ಕರ್ನಾಟಕಪ್ರಮುಖ ಸುದ್ದಿ

ವಿವಿಧ ಇಲಾಖೆ ಕಚೇರಿಗಳಿಗೆ ಜಿಪಂ ಸಿಇಓ ಡಾ. ಕೆ. ಹರೀಶ್ ಕುಮಾರ್ ದಿಢೀರ್ ಭೇಟಿ : ಸಮಯಕ್ಕೆ ಸರಿಯಾಗಿ ಹಾಜರಾಗದ 15 ಅಧಿಕಾರಿಗಳಿಗೆ ನೋಟೀಸ್

ರಾಜ್ಯ(ಚಾಮರಾಜನಗರ)ನ. 15 :- ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಜಿಲ್ಲಾಡಳಿತ ಭವನದಲ್ಲಿರುವ ವಿವಿಧ ಇಲಾಖೆ ಕಚೇರಿಗಳಿಗೆ ಇಂದು ದಿಢೀರ್ ಭೇಟಿ ನೀಡಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರ ಹಾಜರಾತಿ ಪರಿಶೀಲಿಸಿದರು.

ಇಂದು ಬೆಳಿಗ್ಗೆ 10 ಗಂಟೆಗೆ ಕಚೇರಿ ಅವಧಿ ಪ್ರಾರಂಭವಾಗುತ್ತಿದ್ದಂತೆಯೇ ಜಿಲ್ಲಾಡಳಿತ ಭವನದ ಮಹಡಿಯಲ್ಲಿ ಇರುವ ಇಲಾಖೆ ಕಚೇರಿಗಳಿಗೆ ಯಾವ ಮುನ್ಸೂಚನೆಯನ್ನು ನೀಡದೇ ಅನಿರೀಕ್ಷಿತವಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಕುಮಾರ್ ಭೇಟಿಕೊಟ್ಟರು. ಕಚೇರಿ ಪ್ರವೇಶಿಸಿದ ಕೂಡಲೇ ಹಾಜರಾತಿ ಪುಸ್ತಕ ಪಡೆದು ಒಟ್ಟು ಕಚೇರಿಯ ಅಧಿಕಾರಿ ಸಿಬ್ಬಂದಿ ಹಾಗೂ ಹಾಜರಾತಿಯಲ್ಲಿ ದಾಖಲಾಗಿರುವವರ ಸಂಖ್ಯೆಯನ್ನು ಹರೀಶ್ ಕುಮಾರ್ ಅವರು ಪರಿಶೀಲಿಸಿದರು. ಮೊದಲಿಗೆ ಕಾರ್ಮಿಕ ಇಲಾಖೆಗೆ ಭೇಟಿ ಕೊಟ್ಟ ವೇಳೆ ಅಲ್ಲಿನ ಜಿಲ್ಲಾ ಕಾರ್ಮಿಕ ಅಧಿಕಾರಿ ಇರದಿರುವುದು ಕಂಡುಬಂತು. ಉಳಿದ ಸಿಬ್ಬಂದಿಯಿಂದ ಕಚೇರಿ ಹಾಜರಾತಿ ವಿವರ ಪಡೆದರು. ಬಳಿಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೀನುಗಾರಿಕೆ ಇಲಾಖೆ, ಸಹಕಾರ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಖಾದಿ ಗ್ರಾಮೋದ್ಯೋಗ, ಕೈಮಗ್ಗ ಜವಳಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಆಹಾರ ನಾಗರಿಕ ಸರಬರಾಜು ನಿಗಮ ಸೇರಿದಂತೆ ಇತರೆ ಇಲಾಖೆ ಕಚೇರಿಗಳಿಗೆ ಭೇಟಿ ಕೊಟ್ಟರು. ಈ ಸಂದರ್ಭದಲ್ಲಿ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ನಿಗದಿತ ವೇಳೆಗೆ ಹಾಜರಾಗದಿರುವುದು ಕಂಡುಬಂತು. ಪ್ರತಿ ಇಲಾಖೆಯಲ್ಲೂ ಹಾಜರಾತಿವಹಿಯನ್ನು ಕೂಲಂಕುಶವಾಗಿ ಪರಿಶೀಲಿಸಿದರು. ಕಚೇರಿ ಅವಧಿಯಲ್ಲಿ ನಿಗದಿತ ವೇಳೆಗೆ ಹಾಜರಾಗದಿದ್ದ 15 ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.   ನಾನು ನಿಮ್ಮ ಕಚೇರಿಗೆ ಭೇಟಿ ನೀಡಿದ ಸಮಯದಲ್ಲಿ ಹಾಜರಾತಿ ವಹಿ ಪರಿಶೀಲಿಸಿದಾಗ ಕೆಲ ಸಿಬ್ಬಂದಿ ಹಾಜರಾತಿ  ಹಾಕಿರುವುದು ಕಂಡುಬಂದಿದೆ. ನಿಗದಿತ ಸಮಯದಲ್ಲಿ ಕರ್ತವ್ಯಕ್ಕೆ ಹಾಜರಾಗುವುದು ಮುಖ್ಯ ಕೆಲಸವಾಗಿದೆ. ಆದರೆ ಕಚೇರಿಯ ನಿಗದಿತ ಸಮಯದಲ್ಲಿ ನೀವು ಮತ್ತು ನಿಮ್ಮ ಸಿಬ್ಬಂದಿ ಕಚೇರಿಗೆ ಹಾಜರಾಗಿಲ್ಲದಿರುವ ಬಗ್ಗೆ ನೋಟೀಸ್ ತಲುಪಿದ 24 ಗಂಟೆಯೊಳಗೆ ವಿವರಣೆ ನೀಡಬೇಕು. ತಪ್ಪಿದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದೆಂದು ನೋಟೀಸ್‍ನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸಬೇಕು. ಸಿಬ್ಬಂದಿಗೂ ಈ ಬಗ್ಗೆ ತಿಳಿವಳಿಕೆ ನೀಡಬೇಕು. ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಬೇಕೆಂದು ಡಾ. ಹರೀಶ್ ಕುಮಾರ್ ಅವರು ನೋಟಿಸಿನಲ್ಲಿ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ. (ಆರ್.ವಿ.ಎಸ್,ಎಸ್.ಎಚ್)

Leave a Reply

comments

Related Articles

error: