ಮೈಸೂರು

ಖಾಸಗಿ ಆಸ್ಪತ್ರೆ ವೈದ್ಯರ ವಿರುದ್ಧ ಪ್ರತಿಭಟನೆ

ಮೈಸೂರು,ನ.15- ಕರ್ನಾಟಕ ಖಾಸಗಿ ಆಸ್ಪತ್ರೆಗಳ ಕಾಯಿದೆ ತಿದ್ದುಪಡಿ ವಿದೇಯಕ ಜಾರಿಗೆ ತರಬಾರದೆಂದು ಮುಷ್ಕರ ನಡೆಸುತ್ತಿರುವ ಖಾಸಗಿ ಆಸ್ಪತ್ರೆ ವೈದ್ಯರ ವಿರುದ್ಧ ಕರ್ನಾಟಕ ಕಾವಲು ಪಡೆ ಕಾರ್ಯಕರ್ತರು ಬುಧವಾರ ನಗರದ ನ್ಯಾಯಾಲಯದ ಮುಂಭಾಗವಿರುವ ಗಾಂಧಿ ಪುತ್ಥಳಿ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರ ಕರ್ನಾಟಕ ಖಾಸಗಿ ಆಸ್ಪತ್ರೆಗಳ ಕಾಯಿದೆ ತಿದ್ದುಪಡಿ ವಿದೇಯಕ ಜಾರಿಗೆ ತರುತ್ತಿರುವುದು ಸ್ವಾಗತಾರ್ಹ. ಆದರೆ ಇದನ್ನು ವಿರೋಧಿಸಿ ವೈದ್ಯರು ಪ್ರತಿಭಟನೆ ನಡೆಸುತ್ತಿರುವುದು ಖಂಡನೀಯ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರಿ ಖಾಸಗಿ ಆಸ್ಪತ್ರೆಗಳ ಮಾಲೀಕರಿಗೆ, ಖಾಸಗಿ ವೈದ್ಯರ ಮುಷ್ಕರಕ್ಕೆ ಹೆದರಿ ಕಾಯಿದೆ ಜಾರಿಗೆ ತರುವುದರಿಂದ ಹಿಂದೆ ಸರಿಯಬಾರದು ಎಂದು ಆಗ್ರಹಿಸಿದರು.

ಖಾಸಗಿ ಆಸ್ಪತ್ರೆಯ ವೈದ್ಯರ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ವೈದ್ಯರು ಪ್ರತಿಭಟನೆ ಹಿಂಪಡೆಯದಿದ್ದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಕೇಂದ್ರ, ರಾಜ್ಯ ಸರ್ಕಾರಗಳ ಅನುದಾನ, ಸೌಲಭ್ಯಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಖಾಸಗಿ ಆಸ್ಪತ್ರೆಗಳ ವೈದ್ಯರು ನಾಗರಿಕರಿಗೆ ತೊಂದರೆ ನೀಡದೆ ವೈದ್ಯಕೀಯ ಸೇವೆ ಪ್ರಾರಂಭಿಸಬೇಕು. ಇಲ್ಲವಾದಲ್ಲಿ ವೈದ್ಯಕೀಯ ಸೇವೆ ನೀಡದ ಖಾಸಗಿ ಆಸ್ಪತ್ರೆಗಳಿಗೆ ಬೀಗ ಜಡಿಯುವ ಚಳವಳಿ ಪ್ರಾರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕಾವಲುಪಡೆ ರಾಜ್ಯಾಧ್ಯಕ್ಷ ಎಂ.ಮೋಹನ್ ಕುಮಾರ್ ಗೌಡ, ಟಿ.ರವೀಂದ್ರ, ನಾಗರಾಜು, ವೀರುಕುಮಾರ್, ಕೃಷ್ಣಮೂರ್ತಿ, ಆನಂದರಾಜೇ ಅರಸ್, ಆರ್.ರಾಜು, ಯೋಗೇಶ್, ನಾಗೇಶ್ ಇತರರು ಭಾಗವಹಿಸಿದ್ದರು. (ವರದಿ-ಎಚ್.ಎನ್, ಕೆ.ಎಸ್, ಎಂ.ಎನ್)

Leave a Reply

comments

Related Articles

error: