ಕರ್ನಾಟಕ

ವಿದ್ಯಾಥಿಯು ನಕಾರಾತ್ಮಕವಾಗಿರದೆ ಸಕಾರಾತ್ಮಕವಾಗಿ ಬೆಳೆಯಬೇಕು : ಡಾ. ಕೆ.ಹರೀಶ್‍ಕುಮಾರ್

ರಾಜ್ಯ(ಚಾಮರಾಜನಗರ)ನ.15:- ಪ್ರತಿಯೊಬ್ಬ ನಾಗರಿಕನು ತನ್ನ ಕಾಯಕವನ್ನು ಗೌರವಿಸಬೇಕು, ವೃತ್ತಿ ಶ್ರೇಷ್ಠತೆಯನ್ನು ಅರಿಯಬೇಕು.ಪ್ರತಿ ವಿದ್ಯಾಥಿಯು ನಕಾರಾತ್ಮಕವಾಗಿರದೆ ಸಕಾರಾತ್ಮಕವಾಗಿ ಬೆಳೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಹರೀಶ್‍ಕುಮಾರ್ ತಿಳಿಸಿದರು.

ಬೆಳ್ಳಿಹಬ್ಬ ವರ್ಷಾಚರಣೆ ಪ್ರಯುಕ್ತ ರಂಗತರಂಗ ಟ್ರಸ್ಟ್ ನಿಂದ ಸಂತೇಮರಳ್ಳಿಯ ಸರ್ಕಾರಿ ಸಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಆದರ್ಶ ಹಾಗೂ ವ್ಯವಸ್ಥಿತ ಸಮಾಜ ಕಟ್ಟುವಲ್ಲಿ ನಾವು ವಿಫಲರಾಗಿದ್ದೇವೆ. ಇನ್ನೊಬ್ಬರಿಗಾಗಿ ಬದುಕುವ ಕಲೆಯನ್ನು ಮರೆತಿದ್ದೇವೆ. ವಿವೇಚನ ರಹಿತವಾಗಿ ವರ್ತಿಸುವ ಅಸಹ್ಯಕರ ವಾತಾವರಣದಲ್ಲಿ ಜೀವಿಸಿದ್ದೇವೆ. ಮಕ್ಕಳಾಗಿದ್ದಾಗ ಸಿಗುತ್ತಿದ್ದ ಪ್ರೀತಿ ವಾತ್ಸಲ್ಯ ಈಗ ಸಿಗುತ್ತಿಲ್ಲ. ಜಗತ್ತಿನಲ್ಲಿ ಪ್ರೀತಿ ದುಬಾರಿಯಾಗಿದೆ. ಬಾಲ್ಯದ ದಿನಗಳಿಂದಲೆ ದೇಶದ ಸಂಸ್ಕೃತಿ ಪರಂಪರೆಯತ್ತ ಹೆಜ್ಜೆ ಇರಿಸಬೇಕು. ಉತ್ತಮ ಜ್ಞಾನ ಮತ್ತು ನಡವಳಿಕೆಯನ್ನು ಮೈಗೂಡಿಸಿಕೊಳ್ಳಬೇಕು. ಬಿಳಿ ಹಾಳೆಯಂತೆ ಪರಿಶುದ್ದ ಮನಸ್ಸು ಮತ್ತು ಆದರ್ಶ ಮೌಲ್ಯಗಳನ್ನು ಸಂಪಾದಿಸಲು ಶ್ರಮಿಸಬೇಕು. ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಬದ್ದತೆ ಈ ನಾಡಿನ ಪ್ರತಿಯೊಬ್ಬನದಾಗಿರಲಿ ಎಂದು ತಿಳಿಸಿದರು. ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್.ಎನ್.ಋಗ್ವೇದಿ ಮಾತನಾಡಿ ಮಕ್ಕಳ ಮನಸ್ಸು ಶುದ್ದ ಹಾಲಿನಂತೆ ಎಂದು ರಾಮಕೃಷ್ಣ ಪರಮಹಂಸರು ಹೇಳಿದ್ದಾರೆ ಮುಗ್ದ ಮಕ್ಕಳು ದೇವರಿಗೆ ಸಮಾನ. ವಿದ್ಯಾರ್ಥಿಗಳು ಯೋಚಿಸಿ-ಯೋಜಿಸಿ-ಸಾಧಿಸಿ ತತ್ವವನ್ನು ಗುರಿಯಾಗಿಸಿಕೊಂಡು ಜೀವನ ಸಾರ್ಥಕತೆ ಹೊಂದಲು ಪ್ರಯತ್ನಿಸಬೇಕು. ರಾಷ್ಟ್ರ ಪ್ರೇಮವಿಲ್ಲದ ವ್ಯಕ್ತಿ ಎಷ್ಟೇ ಶ್ರೀಮಂತನಾದರೂ, ಜ್ಞಾನ ಹೊಂದಿದ್ದರೂ ಅಪ್ರಯೋಜಕ. ಯಾವ ವ್ಯಕ್ತಿ ಸ್ವಯಂ ನಿಯಂತ್ರಣ ಹೊಂದಲು ಸಾಧ್ಯವಿಲ್ಲವೊ ಅವನು ದೇಶಕ್ಕಾಗಿ ಶ್ರಮಿಸಲಾರ. ಸಮಸಮಾಜದ ಕನಸನ್ನು ಪ್ರತಿಯೊಬ್ಬ ನಾಗರಿಕನು ಹೊಂದಿ ಉತ್ತಮ ಚಾರಿತ್ರ್ಯ ಮತ್ತು ಸಾಂಸ್ಕೃತಿಕ ಪ್ರಜ್ಞೆ ಬಿತ್ತುವ ಹೊಣೆಗಾರಿಕೆ ಎಲ್ಲರ ಮೇಲಿದೆ. ರಂಗತರಂಗ ಸಾಂಸ್ಕೃತಿಕವಾಗಿ ಸಂಸ್ಕೃತಿ ಮತ್ತು ಪರಂಪರೆಯನ್ನು ಕಟ್ಟುವಲ್ಲಿ ಅನನ್ಯತೆ ಮೆರೆದಿದೆ. ಕಳೆದ ಇಪ್ಪತೈದು ವರ್ಷಗಳ ಹಿಂದೆ ಅರಂಭವಾದ ರಂಗತರಂಗ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಪ್ರಶಂಸೆಗೆ ಪಾತ್ರವಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಲಕ್ಷ್ಮಿಪತಿ, ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಎ.ಶಿವಣ್ಣ, ರಂಗತರಂಗ ಟ್ರಸ್ಟ್ ಅಧ್ಯಕ್ಷ ಸೋಮಶೇಖರ ಬಿಸಲ್ವಾಡಿ,ಪ್ರಭಾರ ಪ್ರಾಂಶುಪಾಲ ಕೆ.ಪ್ರಸಾದಸ್ವಾಮಿ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: