ಮೈಸೂರು

ತೆರಿಗೆ ಪಾವತಿಗೆ ಹಳೆಯ ನೋಟುಗಳ ಬಳಕೆ

ಪೌರ ಸೇವಾ ಸಂಸ್ಥೆಗಳು ಒದಗಿಸುವ ನಾಗರಿಕ ಸೇವೆಗಳ ಶುಲ್ಕ, ತೆರಿಗೆ, ದಂಡ  ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಶುಲ್ಕ ಪಾವತಿಸಲು ರದ್ದಾಗಿರುವ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಬಳಸಲು ಕೇಂದ್ರ ಸರ್ಕಾರವು ಅವಕಾಶ ಮಾಡಿಕೊಟ್ಟಿದ್ದು, ಮೈಸೂರು ಮಹಾನಗರ ಪಾಲಿಕೆಯೂ ಶುಕ್ರವಾರ ಹಲವು ತೆರಿಗಗಳ ಸಂಗ್ರಹಕ್ಕೆ ಹಳೆಯ ನೋಟುಗಳನ್ನೇ ಸ್ವೀಕರಿಸುತ್ತಿದೆ.

ಕೇಂದ್ರ ಸರ್ಕಾರವು ಗುರುವಾರ ತೆರಿಗೆ ಸ್ವೀಕರಿಸಲು ಹಳೆಯ ನೋಟುಗಳನ್ನು ಸ್ವೀಕರಿಸಬಹುದು ಎಂದು ಆದೇಶ ಹೊರಡಿಸಿದೆ. ಪೌರ ಸೇವಾ ಸಂಸ್ಥೆಗಳು ಒದಗಿಸುವ ನೀರು ಪೂರೈಕೆಯಂತಹ ನಾಗರಿಕ ಸೇವಾ ಶುಲ್ಕ ಮತ್ತು ತೆರಿಗೆ ಪಾವತಿಸಲು ಈ ಹಳೆಯ ನೋಟುಗಳನ್ನು ಶುಕ್ರವಾರ ಮಧ್ಯರಾತ್ರಿಯವರೆಗೆ ಸಾರ್ವಜನಿಕರಿಂದ ಸ್ವೀಕರಿಸಲಾಗುವುದು ಎಂದು ಮನಪಾ ಆಯುಕ್ತ ಜೆ.ಜಗದೀಶ್ ತಿಳಿಸಿದರು.

ಸಿಟಿಟುಡೆಯೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರದ ಆದೇಶದನ್ವಯ ನೀರಿನ ತೆರಿಗೆ, ಕಟ್ಟಡ ತೆರಿಗೆ ಸೇರಿದಂತೆ ವಿವಿಧ ತೆರಿಗೆಗಳಿಗಾಗಿ 500 ಹಾಗೂ 1000 ಮುಖಬೆಲೆಯ ಹಳೆಯ ನೋಟುಗಳನ್ನೇ ಸ್ವೀಕರಿಸಲಾಗುತ್ತಿದೆ ಎಂದರು. ಮೇಯರ್ ಬಿ.ಎಲ್.ಭೈರಪ್ಪ ಮಾತನಾಡಿ ನಾನು ಆಯುಕ್ತರಲ್ಲಿ ಈ ಕುರಿತು ಹಿಂದೆಯೇ ಹೇಳಿದ್ದೆ. ಆದರೆ ಅವರು ಒಪ್ಪಿರಲಿಲ್ಲ. ಇದೀಗ ಕೇಂದ್ರದಿಂದಲೇ ಆದೇಶ ಬಂದಿದೆ. ಸಾರ್ವಜನಿಕರು ಹಳೆಯ ನೋಟುಗಳಿಂದಲೇ ಇಂದು ಸಂಜೆಯವರೆಗೆ ತೆರಿಗೆ ಕಟ್ಟಬಹುದಾಗಿದೆ ಎಂದರು.

ಸರ್ಕಾರಿ ಆಸ್ಪತ್ರೆ, ಹಾಲಿನ ಬೂತ್, ಚಿತಾಗಾರ, ಸ್ಮಶಾನ ಮತ್ತು ಪೆಟ್ರೋಲ್ ಬಂಕ್ , ಔಷಧ ಮಳಿಗೆ, ರೈಲ್ವೆ ಟಿಕೆಟ್ ಗಳಲ್ಲಿ ಈಗಾಗಲೇ ರದ್ದಾದ ನೋಟುಗಳನ್ನು ಸ್ವೀಕರಿಸಲು ಅವಕಾಶ ಮಾಡಿಕೊಟ್ಟಿತ್ತು.

Leave a Reply

comments

Related Articles

error: