ಮೈಸೂರು

ಬೆರಳ್‍ಗೆ ಕೊರಳ್ ಹಳೆಗನ್ನಡ ನಾಟಕ ಪ್ರದರ್ಶನ ನ.12ರಂದು

ಕಂಪ್ಯೂಟರ್ ಯುಗದಲ್ಲಿ ಕನ್ನಡ ಭಾಷೆ ಬಗ್ಗೆ ಯುವ ಸಮೂಹ ನಿರ್ಲಕ್ಷ್ಯತೋರುತ್ತಿದ್ದು ಅಂತಹವರಲ್ಲಿ ಕನ್ನಡ ನಾಡುನುಡಿ ಬಗ್ಗೆ ಅಭಿಮಾನ ಮೂಡಿಸುವ ಹಿನ್ನೆಲೆಯಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ಬೆರಳ್ ಗೆ ಕೊರಳ್ ಹಳೆಗನ್ನಡ ನಾಟಕವನ್ನಾಡಲು ನಿರ್ಧರಿಸಲಾಗಿದೆ ಎಂದು ನಿರ್ದೇಶಕ ದಿನೇಶ್ ಚಮ್ಮಾಳಿಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅವರು, ಪ್ರಸ್ತುತಿ ಸಾಂಸ್ಕೃತಿಕ ಸಂಘಟನೆಯ ಹಳೆಮನೆ ನೆನಪು ಕಾರ್ಯಕ್ರಮದಂಗವಾಗಿ ನ.12ರ ಶನಿವಾರ ಸಂಜೆ 6ಕ್ಕೆ ರಂಗಾಯಣದ ವನರಂಗದಲ್ಲಿ ನಾಟಕ ಪ್ರದರ್ಶಿಸಲಿದ್ದು, ಮೈಸೂರಿನ ಸಾಮಾಜಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ, ನಿರಂತರ ಫೌಂಡೇಶನ್ ಸಹಕಾರ ನೀಡಿವೆ. ಕಾರ್ಯಕ್ರಮವನ್ನು ಕುವೆಂಪುರವರ ಮಗಳು ಲೇಖಕಿ ತಾರಿಣಿ ಚಿದಾನಂದ ಉದ್ಘಾಟಿಸುವರು. ಖ್ಯಾತ ರಂಗ ನಿರ್ದೇಶಕ ಹಾಗೂ ಚಿಂತಕ ಹೆಚ್.ಎಸ್.ಉಮೇಶ್ ಅಧ್ಯಕ್ಷತೆ ವಹಿಸುವರು. ಕುವೆಂಪು ವಿವಿಯ ವಿಶ್ರಾಂತ ಕುಲತಪಿ ಡಾ.ಕೆ.ಚಿದಾನಂದ ಗೌಡ, ಖ್ಯಾತ ರಂಗ ನಿರ್ದೇಶಕ ಪ್ರೊ.ಎಸ್.ಆರ್.ರಮೇಶ್, ರಂಗಾಯಣದ ಮಾಜಿ ನಿರ್ದೇಶಕ ಎಚ್.ಜರ್ನಾದನ್ (ಜನ್ನಿ), ಬಿ.ವಿ.ಕಾರಂತ ರಂಗ ಪ್ರಶಸ್ತಿ ಪುರಸ್ಕೃತ ಡಾ.ನ.ರತ್ನ, ನಿರಂತರ ಫೌಂಡೇಶನ್‍ನ ಪ್ರಸಾದ್ ಕುಂದೂರು, ನಾಟಕ ಅಕಾಡೆಮಿ ಸದಸ್ಯ ಜಿ.ಎಂ.ರಾಮಚಂದ್ರ ಹಾಗೂ ಲೇಖಕಿ ಮತ್ತು ಚಿಂತಕಿ ನಂದಾ ಹಳೆಮನೆ ನೆನಪಿನ ಬುತ್ತಿ ಹಂಚಿಕೊಳ್ಳುವರು. ಈ ಸಂದರ್ಭದಲ್ಲಿ ರಂಗಾಯಣದ ಸ್ವಚ್ಚತಾ ಸಿಬ್ಬಂದಿ ಗೌತಮ್ಮ ಮತ್ತು ಶೇಷಣ್ಣ ಅವರನ್ನು ಸನ್ಮಾನಿಸಲಾಗುವುದು. ನಾಟಕವನ್ನು ದಿನೇಶ್ ಚಮ್ಮಾಳಿಗೆ ನಿರ್ದೇಶಿಸಿದ್ದು ದೇವಾನಂದ ವರಪ್ರಸಾದ್ ಮತ್ತು ಪುರುಷೋತ್ತಮ್ ಕಿರಗಸೂರು ಸಂಗೀತ ನೀಡಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಂದಾ ಹಳೆಮನೆ, ಗಾಯಕ ದೇವಾನಂದ ವರಪ್ರಸಾದ್, ನಟ ಗೌತಮ್ ಉಪಸ್ಥಿತರಿದ್ದರು.

Leave a Reply

comments

Related Articles

error: