ಪ್ರಮುಖ ಸುದ್ದಿಮೈಸೂರು

83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ವಾಹನ ‘ಕನ್ನಡ ತೇರು’ ನಕಲು ?

ಮೈಸೂರು,ನ.15:- ಯಾವುದಾದರೂ ಕೃತಿ ನಕಲು ಮಾಡುವುದು, ಅಂಕಪಟ್ಟಿ ನಕಲು ಹೀಗೆ ಹಲವು ಕ್ಷೇತ್ರಗಳಲ್ಲಿ ನಡೆಯುತ್ತಿದ್ದ ನಕಲು 83ನೇ ಅಖಿಲ  ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ನಡೆದಿದೆ. ಅದೇನು ಅಂತ ಆಶ್ಚರ್ಯ ಆಗ್ತಾ ಇದ್ಯಾ

ಸಾಂಸ್ಕತಿಕ ನಗರಿ ಮೈಸೂರಿನಲ್ಲಿ ನ.24ರಿಂದ 26ರವರೆಗೆ ಮೂರು ದಿನಗಳ ಕಾಲ ನಡೆಯುವ  83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ವಾಹನವಾದ ‘ಕನ್ನಡ ತೇರನ್ನು  ನಕಲು ಮಾಡಲಾಗಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಇದು ಕಸಾಪ ಮತ್ತು ಜಿಲ್ಲಾಡಳಿತವನ್ನು ತೀವ್ರ ಮುಜುಗರಕ್ಕೀಡು ಮಾಡಿದೆ ಎನ್ನಲಾಗುತ್ತಿದೆ. ಸುತ್ತೂರು ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜನ್ಮ ಶತಮಾನೋತ್ಸವದ ಅಂಗವಾಗಿ ‘ರಾಜೇಂದ್ರ ಜ್ಯೋತಿಯಾತ್ರೆ ರಥ’ದ ನಕಲು ಪ್ರತಿ ಇದಾಗಿದ್ದು, ರಥ ಮೂಲಸ್ವರೂಪದಲ್ಲಿ ಯಾವುದೇ ಬದಲಾವಣೆ ಇಲ್ಲ. ವಿಷಯಕ್ಕೆ ತಕ್ಕಂತೆ ಮೇಲ್ಭಾಗದಲ್ಲಿ ಕೆಲ ಮಾರ್ಪಾಡು ಮಾಡಿಕೊಳ್ಳಲಾಗಿದೆ. ಉಳಿದಂತೆ ಯಥಾವತ್ತಾಗಿ ಇದೆ ಎನ್ನಲಾಗಿದೆ.

ರಾಜೇಂದ್ರ ಶ್ರೀಗಳ ರಥದಲ್ಲಿ ಏನಿತ್ತು ಎಂದು ನೋಡಿದಾಗ ವಾಹನಕ್ಕೆ ಫೈಬರ್ ಮೂಲಕ ಸುತ್ತೂರು ಮಠದ ಮಾದರಿಯಲ್ಲಿ ರಥವನ್ನು ಸೃಷ್ಟಿಸಲಾಗಿತ್ತು. ಕಲ್ಲಿನ ಕಂಬಗಳು, ಕಲ್ಲಿನ ಚಕ್ರ, ಜೋಡಿ ಆನೆ- ನಂದಿ, ಸುತ್ತಲೂ ಆನೆ ಬಳಸಿ ಕಲಾತ್ಮಕ ಕೆತ್ತನೆ ಮೂಡುತ್ತು.  ರಥದಲ್ಲಿ ಮಂಟಪವಿರಿಸಿ ಅದರ ಮೇಲೆ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. 2016ರಂದು ಮೇ 5ರಂದು ಉದ್ಘಾಟನೆಗೊಂಡ ಈ ರಥ 5 ರಾಜ್ಯಗಳಲ್ಲಿ ಅಂದಾಜು 6 ಸಾವಿರ ಕಿ.ಮೀ. ಕ್ರಮಿಸಿ ಮರಳಿ 2017ರ ಆಗಸ್ಟ್ 27ರಂದು ನಡೆದ ಶ್ರೀಗಳ ಜನ್ಮಶತಮಾನೋತ್ಸವ ವೇಳೆಗೆ ಸುತ್ತೂರಿಗೆ ಮರಳಿ ಬಂದಿತ್ತು. ನುಡಿಜಾತ್ರೆ ಪ್ರಚಾರಕ್ಕೆ ‘ಕನ್ನಡ ತೇರು’ ಹೆಸರಿನ ಪ್ರಚಾರ ವಾಹನಕ್ಕೆ ಶನಿವಾರ ಸಚಿವ ಡಾ. ಎಚ್.ಸಿ. ಮಹದೇವಪ್ಪ ಚಾಲನೆ ನೀಡಿದ್ದರು. ಇದನ್ನು ಅನುಮಾನದಿಂದ ಪರಿಶೀಲಿಸಿದಾಗ ಗೊತ್ತಾಗಿದೆ. ಉಭಯ ರಥಗಳ ತಯಾರು ಮಾಡಿದ ಕಲಾವಿದರು ಒಬ್ಬರೇ. ಅವರೇ ಪ್ರಕಾಶ್ ಚಿಕ್ಕಪಾಳ್ಯ.

ಹಾಗಾದರೆ ಕನ್ನಡ ತೇರಿನಲ್ಲಿ ಏನಿದೆ ಎಂದು ಪರಿಶೀಲಿಸಿದರೆ  ರಾಜೇಂದ್ರ ಶ್ರೀಗಳ ರಥದ ಮೂಲ ಮಾದರಿಯನ್ನು ಕನ್ನಡ ತೇರಿನ ರಥದಲ್ಲೂ ಹಾಗೆ ಉಳಿಸಿಕೊಳ್ಳಲಾಗಿದೆ. ಮರದ ಬಣ್ಣದ ಮಂಟಪದ ಕಂಬಗಳು ಸೇರಿ ರಥದ ಹಸಿರು ಬಣ್ಣ ಬದಲಿಸಿ, ಕನ್ನಡ ತೇರಿನ ರಥಕ್ಕೆ ಸಂಪೂರ್ಣವಾಗಿ ಹಳದಿ ಬಣ್ಣ ಬಳಿಯಲಾಗಿದೆ. ಹಳೇ ರಥದ ಮುಂದೆ ಇದ್ದ ಜೋಡಿ ನಂದಿ ವಿಗ್ರಹವು ಇಲ್ಲಿ ಹಿಂಭಾಗಕ್ಕೆ ಬಂದಿದ್ದರೆ, ಹಿಂದೆ ಇದ್ದ ಜೋಡಿ ಆನೆಗಳು ಮುಂಭಾಗಕ್ಕೆ ಸ್ಥಳಾಂತರಗೊಂಡಿವೆ. ರಥದ ಎರಡು ಬದಿಯಲ್ಲಿ ಸುತ್ತೂರು ಮಠ ಮಾದರಿ ಬದಲಿಗೆ ಮೈಸೂರು ಅರಮನೆ ಮತ್ತು ಕರ್ನಾಟಕ ನಕಾಶೆಯಲ್ಲಿ ಭುವನೇಶ್ವರಿದೇವಿ ಚಿತ್ರ ರಚಿಸಲಾಗಿದೆ.  ಉಳಿದಂತೆ ಕಲ್ಲಿನ ಕಂಬಗಳು, ಕಲ್ಲಿನ ಚಕ್ರ, ರಥ ಸುತ್ತಲಿನ ಆನೆ ಬಳಸಿರುವ ಕಲಾತ್ಮಕ ಕೆತ್ತನೆ ಯಥಾವತ್ತಾಗಿದೆ. ಇಲ್ಲೂ ರಥದ ಮೇಲೆ ಮಂಟಪವಿದೆ. ಆದರೆ, ಅದರ ಮಧ್ಯಭಾಗದಲ್ಲಿ ಮುಚ್ಚಲಾಗಿದೆ. ಈ ಭಾಗದ ಎಡ-ಬಲ ಬದಿಯಲ್ಲಿ ಭುವನೇಶ್ವರಿದೇವಿಯ ಪ್ರತಿಮೆ ಇಡಲಾಗಿದೆ. ವಾಹನದ ಮುಂಭಾಗದಲ್ಲಿ ಒಂದೆಡೆ ಕರ್ನಾಟಕ ಸರ್ಕಾರದ ಲಾಂಛನ, ಇನ್ನೊಂದೆಡೆ ಕಸಾಪ ಲಾಂಛನ, ಅದರ ಕೆಳಗೆ ಸಮ್ಮೇಳನದ ಲಾಂಛನ, 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೊ.ಚಂದ್ರಶೇಖರ್ ಪಾಟೀಲ ಅವರ ಭಾವಚಿತ್ರ, ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ, ಕಸಾಪ ಅಧ್ಯಕ್ಷರ ಭಾವಚಿತ್ರವನ್ನು ಹೊಸದಾಗಿ ಹಾಕಲಾಗಿದೆ. ಕನ್ನಡ ತೇರಿನ ಬಲಭಾಗದಲ್ಲಿ ಚಾಲಕನ ಕ್ಯಾಬಿನ್ ಬಾಗಿಲಿನ ಮೇಲೆ ‘ಅಕ್ಷರ ಜಾತ್ರೆಗೆ ಅಕ್ಕರೆಯ ಸ್ವಾಗತ’ ಫಲಕವಿದೆ. ಅಲ್ಲದೆ, ಜ್ಞಾನಪೀಠ ಪಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳ ಭಾವಚಿತ್ರವಿದೆ. ರಥ ಹತ್ತು ಕಂಬಗಳು, ಅವುಗಳ ಮೇಲಿನ ಕುಸುರಿ ಮಾದರಿ ವಿನ್ಯಾಸ ಒಂದೇ ರೀತಿ ಇದೆ. ಇದನ್ನು ಸಿದ್ಧಪಡಿಸಲು ಅಂದಾಜು 5 ಲಕ್ಷ ರೂ. ಖರ್ಚಾಗಿದೆ. ಒಟ್ಟಿನಲ್ಲಿ ಈ ರಥ ನಕಲು ರೂಪ ಪಡೆದುಕೊಂಡಿದೆ ಎಂಬ ಮಾತು ಕೇಳಿ ಬಂದಿದ್ದು, ಇನ್ನೂ ಏನೇನು ನಕಲು ಹೊರ ಬೀಳಲಿವೆಯೋ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: