ಕರ್ನಾಟಕ

ರಾಜ್ಯ ಕಾಂಗ್ರೆಸ್ ಸರಕಾರದಿಂದ ಜನಪ್ರಿಯ ಆಡಳಿತ : ಡಾ.ಪುಷ್ಪಾಅಮರನಾಥ್

ರಾಜ್ಯ(ಚಾಮರಾಜನಗರ)ನ.15:-  ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜ್ಯ ಕಾಂಗ್ರೆಸ್ ಸರಕಾರದ ನಾಲ್ಕು ವರ್ಷದ ಆಡಳಿತದಲ್ಲಿ ಉತ್ತಮ ಆಡಳಿತ ನಡೆಸಿ ಕರ್ನಾಟಕ ರಾಜ್ಯವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಲು ಅನ್ನ ಭಾಗ್ಯ ಯೋಜನೆ ಜಾರಿ ಮಾಡಿ ಪಡಿತರಿಗೆ ಉಚಿತ ಆಹಾರ ಪದಾರ್ಥ ವಿತರಣೆ ಮಾಡುವುದರ ಮೂಲಕ ರಾಜ್ಯದಲ್ಲಿ ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯದಲ್ಲಿ ಸಮಾನ ಸೌಲಭ್ಯ ನೀಡಿದ್ದು ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕೆ.ಪಿ.ಸಿ.ಸಿ. ರಾಜ್ಯ ಕಾರ್ಯದರ್ಶಿ ಹಾಗೂ ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಡಾ.ಪುಷ್ಪಾ ಅಮರ್ ನಾಥ್ ತಿಳಿಸಿದರು.

ಯಳಂದೂರು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಗೆ ಬರುವ ಬೂಂದಂಬಳ್ಳಿ ಮೋಳೆ ಗ್ರಾಮದಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರದ ಸಾಧನೆಯ ಕಿರುಹೂತ್ತಿಗೆ ಪುಸ್ತಕವನ್ನು ಮತದಾರರ ಮನೆಗೆ ವಿತರಣೆ ಮಾಡಿದ ಬಳಿಕ ಮಾತನಾಡಿದ ಅವರು, ಯಳಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ವಿ.ಚಂದ್ರು ಅವರು ಚಾಮರಾಜನಗರ ಜಿಲ್ಲೆಯಲ್ಲಿ ಪ್ರಥಮವಾಗಿ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮ ಮುಗಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕ್ಷೇತ್ರದ ಶಾಸಕ ಎಸ್.ಜಯಣ್ಣ ಅವರು ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದು ಕ್ಷೇತ್ರ ಅಭಿವೃಧ್ದಿಗೆ ವಿಶೇಷ ಅನುದಾನಗಳನ್ನು ತಂದು ಅಭಿವೃಧ್ದಿ ಪಡಿಸುತ್ತಿದ್ದಾರೆ. ಈಗಾಗಲೆ ಸಂತೆಮರಹಳ್ಳಿ ಹೋಬಳಿ ವ್ಯಾಪ್ತಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ತಂದು ಕುಡಿಯುವ ನೀರಿನ ಸಮಸ್ಯೆ ನೀಗಿಸಿದ್ದಾರೆ. ಉಮ್ಮತ್ತೂರು ಗ್ರಾಮದ ಕೆರೆಗೆ ನದಿ ಮೂಲದಿಂದ ನೀರು ತುಂಬಿಸುವ ಯೋಜನೆ, ಕುದೇರು ಗ್ರಾಮದಲ್ಲಿ ಚಾಮುಲ್ ಡೇರಿ ಸ್ಥಾಪನೆ ಸೇರಿದಂತೆ ಕ್ಷೇತ್ರದಲ್ಲಿ ಶಾಸಕ ಎಸ್.ಜಯಣ್ಣ ಅವರು ಜನಪ್ರಿಯ ಶಾಶ್ವತ ಕೆಲಸಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ ಭರಸೆಗಳನ್ನು ಈಡೇರಿಸಿದ್ದಾರೆ. ಅಲ್ಲದೆ ರಾಜ್ಯ ರೈತರು ಬರಗಾಲದಲ್ಲೂ ಹಸಿವಿನಿಂದ ಬಳಲಬಾರದು ಎಂದು ಅನ್ನ ಭಾಗ್ಯ ಯೋಜನೆ ಜಾರಿಗೊಳಿಸಿದರು. ರೈತರಿಗೆ ಕ್ಷೀರಭಾಗ್ಯ, ಕೃಷಿಭಾಗ್ಯ, ವಿದ್ಯಾಸಿರಿ, ಪಶುಭಾಗ್ಯ, ಕೃಷಿ ಪತ್ತಿನ ಸಹಕಾರ ಬ್ಯಾಂಕ್‍ಗಳಲ್ಲಿ ರೈತರು ಮಾಡಿದ 50 ಸಾವಿರ ಸಾಲ ಮನ್ನಾ ಮಾಡಿದ್ದಾರೆ. 3 ಲಕ್ಷದವರಗೆ ಶೂನ್ಯ ಬಡ್ಡಿ ಸಾಲವನ್ನು ರೈತರಿಗೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನೀಡಲಾಗುತ್ತಿದೆ. ಇನ್ನೂ ಗ್ರಾಮೀಣ ಪ್ರದೇಶದ ರೈತರ ಹೊಲ ಗದ್ದೆಗಳಿಗೆ ಸಂರ್ಪಕ ಕಲ್ಪಿಸುವ ರಸ್ತೆಗಳನ್ನು ನಿರ್ಮಾಣಮಾಡಲಾಗಿದೆ. ವಿವಾಹವಾಗದ ಮಹಿಳೆಯರು ಗೌರವದಿಂದ ಬದುಕಲು ಸಿದ್ದರಾಮಯ್ಯ ಸರಕಾರದಿಂದ ಮನಸ್ವಿನಿ ಯೋಜನೆ ಜಾರಿಗೆ ತಂದು ಅವರು ಬದುಕು ಕಟ್ಟಿಕೊಳ್ಳಲು ಸಾಲಸೌಲಭ್ಯ ನೀಡಲಾಗುತ್ತಿದೆ. ಲೈಂಗಿಕ ಅಲ್ಪ ಸಂಖ್ಯಾತರಿಗೆ ದೇಶದಲ್ಲೆ ಮೊದಲ ಬಾರಿಗೆ ಮಾಸಾಶನ ನೀಡಿ 1.95 ಕೋಟಿ ಖರ್ಚು ಮಾಡಲಾಗಿದೆ. ವಿಕಲಚೇತನ ವ್ಯಕ್ತಿಗಳ ಸಬಲೀಕರಣಗೂಳಿಸಲು ಸಾಲ ನೀಡಲಾಗುತ್ತಿದೆ. ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಂದ 74.50 ಲಕ್ಷ ಮಂದಿಗೆ ಪ್ರಯೋಜವಾಗಿದೆ. ಮೂರು ವರ್ಷದಲ್ಲಿ 9 ಸಾವಿರ ಕೋಟಿಗಳಷ್ಟು ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಯಳಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ.ಚಂದ್ರು, ಮಾಜಿ ಶಾಸಕ ಎಸ್.ಬಾಲರಾಜು, ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಕಿನಕಹಳ್ಳಿ.ಬಿ.ರಾಚಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಜೆ.ಯೋಗೇಶ್, ಸದಸ್ಯ ಮೂರ್ತಿ, ಗೂಳೀಪುರ ಗ್ರಾ.ಪಂ.ಅಧ್ಯಕ್ಷ ದೊಡ್ಡತಾಯಮ್ಮ, ಅಂಬಳೆ ಗ್ರಾ.ಪಂ.ಅಧ್ಯಕ್ಷ ಶಿವರಾಮು, ಉಪಾಧ್ಯಕ್ಷ ಶಂಕರ್, ಬೂದಂಬಳ್ಳಿ ಚಿನ್ನಸ್ವಾಮಿ, ಮಹದೇವಸ್ವಾಮಿ, ಚಿಕ್ಕರಂಗಶೆಟ್ಟಿ, ಜಿಲ್ಲಾ ಅಹಿಂದ ಅಧ್ಯಕ್ಷ ವೈ.ಕೆ.ಮೋಳೆ ದೊಡ್ಡಯ್ಯ, ಜಯರಾಜು, ವೈ.ಕೆ.ಮೋಳೆ ರಾಜು ಸೇರಿದಂತೆ ಇತರರು ಹಾಜರಿದ್ದರು. (ಜಿ.ಎನ್,ಎಸ್.ಎಚ್)

Leave a Reply

comments

Related Articles

error: