ಪ್ರಮುಖ ಸುದ್ದಿಮೈಸೂರು

ಲಿಪಿಯ ಕುರಿತು ಬೇರೆ ಲೇಖಕರು ಬರೆದ ಪುಸ್ತಕ ಓದಿ ತಿಳಿಯುವುದಕ್ಕಿಂತ ಮೂಲ ಲಿಪಿಯಿಂದಲೇ ತಿಳಿಯುವುದು ಒಳ್ಳೆಯದು : ಡಿ.ರಂದೀಪ್

ಮೈಸೂರು,ನ.16:- ಯಾವುದೇ ಲಿಪಿಯ ಕುರಿತಾದರೂ ಬೇರೇ ಬೇರೇ ಲೇಖಕರು ಬರೆದಿರುವ ಪುಸ್ತಕಗಳನ್ನು ಓದಿ ತಿಳಿದುಕೊಳ್ಳುವುದಕ್ಕಿಂತ ಮೂಲ ಲಿಪಿಯ ಮೂಲಕವೇ ತಿಳಿದುಕೊಂಡರೆ ಹೆಚ್ಚಿನ ಅರಿವಾಗಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.

ವಿಶ್ವೇಶ್ವರ ನಗರದಲ್ಲಿರುವ ವಿಭಾಗೀಯ ಪತ್ರಾಗಾರ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಬೆಂಗಳೂರು ವತಿಯಿಂದ ನ.16ರಿಂದ 18ರವರೆಗೆ ಆಯೋಜಿಸಲಾದ ಮೋಡಿ ಲಿಪಿಯ ಕಾರ್ಯಾಗಾರವನ್ನು ಉದ್ಘಾಟಿಸಿ ಹಾಗೂ ಮೋಡಿ ಲಿಪಿ ಕುರಿತ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ನನಗೆ ಮೋಡಿ ಲಿಪಿಯ ಕುರಿತು ಹೆಚ್ಚಿನ ಜ್ಞಾನ ಇರಲಿಲ್ಲ. ದೇವನಾಗರಿ ಲಿಪಿ ಕುರಿತು ಕೇಳಿದ್ದೇನೆ. ಮೋಡಿ ಲಿಪಿ ಇತಿಹಾಸವಿರುವ ಲಿಪಿ. ಪೇಶ್ವೆಯವರ ಕಾಲದಲ್ಲಿ ಮರಾಠಿ ಭಾಷೆಗೆ ಮೂಲವಾದ ಲಿಪಿಯಾಗಿದೆ. ಬೇರೆ ಬೇರೆ ಭಾಷೆಯಲ್ಲಿಯೂ ಲಿಪಿ ಇದೆ. ಹಿಂದಿ, ಗುಜರಾತಿ, ರಾಜಸ್ಥಾನಿ, ಉರ್ದು,ಕನ್ನಡದಲ್ಲಿಯೂ ಕೆಲವು ಲಿಪಿಗಳಿವೆ ಎಂದರು. ಪೆನ್ನನ್ನು ಎತ್ತದೇ ಬರೆಯುವುದು ಮೋಡಿ ಲಿಪಿ. ಇದನ್ನು ತಿಳಿದುಕೊಳ್ಳಲು ವಿಕಿಪಿಡಿಯಾ ಸರ್ಚ್ ಮಾಡಿದಾಗ ಇಷ್ಟು ದೊಡ್ಡ ಇತಿಹಾಸವಿರುವ ಲಿಪಿಯ ಕುರಿತು ಯಾಕೆ ದೊಡ್ಡ ಪ್ರಚಾರವಾಗಿಲ್ಲ, ಯಾಕೆ ಕಾರ್ಯಾಗಾರಗಳಾಗಿಲ್ಲ ಎಂದು ಅನ್ನಿಸಿದ್ದು ನಿಜ. ಮೈಸೂರಿನಲ್ಲೇ ಇದರ ಕಾರ್ಯಾಗಾರ ನಡೆಸುತ್ತಿರುವುದು ಸಂತಸ ನೀಡಿದೆ. ಮೂಲಲಿಪಿಯಲ್ಲಿ ಏನಿದೆಯೋ ಅದನ್ನೇ ತಿಳಿದುಕೊಂಡರೆ ಒಳ್ಳೆಯದು. ಮೋಡಿ ಲಿಪಿ ಬ್ರಿಟಿಷರ ಕಾಲದಲ್ಲಿಯೂ ಉಳಿದಿತ್ತು ಎಂದು ಅನಿಸುತ್ತದೆ. ದಿವಾನ್ ಪೂರ್ಣಯ್ಯನವರ ಕಾಲದಲ್ಲಿದ್ದ ಮೋಡಿ ಲಿಪಿಯ ದಾಖಲೆಗಳನ್ನು ಇನ್ನೂ ಪತ್ರಾಗಾರ ಇಲಾಖೆ ಉಳಿಸಿಕೊಂಡು ಬಂದಿರುವುದು ಶ್ಲಾಘನೀಯ. ಯಾವುದೇ ಬೇರೆ ಲೇಖಕರು ಬರೆದಿರುವುದನ್ನು ಓದಿ ತಿಳಿಯುವುದಕ್ಕಿಂತ ನೇರವಾಗಿ ಕಲಿಯುವುದು ಒಳ್ಳೆಯದು ಮೈಸೂರು ಹೆರಿಟೇಜ್ ನಗರವಾಗಿದ್ದು, ಲಿಪಿ ಕೂಡ ಹೆರಿಟೇಜ್ ಆಗಿದೆ ಎಂದು ತಿಳಿಸಿದರು.  ಮೂರು ದಿನಗಳ ಕಾಲ ಇಲ್ಲಿ ಮೋಡಿ ಲಿಪಿಯ ಕುರಿತು ಕಾರ್ಯಾಗಾರ ನಡೆಸುತ್ತಿದ್ದು, ಲಿಪಿಯ ಕುರಿತು ತಿಳಿದುಕೊಳ್ಳಲು ಸಹಾಯಕವಾಗಲಿದೆ ಎಂದರು.

ಪತ್ರಪಾಲಕ ಡಾ.ಗವಿಸಿದ್ದಯ್ಯ ಮಾತನಾಡಿ   1950ರವರೆಗೆ 11800ಮೂಲದಾಖಲೆಗಳನ್ನು ಸಂಗ್ರಹಣೆ ಮಾಡಿ ಸಂರಕ್ಷಣೆ ಮಾಡಲಾಗಿದೆ. ಚಾರಿತ್ರಿಕ ದಾಖಲೆ ಅಂದರೆ ಪತ್ರರೂಪದಲ್ಲಿರುವ ದಾಖಲೆ ಅಲ್ಲ  ಕನ್ನಡ ಇಂಗ್ಲಿಷ್ ನಲ್ಲಿರುವ ದಾಖಲೆಗಳಷ್ಟೇ ಅಲ್ಲ. ಬೇರೆ ಬೇರೆ ರೂಪದಲ್ಲಿರುವ ದಾಖಲೆಯನ್ನು ಸಂಗ್ರಹಣೆ ಮಾಡಿ ತುರ್ಜುಮೆ ಮಾಡಿ   ಅದನ್ನು ಸಾರ್ವಜನಿಕರಿಗೆ ಆಸಕ್ತ ಸಂಶೋಧಕರಿಗೆ ಒದಗಿಸುವ ಕೆಲಸ ಮಾಡುವುದು ಇಲಾಖೆಯ ಆದ್ಯ ಕರ್ತವ್ಯ. ಈ ದಿಶೆಯಲ್ಲಿ ಹಲವು ದಾಖಲೆಗಳನ್ನು ಅಂದಿನ ಮೈಸೂರು ಮಹಾರಾಜರ ಕಾಲದಲ್ಲಿನ ದಿವಾನ್ ಪೂರ್ಣಯ್ಯನವರ ದಾಖಲೆಗಳ 222ಕಡತಗಳನ್ನು ಸಂಗ್ರಹಣೆ ಮಾಡಿ ಇಟ್ಟಿದ್ದೇವೆ ಅದು ಮೋಡಿಯಲ್ಲಿದೆ. ಕೈ ಎತ್ತಿ ಬರೆದರೆ ಕನ್ನಡ, ಕೈ ಎತ್ತದೆ ಬರೆಯುವುದು ಮೋಡಿ, ಮರಾಠರು, ನಿಜಾಮ, ಆದಿಲ್ ಶಾಹಿಗಳ ಆಡಳಿತ ದಾಖಲೆಗಳು ಮೋಡಿ ಲಿಪಿಯಲ್ಲಿತ್ತು ಎಂದರು. ದಾಖಲೆಗಳನ್ನು ಅಧ್ಯಯನ ಮಾಡುವ ಮೂಲಕ ಅಂದಿನ ಕಾಲದ ತಿಹಾಸ ರಚನೆ ಸಾಧ್ಯ.ಉತ್ತರದಲ್ಲಷ್ಟೇ ಅಲ್ಲದೇ ದಕ್ಷಿಣದಲ್ಲೂ ಲಿಪಿಗಳಿವೆ. ದಾಖಲೆಗಳನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡಿ ಇತಿಹಾಸ ರಚಿಸಬಹುದು. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಸಂಶೋಧನೆ ನಡೆಸುವವರು ಮಾತ್ರ ಕಾಣಸಿಗುತ್ತಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿರುವುದನ್ನು ಮಾತ್ರ ಸಂಶೋಧನೆ ಮಾಡಿ ಲಿಪಿಯಲ್ಲಿರುವುದನ್ನು ಪ್ರಭಾವಶಾಲಿಯಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದರಲ್ಲದೇ ಮುಂದೊಂದು ದಿನ ಲಿಪಿ ಓದಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಬಹುದೆಂದು ಆತಂಕ ವ್ಯಕ್ತಪಡಿಸಿದರು. ಶಾಸನಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರೆ ಅವರು ಮುಂದೆ ಅಳವಡಿಸಿಕೊಳ್ಳಬಹುದು ಎನ್ನುವ ಕಾರಣದಿಂದ ಕಾರ್ಯಾಗಾರ ಆಯೋಜಿಸಲಾಗಿದೆ. ಮೋಡಿ ಎನ್ನುವುದು ಭಾಷೆಯಾಗಿದ್ದು, ಮೋಡಿ ಹೇಗಿದೆ ಹೇಗೆ ಬರೆಯುತ್ತಾರೆ ಎನ್ನುವುದನ್ನು ಕಾರ್ಯಾಗಾರದಲ್ಲಿ ತಿಳಿಸಿಕೊಡುತ್ತಾರೆ. ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಭಾಗೀಯ ಪತ್ರಾಗಾರ ಕಚೇರಿಯ ಉಪನಿರ್ದೇಶಕಿ ಡಾ.ಜೆ.ವಿ.ಗಾಯತ್ರಿ, ಕರ್ನಾಟಕ ರಾಜ್ಯ ಪತ್ರಾಗಾರ ಲಾಖೆಯ ಉಪನಿರ್ದೇಶಕಿ ಡಾ.ಎಸ್.ಅಂಬುಜಾಕ್ಷಿ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: