ದೇಶಪ್ರಮುಖ ಸುದ್ದಿ

ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟಾಭಿಷೇಕ ಸದ್ಯಕ್ಕಿಲ್ಲ! ಗುಜರಾತ್ ಕದನ ಕಾರಣ

ನವದೆಹಲಿ (ನ.14): ಸೋನಿಯಾ ಪುತ್ರ ರಾಹುಲ್‍ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಪಟ್ಟಾಭಿಷೇಕ ನೆರವೇರಿಸುವ ಕಾರ್ಯಕ್ರಮ ಈ ಬಾರಿಯೂ ಮುಂದಕ್ಕೆ ಹೋಗಿದೆ.

ಹಲವಾರು ಬಾರಿ ಈ ಕಾರ್ಯಕ್ರಮಕ್ಕೆ ಮುಹೂರ್ತ ನಿಶ್ಚಯ ಮಾಡಲಾಗಿದೆಯಾದರೂ ಯಾವುದೋ ಕಾರಣದಿಂದ ಮುಂದೂಡುತ್ತಾ ಬರಲಾಗಿದೆ. ಇದೀಗ ಮತ್ತೆ ರಾಹುಲ್ ಗಾಂಧಿ ಅವರನ್ನು ಅಧ್ಯಕ್ಷ ಗಾದಿಗೇರಿಸುವ ಕಾರ್ಯಕ್ಕೆ ಮತ್ತೆ ತಾತ್ಕಾಲಿಕ ತಡೆ ನೀಡಲಾಗಿದೆ. ಆದರೆ ಈ ಬಾರಿಯ ಕಾರಣ ಮಾತ್ರ ವಿಶೇಷ. ಅದು ಗುಜರಾತ್ ಚುನಾವಣೆ.

ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ಗುಜರಾತ್ ಚುನಾವಣೆ ಮಹತ್ವದ ವಿಷಯವಾಗಿದ್ದು ಬಿಜೆಪಿಗಂತೂ ಪ್ರತಿಷ್ಠೆಯ ಕಣ. ಮೋದಿಯವರು ಪ್ರಧಾನಿಯಾಗುವುಕ್ಕೂ ಮೊದಲು ಅವರ ಕಾರ್ಯಶಾಲೆಯಾಗಿದ್ದ ಗುಜರಾತ್‍ ಉಳಿಸಿಕೊಳ್ಳುವುದು ಬಿಜೆಪಿಗೆ ಪ್ರತಿಷ್ಠೆಯಾದರೆ, ತನ್ನ ಬದ್ಧ ವೈರಿಯನ್ನು ತವರಿನಲ್ಲೇ ಕಟ್ಟಿಹಾಕುವ ಮೂಲಕ ಬಿಜೆಪಿಗೆ ಪಾಠ ಕಲಿಸಬೇಕು ಎನ್ನುವುದು ಕಾಂಗ್ರೆಸ್ ಹಂಬಲ.

ಹೀಗಿರುವಾಗ ಅನುಭವಿ ಸೋನಿಯಾ ಗಾಂಧಿಯವರೇ ಪಕ್ಷವನ್ನು ಮುನ್ನಡೆಸಿದರೆ ಸೂಕ್ತ ಎಂದು ಚಿಂತಿಸಿರುವ ಕಾಂಗ್ರೆಸ್ ಪಕ್ಷವು ಗುಜರಾತ್ ಚುನಾವಣೆ ಮುಗಿಯುವ ವರೆಗೆ ರಾಹುಲ್ ಪಟ್ಟಾಭಿಷೇಕವನ್ನು ಮುಂದೂಡಿದೆ.  ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲೇ ಚುನಾವಣೆ ಎದುರಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.

ಈ ಹಿಂದೆ ವರದಿಯಾದಂತೆ ನವೆಂಬರ್ ಅಂತ್ಯದಲ್ಲಿ ರಾಹುಲ್ ಗಾಂಧಿಗೆ ಎಐಸಿಸಿ ಅಧ್ಯಕ್ಷ ಪಟ್ಟ ನೀಡಲು ನಿರ್ಧರಿಸಲಾಗಿತ್ತು. ಆದರೆ ಗುಜರಾತ್ ಚುನಾವಣೆ ಹಿನ್ನಲೆಯಲ್ಲಿ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸಲು ಕಾಂಗ್ರೆಸ್ ಮುಖಂಡರು ನಿರ್ಧರಿಸಿದ್ದಾರೆ. ನಿನ್ನೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತಾದರೂ, ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇರುವುದರಿಂದ ರಾಹುಲ್ ಗಾಂಧಿ ಅವರನ್ನು ಸಧ್ಯಕ್ಕೆ ಅಧ್ಯಕ್ಷ ಗಾದಿಗೇರಿಸಲು ಹಿಂದೇಟು ಹಾಕಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

(ಎನ್‍ಬಿಎನ್‍)

Leave a Reply

comments

Related Articles

error: