ಮೈಸೂರು

ಸೋಲು – ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ತುಂಬಾ ಮುಖ್ಯ: ಪ್ರೊ.ಎಸ್.ನಂಜುಂಡಯ್ಯ

ಯುವಕರ ಮೇಲೆ ಈ ದೇಶದ ಭವಿಷ್ಯ ನಿಂತಿದೆ. ಅಬ್ದುಲ್ ಕಲಾಂರವರು 2020 ರ ವೇಳೆಗೆ ಭಾರತ ಭವ್ಯ ಭಾರತವಾಗುತ್ತದೆ ಎಂದು ಭರವಸೆಯ ಮಾತುಗಳನ್ನಾಡಿದ್ದರು. ಅದು ಸಾಧ‍್ಯವಾಗಬೇಕಾದರೆ ವ್ಯಕ್ತಿತ್ವ ವಿಕಸನವಾಗಬೇಕು. ಇಂದಿನ ಕಾರ್ಯಕ್ರಮವು ಚರ್ಚಾ ಸ್ಪರ್ಧೆ ಆಗಿರುವುದರಿಂದ ವಿದ್ಯಾರ್ಥಿಗಳಿಗೆ ಮಾತೇ ಬಂಡವಾಳವಾಗಿದೆ. ವಿದ್ಯಾರ್ಥಿಗಳಲ್ಲಿ ಭಾಷಣ ಕಲೆ ಬೆಳೆಯಬೇಕು. ಮಾತಿನಿಂದ ಎಲ್ಲವನ್ನು ಗೆಲ್ಲಬಹುದಾಗಿದೆ. ಸ್ಪರ್ಧೆಯಲ್ಲಿ ಸೋಲು – ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ತುಂಬಾ ಮುಖ್ಯ ಎಂದು ನಟರಾಜ ಸಂಸ್ಥೆಯ ಸಂಸ್ಥಾಪನಾ ಪ್ರಾಂಶುಪಾಲ ಮತ್ತು ನಿವೃತ್ತ ಪ್ರಾಧ‍್ಯಾಪಕ ಪ್ರೊ.ಎಸ್.ನಂಜುಂಡಯ್ಯ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಶ್ರೀ ನಟರಾಜ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ‘ಮಹಿಳಾ ಮೀಸಲಾತಿಯಿಂದ ಮಾತ್ರ ಮಹಿಳೆಯರ ಸಬಲೀಕರಣ ಸಾಧ‍್ಯ’ ಎಂಬ ವಿಷಯದ ಬಗ್ಗೆ ಅಂತರ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಮುಕ್ತ ವಿವಿ ಸಹಪ್ರಾಧ್ಯಾಪಕಿ ಹಾಗೂ ಕವಯತ್ರಿ ಡಾ. ಕವಿತಾ ರೈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ,  ಮೀಸಲಾತಿ ಮತ್ತು ಸಬಲೀಕರಣ ಎಂಬ ಎರಡು ಪರಿಕಲ್ಪನೆಗಳಿಂದ ಸಮಾಜದ ಬದಲಾವಣೆ ಮತ್ತು ಅಭಿವೃದ್ಧಿ ಸಾಧ್ಯ. ಮೀಸಲಾತಿ ಹೊರಮುಖ ಚಲನೆಯಾಗಿದ್ದು, ಆರ್ಥಿಕ ಮತ್ತು ರಾಜಕೀಯ ನೆಲೆಗೆ ಸಂಬಂಧಿಸಿದ್ದಾಗಿದೆ. ಆದರೆ ಸಬಲೀಕರಣ ಒಳಮುಖ ಚಲನೆಯಾಗಿದ್ದು, ಸಮಾಜದ ಒಳಗೆ ಚಲಿಸುತ್ತದೆ. ಮೀಸಲಾತಿ ಎಂಬುದು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾದುದಲ್ಲ. ಅದು ಸಂವಿಧಾನದ ಪ್ರತಿಯೊಬ್ಬ ನಾಗರೀಕನಿಗೂ ಸಿಗಬೇಕಾದುದಾಗಿದೆ.

ಆದರೆ ಇಂದು ಈ ಸಮಾಜದಲ್ಲಿ ನ್ಯಾಯೋಚಿತವಾಗಿ ಸಿಗಬೇಕಾಗಿರುವ ಸಮಾನತೆಯಿಂದ ಕೆಲವರು ವಂಚಿತರಾಗಿದ್ದಾರೆ. 6ನೇ ಪಂಚವಾರ್ಷಿಕ ಯೋಜನೆಯ ನಂತರ ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಇಂದು ಲಕ್ಷಾಂತರ ಮಹಿಳೆಯರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ, ಸ್ತರಗಳಲ್ಲಿ ದುಡಿಯುತ್ತಿದ್ದಾರೆ. ರಾಜಕೀಯ ಅವಕಾಶಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಭಾರತೀಯ ಕುಟುಂಬ ವ್ಯವಸ್ಥೆ ಇಂದು ಒಂದು ನೆಲೆಗಟ್ಟಿನಲ್ಲಿ ನಿಂತಿದೆ ಎಂದರೆ ಅದು ಹೆಣ್ಣಿನಿಂದ ಮಾತ್ರ ಎಂದು ಹೇಳಿ ಮಹಿಳೆಯರ ಸಾಧನೆಯ ಬಗ್ಗೆ ಹೆಮ್ಮೆಪಟ್ಟರು.

ಕಾರ್ಯಕ್ರಮದ ಅಧ‍್ಯಕ್ಷರಾಗಿ ನಟರಾಜ ಕಾಲೇಜಿನ ಪ್ರಾಂಶುಪಾಲ ಜಿ.ಪ್ರಸಾದಮೂರ್ತಿ, ತೀರ್ಪುಗಾರರಾಗಿ ವಿಜಯವಾಣಿ ಹಿರಿಯ ಉಪ ಸಂಪಾದಕ ಎಚ್.ಪಿ.ಕೃಷ್ಣಶೆಟ್ಟಿ, ಟಿ.ನರಸೀಪುರ ಪಿ.ಆರ್.ಎಂ.ವಿಜಯ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ವೀರಭದ್ರಸ್ವಾಮಿ ಹಾಗೂ ಪ್ರಾಧ್ಯಾಪಕಿ ವಿ. ಭಾರತಿ ಉಪಸ‍್ಥಿತರಿದ್ದರು.

Leave a Reply

comments

Related Articles

error: