈಸೂರುಸಿಟಿ ವಿಶೇಷ

ಶ್ರೀ ತುಳಸಿ ದಯೆ ತೋರಮ್ಮಾ: ಶ್ರೀಮನ್ನಾರಾಯಣ-ತುಳಸಿಯ ವಿವಾಹಕ್ಕೆ ಕ್ಷಣಗಣನೆ

ಅದೇನೋ ಗೊತ್ತಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ-ಹರಿದಿನಗಳಿಗೆ ವಿಶೇಷ ಮಹತ್ವವಿದೆ. ಪ್ರತಿಯೊಂದು ಹಬ್ಬವನ್ನೂ ಸಂಪ್ರದಾಯದಂತೆ ಆಚರಣೆ ಬದ್ಧವಾಗಿ ಹಿಂದಿನಿಂದಲೂ ಆಚರಿಸಿಕೊಂಡೇ ಬಂದಿದ್ದಾರೆ. ಇಲ್ಲಿನ ಎಲ್ಲ ಹಬ್ಬಗಳೂ ತನ್ನದೇ ಆದ ವಿಶಿಷ್ಟ ರೂಪವನ್ನು ಪಡೆದುಕೊಂಡಿದ್ದು ಶ್ರೇಷ್ಠತೆಯನ್ನು ಉಳಿಸಿಕೊಂಡಿದೆ. ದೀಪಗಳ ಹಬ್ಬ ದೀಪಾವಳಿಯ ನಂತರ ಕಾರ್ತೀಕ ಮಾಸದ ಉತ್ಥಾನ ದ್ವಾದಶಿಯಂದು ಬರುವ ಹಬ್ಬವೇ ತುಳಸೀ ಹಬ್ಬ. ಶುಕ್ರವಾರದ ಶುಭ ಅವಸರದಲ್ಲಿಂದು ಮತ್ತೆ ತುಳಸಿ ಹಬ್ಬ ಅಂದರೆ ತುಳಸೀ ವಿವಾಹ ಬಂದಿದೆ.

ಸರ್ವೇ ಸಾಮಾನ್ಯವಾಗಿ ಎಲ್ಲರ ಮನೆಯ ಅಂಗಳದ ಮಧ್ಯೆ ನಳನಳಿಸುವ ತುಳಸೀಕಟ್ಟೆ ಉತ್ಥಾನ ದ್ವಾದಶಿಯಂದು ನವವಧುವಾಗಿ ಶೃಂಗಾರಗೊಂಡಿರುತ್ತದೆ. ಈ ದಿನ ತುಳಸಿಯ ವಿವಾಹಕ್ಕಾಗಿ ಸಕಲ ರೀತಿಯಿಂದಲೂ ಸಿದ್ಧತೆ ನಡೆಸಲಾಗುತ್ತಿದೆ.  ಉತ್ಥಾನ ಅಂದರೆ ಏಳುವುದು ಎಂದು ಅರ್ಥ. ಹಾಯಾಗಿ ಬೃಂದಾವನದಿ ಪವಡಿಸಿದ ಶ್ರೀಮನ್ನಾರಾಯಣನನ್ನು ಅಂದು ನಿದ್ದೆಯಿಂದ ಎಬ್ಬಿಸಲಾಗುತ್ತದೆ. ಅಂದು ಶ್ರೀಮನ್ನಾರಾಯಣನಿಗೂ ತುಳಸಿಗೂ ವಿವಾಹ ಮಾಡಿಸುತ್ತಾರೆ ಎನ್ನುವ ನಂಬಿಕೆ ಎಲ್ಲರದ್ದು. ಉತ್ಥಾನ ದ್ವಾದಶಿಯ ದಿನ ಸಾಯಂಕಾಲವಾಗುತ್ತಿದ್ದಂತೆ ಎಲ್ಲರ ಮನೆಯಲ್ಲಿಯೂ ಸಡಗರ ಸಂಭ್ರಮ ಮನೆ ಮಾಡಲಿದೆ. ಕಾರಣ ಶ್ರೀಮನ್ನಾರಾಯಣ ಹಾಗೂ ತುಳಸಿ ವಿವಾಹ ಬಂಧನಕ್ಕೆ ಒಳಗಾಗಲಿದ್ದು, ವಿವಾಹ ಮಹೋತ್ಸವಕ್ಕೆ ಕ್ಷಣಗಣನೆ ನಡೆದಿದೆ. ಮೈಸೂರು ನಗರದಲ್ಲಿ ಜನತೆ ಹೂ, ಹಣ್ಣು, ಬೆಟ್ಟದ ನೆಲ್ಲಿ ಕೊನೆಗಳು, ಮಾವಿನ ಎಲೆಗಳ ಗೊಂಚಲುಗಳ ಖರೀದಿಯಲ್ಲಿ ತೊಡಗಿದ್ದಾರೆ.

ಈ ದಿನ ವನಿತೆಯರದ್ದೇ ಪಾರುಪತ್ಯ. ಸಿಂಧೂರಗಳಿಂದ ಮನೆಯನ್ನು, ತುಳಸೀಕಟ್ಟೆಯನ್ನು ರಂಗವಲ್ಲಿಗಳಿಂದ ಸಿಂಗರಿಸಿ, ಕಬ್ಬಿನಿಂದ ಮಂಟಪವನ್ನು ನಿರ್ಮಿಸಿ ಅದಕ್ಕೆ ಅಗಸೆ ಹಾಗೂ ಬೆಟ್ಟನೆಲ್ಲಿ ಹಾಗೂ ತುಳಸಿಯ ಕೊನೆಗಳಿಂದ ಮದುವಣಗಿತ್ತಿಯಾಗಿ ಅಲಂಕರಿಸಿ, ಮಾವಿನ ಎಲೆಯ ತೋರಣ ಕಟ್ಟಿ ನೆಲ್ಲಿಕಾಯಿಯನ್ನು ಕೊರೆದು ಬತ್ತಿ ಹಾಕಿ ದೀಪ ಬೆಳಗುತ್ತಾರೆ.  “ಶ್ರೀ ತುಳಸಿ ದಯೆ ತೋರಮ್ಮಾ, ಅರಿಸಿನ ಕುಂಕುಮ ಸೌಭಾಗ್ಯ ನೀನಿತ್ತು ಚಿರಕಾಲ ಕಾಪಾಡಮ್ಮಾ” ಎಂದು ಹಾಡನ್ನು ಹೇಳುತ್ತಾ ಮುತ್ತೈದೆತನಕ್ಕಾಗಿ ತಾಯಿಯಲ್ಲಿ ಸೆರಗೊಡ್ಡುತ್ತಾರೆ.

ಉತ್ಥಾನ ದ್ವಾದಶಿಗೆ ಕಿರು ದೀಪಾವಳಿ ಎನ್ನುವ ಹೆಸರೂ ಇದೆ. ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಅವಲಕ್ಕಿಯಿಂದ ಮಾಡಿದ ತಿನಿಸುಗಳನ್ನು ನೈವೇದ್ಯಕ್ಕೆ ನೀಡಲು ತಯಾರಿ ನಡೆಸುವುದರಲ್ಲಿ ಹೆಂಗಳೆಯರು ತೊಡಗಿಸಿಕೊಂಡಿರುತ್ತಾರೆ. ಕಾರ್ತೀಕ ಶುದ್ಧ ದ್ವಾದಶಿಯ ದಿನ ತುಳಸಿಯನ್ನು ಪೂಜಿಸಿ, ಆಕೆಯ ದರ್ಶನವನ್ನು ಪಡೆಯುವುದರಿಂದ ಸಪ್ತಜನ್ಮಕೃತ ಪಾಪಗಳು ದೂರಾಗುತ್ತವೆ ಎನ್ನುವುದು ಹಿರಿಯರ ನಂಬಿಕೆ.

ತುಳಸಿ ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯಕರವಾದದ್ದು. ಶ್ರೀಕೃಷ್ಣನ ತುಲಾಭಾರದ ಸಮಯದಲ್ಲಿ ಸತ್ಯಭಾಮೆಯ ಖಜಾನೆಯಲ್ಲಿದ್ದ ನಗನಾಣ್ಯವನ್ನೆಲ್ಲಾ ಹಾಕಿದರೂ ಕೃಷ್ಣನ ತೂಕಕ್ಕೆ ಅದು ಸರಿ ಹೊಂದುತ್ತಿರಲಿಲ್ಲ. ಆದರೆ ತಾಯಿ ರುಕ್ಮಿಣಿ ಒಂದೇ ಒಂದು ದಳ ತುಳಸಿಯನ್ನು ಭಕ್ತಿಭಾವದಿಂದ ಅರ್ಪಿಸಿದಾಗ ಕೃಷ್ಣನ ತೂಕಕ್ಕೆ ಸರಿಹೊಂದಿತು ಎಂದು ಪುರಾಣಗಳು ತಿಳಿಸುತ್ತವೆ.

ಸುಲಭಾ, ಸುರನಾ, ಬಹುಮಂಜರಿ, ದೇವದುಂದುಬಿ, ಪಾವನೀ, ವಿಷ್ಣುಪ್ರಿಯೆ, ಹೀಗೆ ಹತ್ತು ಹಲವು ಹೆಸರುಗಳಿಂದ ಕರೆಯಿಸಿಕೊಳ್ಳುವ ತುಳಸಿಯನ್ನು ಸ್ಪರ್ಶಿಸಿದರೆ ಪಾವಿತ್ರ್ಯತೆ ಬರುತ್ತದೆ. ನಮಿಸುವುದರಿಂದ ರೋಗ ನಿವಾರಣೆಯಾಗುತ್ತದೆ. ತುಳಸೀತೀರ್ಥ ಪ್ರೋಕ್ಷಣೆಯಿಂದ ಆಯುಷ್ಯ ವೃದ್ಧಿಯಾಗುತ್ತದೆ. ಉತ್ಥಾನ ದ್ವಾದಶಿಯಂದು ತುಳಸಿಗಿಡವನ್ನು ನೆಡುವುದರಿಂದ ಶ್ರೀಕೃಷ್ಣನ ಸನ್ನಿಧಿ ಲಭ್ಯವಾಗುತ್ತದೆ. ಕೃಷ್ಣ ತುಳಸಿಯನ್ನು ಪೂಜಿಸಿದರೆ ಮೋಕ್ಷಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಅನಾದಿ ಕಾಲದಿಂದಲೂ ಬೆಳೆದುಕೊಂಡು ಬಂದಿದೆ.

ತುಳಸಿ ಔಷಧಕಾರಕವಾಗಿದ್ದು ಹುಲುಸಾಗಿ ಬೆಳೆಸಿದಲ್ಲಿ ಸೊಳ್ಳೆಗಳು ಇರುವುದಿಲ್ಲ. ಮಕ್ಕಳಿಗೆ ಕೆಮ್ಮು ನೆಗಡಿ ಬಂದರೆ ಅದರ ರಸ ಕುಡಿಸುವುದರಿಂದ ಶೀಘ್ರ ಶಮನಗೊಳ್ಳಲಿದೆ. ತುಳಸಿ ಹಿಂದೂಗಳಿಗಷ್ಟೇ ಪವಿತ್ರವಲ್ಲ. ಎಲ್ಲ ಜನಾಂಗದವರೂ ಇದನ್ನು ಪೂಜಿಸುತ್ತಾರೆ. ಗೌರವಿಸುತ್ತಾರೆ.

ಒಟ್ಟಿನಲ್ಲಿ ತುಳಸಿ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದ್ದು ಸಕಲ ರೋಗ ನಿವಾರಕ, ಸಕಲಾಭಿಷ್ಟದಾಯಕಳಾಗಿ, ವರಸಿದ್ಧಿದಾಯಕಳಾಗಿ, ಎಲ್ಲರ ಮನೆಯಂಗಳದಲ್ಲಿ ನೆಲೆಸುತ್ತಾಳೆ.

~ ಸಂತೋಷ್ ಕೆ.

Leave a Reply

comments

Related Articles

error: