ಕರ್ನಾಟಕ

ಸಂಸ್ಕರಣಾ ಘಟಕಗಳು ಮತ್ತು ಭೂಬರ್ತಿ ಘಟಕಗಳಲ್ಲಿ 500 ಕೋಟಿ ರೂ.ಗಳಿಗೂ ಹೆಚ್ಚು ಅವ್ಯವಹಾರ ನಡೆದಿದೆ : ಪದ್ಮನಾಭರೆಡ್ಡಿ ಆರೋಪ

ರಾಜ್ಯ(ಬೆಂಗಳೂರು)ನ.16:- ನಗರದ ಹೊರವಲಯದಲ್ಲಿ ಕಸ ಸಂಸ್ಕರಣೆ ಹೆಸರಿನಲ್ಲಿ ಸ್ಥಾಪಿಸಿರುವ ಸಂಸ್ಕರಣಾ ಘಟಕಗಳು ಮತ್ತು ಭೂಬರ್ತಿ ಘಟಕಗಳಲ್ಲಿ 500 ಕೋಟಿ ರೂ.ಗಳಿಗೂ ಹೆಚ್ಚು ಅವ್ಯವಹಾರ ನಡೆದಿದ್ದು, ಕಾಂಗ್ರೆಸ್ ಆಡಳಿತ ಕಸದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟ ಜಂಟಿ ಆಯುಕ್ತರು ಮತ್ತು ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಆಗ್ರಹಿಸಿದ್ದಾರೆ.

ಕಸ ನಿರ್ವಹಣಾ ಘಟಕಗಳನ್ನು ನಿರ್ವಹಣೆ ಮಾಡುತ್ತಿರುವ ಕಂಪೆನಿಗಳು 450 ರಿಂದ 810 ರೂ. ಒಂದು ಟನ್‌ಗೆ ಪಡೆಯುತ್ತಿದ್ದಾರೆ. ಇದರಿಂದ ಪಾಲಿಕೆ ಅಧಿಕಾರಿಗಳಿಗೆ ಯಾವುದೇ ಅಕ್ರಮ ವರಮಾನ ಬಾರದಿದ್ದರಿಂದ ಅನಗತ್ಯ ಕಿರುಕುಳ ನೀಡಿದ್ದರಿಂದ ಕಂಪೆನಿಯವರು ಘಟಕಗಳ ನಿರ್ವಹಣೆಯನ್ನೇ ರದ್ದುಪಡಿಸಿ, ಹಿಂದೆ ಸರಿದಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಘಟಕಗಳ ಲೆಕ್ಕಪತ್ರ ತಪಾಸಣೆ ನಡೆಸಿದಾಗ 2017ರ ಮಾರ್ಚ್‌ನಲ್ಲಿ ದೊಡ್ಡಬಿದರಕಲ್ಲು ಘಟಕದಲ್ಲಿ ಒಂದು ಮೆಟ್ರಿಕ್ ಟನ್ ಕಾಪೋಸ್ಟ್ಗೆ 3647.67 ರೂ. ವೆಚ್ಚ ತಗಲುವುದಾಗಿ ತಿಳಿಸಿದ್ದರು. ಆದರೆ, ಆ ಘಟಕದ ಇಂಜಿನಿಯರ್‌ಗಳು ಒಂದು ಮೆಟ್ರಿಕ್ ಟನ್‌ಗೆ 19,330 ರೂ. ವೆಚ್ಚ ತಗುಲಲಿದೆ ಎಂದು ಹೇಳಿರುವ ಹಿಂದೆ ಭ್ರಷ್ಟಾಚಾರದ ವಾಸನೆ ಇದೆ ಎಂದು ಆರೋಪಿಸಿದರು. ಕಸ ಸಂಸ್ಕರಣಾ ಘಟಕಗಳಿಗೆ ತ್ಯಾಜ್ಯವನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳುವುದು. ಹೆಚ್ಚಿನ ಪ್ರಮಾಣದ ಕಸವನ್ನು ಖಾಸಗಿಯವರಿಗೆ ಸೇರಿದ ಕ್ವಾರಿಗಳಲ್ಲಿ ತುಂಬುತ್ತಿದ್ದಾರೆ ಎಂದು ಆರೋಪಿಸಿದ ಅವರು, ನಿರ್ವಹಣಾ ಘಟಕಗಳಿಗೆ ಕೋಟ್ಯಾಂತರ ರೂ. ವೆಚ್ಚ ಮಾಡುವ ಬದಲು ತ್ಯಾಜ್ಯವನ್ನು ಕಸ ತುಂಬುವ ಹಳ್ಳ ಮತ್ತು ಕ್ವಾರಿಗಳಿಗೆ ಕಳುಹಿಸುವ ಮೂಲಕ ಕೋಟ್ಯಾಂತರ ರೂ. ಕಬಳಿಸುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಗುಡುಗಿದರು.

ಸಂಸ್ಕರಣಾ ಘಟಕಗಳ ಸ್ಥಾಪನೆ ಮಾಡುವಾಗ ನಿರ್ದಿಷ್ಠ ಯೋಜನೆಯನ್ನು ರೂಪಿಸಬೇಕಿತ್ತು. ಆದರೆ, ಯಾವುದೇ ಯೋಜನೆಯನ್ನು ರೂಪಿಸದೆ ನಿಗದಿತ ಹಣಕ್ಕಿಂತ ಹೆಚ್ಚಿನ ಹಣವನ್ನು ಕಸ ಮತ್ತು ಉಳಿದ ಅನುಪಯುಕ್ತ ತ್ಯಾಜ್ಯವನ್ನು ರವಾನಿಸಲು ತಮಗೆ ಬೇಕಾದವರಿಗೆ ಟೆಂಡರ್ ಕರೆಯದೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: