ಪ್ರಮುಖ ಸುದ್ದಿಮೈಸೂರು

ಕುಂದುಕೊರತೆಯನ್ನು ಆಲಿಸುವ ಫೋನ್ ಇನ್ ಕಾರ್ಯಕ್ರಮ : ಜಿಲ್ಲಾಧಿಕಾರಿಗಳ ಮುಂದೆ ಸಮಸ್ಯೆಗಳ ಸುರಿಮಳೆ ಸುರಿಸಿದ ಸಾರ್ವಜನಿಕರು

ಮೈಸೂರು ನ,16:-ಸಾರ್ವಜನಿಕ ಕುಂದುಕೊರತೆಯನ್ನು ಆಲಿಸುವ ಫೋನ್ ಇನ್ ಕಾರ್ಯಕ್ರಮವನ್ನು ಗುರುವಾರ ಬೆಳಿಗ್ಗೆ 9.30ರಿಂದ 10.30ರವರೆಗೆ  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ಸಾರ್ವಜನಿಕರು ಸಮಸ್ಯೆಗಳ ಸುರಿಮಳೆಯನ್ನೇ ಸುರಿಸಿದರು.

ಮೈಸೂರು ಜಿಲ್ಲೆಯ ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ತಿಳಿಸಲು ಮೈಸೂರು ಜಿಲ್ಲಾಧಿಕಾರಿಗಳಿಗೆ ಗುರುವಾರ ದೂರವಾಣಿ ಮೂಲಕ ಅವಕಾಶ ಮಾಡಿಕೊಡಲಾಗಿತ್ತು. ಜಿಲ್ಲಾಧಿಕಾರಿ ರಂದೀಪ್. ಡಿ ಅವರು  ಕುಂದುಕೊರತೆಗಳನ್ನು ಆಲಿಸಿದರು. ಸಾರ್ವಜನಿಕರಿಂದ ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ದುರಸ್ತಿ ಹಾಗೂ ಕುಡುಯುವ ನೀರಿನ ಸಮಸ್ಯೆಗಳೇ ಕೇಳಿ ಬಂತು. ವಿವಿಧ ತಾಲೂಕು, ನಗರಗಳಿಂದ ಸಾರ್ವಜನಿಕರು ದೂರವಾಣಿ ಮೂಲಕ ತಮ್ಮ ಕುಂದು ಕೊರತೆಗಳು ಮತ್ತು ಸಮಸ್ಯೆಗಳಾದ     ಕುಡಿಯುವ ನೀರು, ಚರಂಡಿ, ರಸ್ತೆ, ವಿದ್ಯುತ್ ದೀಪ, ಶೌಚಾಲಯ, ಪಾರ್ಕಿಂಗ್, ಹಾಸ್ಟೆಲ್, ಬಸ್ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳಿಗೆ ಹೇಳಿಕೊಂಡರು.  ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗುತ್ತದೆ ಎಂದರು. ಈ ಸಮಸ್ಯೆಗಳ ಬಗ್ಗೆ 3 ವಾರದೊಳಗೆ ವರದಿ ನೀಡುವಂತೆ ಅಧಿಕಾರಿಗಳಿಗೂ ತಿಳಿಸಿದರು.
ಮುಂದಿನ ಫೋನ್ ಇನ್ ಕಾರ್ಯಕ್ರಮವನ್ನು ಕಚೇರಿ ಕೆಲಸಗಳಿಗೆ ತೊಂದರೆಯಾಗದಂತೆ 9 ಗಂಟೆಯಿಂದ 10 ಗಂಟೆ ವರೆಗೆ ಹಮ್ಮಿಕೊಳ್ಳಲಾಗುತ್ತದೆ ಎಂದರು. ಸಾರ್ವಜನಿಕರಿಂದ ವ್ಯಕ್ತವಾದ ಸಮಸ್ಯೆಗಳ ವಿವರಗಳು. ಇಂದು ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ 22 ಮಂದಿ ದೂರವಾಣಿ ಮೂಲಕ ತಮ್ಮ ಕುಂದುಕೊರತೆಗಳನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ನಂದಕುಮಾರ್-ಕೆ.ಆರ್.ನಗರ- ಪುರಸಭೆಯಿಂದ ಶೌಚಾಲಯಗಳ ನಿರ್ಮಾಣಕ್ಕೆ ಮೊದಲೆರಡು ಬ್ಯಾಚ್‍ಗೆ  ಹಣ ಬಿಡುಗಡೆ ಆಗಿದೆ. ಉಳಿದ ಬ್ಯಾಚ್‍ಗೆ ಹಣವನ್ನು ಬಿಡುಗಡೆಗೊಳಿಸುವಂತೆ ಕೇಳಿದರು. ಭಾರತಿ-ಹೆಚ್.ಡಿ.ಕೋಟೆ- ಹೆಚ್ಚುವರಿ ಬಸ್ ವ್ಯವಸ್ಥೆ ,ರಸ್ತೆ ಸಮಸ್ಯೆ ಹಾಗೂ ಪಾರ್ಕ್ ವ್ಯವಸ್ಥೆ ಕಲ್ಪಿಸುವಂತೆ ಕೇಳಿದರು. ಲೋಕೇಶ್- ನಂಜನಗೂಡು- ಮೈಸೂರು ನಂಜನಗೂಡು ಎನ್.ಹೆಚ್.ರಸ್ತೆಯಲ್ಲಿ ದೊಡ್ಡ-ದೊಡ್ಡ ಹಳ್ಳಗಳಾಗಿದ್ದು ಅವುಗಳನ್ನು ಮುಚ್ಚುವಂತೆ ಕೋರಿದರು. ಪ್ರಕಾಶ್-ಮೈಸೂರು-ಮೈಸೂರಿನಲ್ಲಿ ಪ್ರವಾಸಿಗರಿಗೆ ಶೌಚಾಲಯ ಸಮಸ್ಯೆ ತುಂಬ ತೊಂದರೆಯಾಗಿದ್ದು ಸರಿಪಡಿಸುವಂತೆ ಕೋರಿದರು. ರಾಶಿ-ಹುಲ್ಲಹಳ್ಳಿ ಗ್ರಾಮ-650 ಕಾಂಕ್ರಿಟ್ ರಸ್ತೆ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ, 3 ತಿಂಗಳಿಂದ ಕಳಪೆ ಮಟ್ಟದ ಕೆಲಸವನ್ನು ಪರಿಶೀಲಿಸಿ ಬೇಗ ಮುಗಿಸುವಂತೆ ಕೋರಿದರು.

ಮೈಸೂರಿನ ಮಹಿಳೆಯೋರ್ವಳು ಕರೆ ಮಾಡಿ ನನ್ನ ಮಗ ಮೈಸೂರಿನಿಂದ ಮಂಡ್ಯ ಕಾಲೇಜಿಗೆ ಪ್ರಯಾಣಿಸಬೇಕಿದ್ದು, ಅವನಿಗೆ ಹಾಸ್ಟೇಲ್ ವ್ಯವಸ್ಥೆ ಬೇಕು. ಪ್ರತಿದಿನ ಹೋಗಿ ಬರುವುದು ಕಷ್ಟವಾಗಲಿದೆ. ಈ ಕುರಿತು ಮಂಡ್ಯ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿ ಸಾಕಾಯಿತು. ಅವರು ಮನವಿಗೆ ಸ್ಪಂದಿಸಿಲ್ಲ. ನೀವಾದರೂ ಈ ಕುರಿತು ಸಹಾಯ ಮಾಡಿ ಎಂದು ಕೇಳಿದಾಗ ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ ನೀವು ಮತ್ತೊಮ್ಮೆ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಅದರ ಪ್ರತಿಯನ್ನು ಮೈಸೂರು ಜಿಲ್ಲಾಧಿಕಾರಿಯವರ ಕಚೇರಿಗೂ ತಲುಪಿಸಿ ಅವರ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಫೋನ್ ಇನ್ ಕಾರ್ಯಕ್ರಮದ ವೇಳೆ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್, ಮನಪಾ ಆಯುಕ್ತ ಜಿ.ಜಗದೀಶ್, ಜಿ.ಪಂ.ಸಿಇಓ ಪಿ. ಶಿವಶಂಕರ್, ಡಿಸಿಪಿ ಡಾ.ವಿಕ್ರಂ ಆಮ್ಟೆ, ರುದ್ರಮುನಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಕಾಂತರಾಜ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: