ಕರ್ನಾಟಕಮೈಸೂರುಸಿಟಿ ವಿಶೇಷ

ಹಳೆ ನೋಟುಗಳಿಗೆ ಹೆದರಿ ಮೈಸೂರಲ್ಲಿ ಬಾಗಿಲು ಮುಚ್ಚಿದ ಗಿರವಿ ಅಂಗಡಿಗಳು, ಚಿನ್ನದ ವ್ಯಾಪಾರಿಗಳು

ಇಂದು (ನ.11) ಮೈಸೂರಿನ ಬಹುತೇಕ ಜ್ಯೂವೆಲರಿ ಅಂಗಡಿಗಳು ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿ ಅಘೋಷಿತ ಬಂದ್ ಆಚರಿಸಿದವು.

ಕೇಂದ್ರದ ಮೋದಿ ಸರ್ಕಾರವು ರಾಷ್ಟ್ರದ ಆರ್ಥಿಕ ನೀತಿ ಸುಧಾರಣೆ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ಹಳೆಯ ಬೃಹತ್ ಮೊತ್ತದ ನೋಟುಗಳ ಚಲಾವಣೆ ಸ್ಥಗಿತ ಆದೇಶದಿಂದ ನಗರದ ಚಿನ್ನದ ಅಂಗಡಿ ಹಾಗೂ ಗಿರವಿ ಅಂಗಡಿಯವರು ಹೆದರಿ ಒಂದು ವಾರದ ಮಟ್ಟಿಗೆ ವ್ಯಾಪಾರ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಬಹುತೇಕ ಚಿನ್ನದ ಅಂಗಡಿಗಳು ಬಂದ್:

ನಗರದ ಚಿನ್ನ-ಬೆಳ್ಳಿ ಮುಖ್ಯ ವ್ಯಾಪಾರಿ ತಾಣವಾದ ಅಶೋಕ ರಸ್ತೆ, ಎಂ.ಜಿ. ರಸ್ತೆ, ಸಬ್-ಅರ್ಬನ್ ಬಸ್ ನಿಲ್ದಾಣ, ಅಗ್ರಹಾರ ಸುತ್ತಮುತ್ತಿಲಿನ ಪ್ರದೇಶದ ಶೇ.90ರಷ್ಟು ಚಿನ್ನದ ಅಂಗಡಿ-ಮುಂಗಟ್ಟುಗಳು ಮುಚ್ಚಿವೆ. ಮಾಹಿತಿ ಪ್ರಕಾರ ಕಾಳಧನವನ್ನು ಚಿನ್ನದಲ್ಲಿ ತೊಡಗಿಸಲು ತೆರಿಗೆ ವಂಚಕರು ಮುಂದಾಗಬಹುದಾದ ಸಾಧ್ಯತೆ ಮನಗಂಡ ಆದಾಯ ತೆರಿಗೆ ಇಲಾಖೆಯು ಚಿನ್ನ ಖರೀದಿಯ ಪ್ರತಿ ವಹಿವಾಟಿಗೂ ಕಡ್ಡಾಯ ಪಾನ್ ನಂಬರ್ ದಾಖಲಿಸಬೇಕು ಎಂಬ ನಿಯಮ ವಿಧಿಸಿದೆ. ಮಾರಾಟವಾದ ಚಿನ್ನ ಮತ್ತು ಸಂಗ್ರಹವಾದ ಮೊಬಲಗನ್ನು ತಾಳೆ ಮಾಡಲಾಗುವುದು ಎಂಬ ತೆರಿಗೆ ಇಲಾಖೆ ಎಚ್ಚರಿಕೆಗೆ ಚಿನ್ನದ ವ್ಯಾಪಾರಿಗಳು ಹೆದರಿದ್ದು, ಅಧಿಕ ವ್ಯವಹಾರ ವಹಿವಾಟು ಸ್ಥಗಿತಕ್ಕೆ ಕಾರಣವಾಗಿದೆ.

ಈ ಕುರಿತು ಚಿನ್ನದ ಅಂಗಡಿ ಮಾಲೀಕರನ್ನು ಸಂದರ್ಶಿಸಲು ‘ಸಿಟಿಟುಡೆ’ ಪ್ರಯತ್ನಿಸಿದಾಗ ಬಹುತೇಕ ವ್ಯಾಪಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದರು. ಪ್ರತಿಕ್ರಿಯೆ ನೀಡಿದ ಕೆಲವೇ ಕೆಲವು ಮಾಲೀಕರು ತಮ್ಮ ಪರಿಸ್ಥಿತಿ ವಿವರಿಸಿದ್ದು ಹೀಗೆ.

ನಿರ್ಮಲ್ ಕುಮಾರ್ ಜೈನ್
ನಿರ್ಮಲ್ ಕುಮಾರ್ ಜೈನ್

ದಿಢೀರನೆ ಪ್ರತ್ಯಕ್ಷರಾದ ಗಿರವಿ ಇಟ್ಟ ಗ್ರಾಹಕರು:

“2013ರಲ್ಲಿ 25 ಸಾವಿರಕ್ಕೆ ಹಾಗೂ 15 ಸಾವಿರಕ್ಕೆ ಒಂದೊಂದು ಒಡವೆಗಳನ್ನು ಗಿರವಿ ಇಟ್ಟವರು ಈಗ ಏಕಾಏಕಿ ಬಂದು ಹಣ ನೀಡಿ ಸಾಮಾನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ದಿಢೀರನೆ ಬಂದು ಹಳೆಯ ನೋಟುಗಳನ್ನು ನೀಡಿದರೆ ಸರ್ಕಾರಕ್ಕೆ ಲೆಕ್ಕ ನೀಡುವುದು ಸ್ವಲ್ಪ ಕಷ್ಟವೇ. ಹಾಗಾಗಿ ಬಹುತೇಕರು ಅಂಗಡಿ ಬಂದ್ ಮಾಡಿದ್ದಾರೆ. ಹೆಚ್ಚು ಹಳೇ ನೋಟುಗಳು ಸಂಗ್ರವಾದರೆ ಬ್ಯಾಂಕ್ ನಲ್ಲಿ ತಕ್ಷಣ ವಿನಿಮಯ ಸಾಧ್ಯವಿಲ್ಲ” ಎಂದು ಅನುಭವವನ್ನು ಗಿರವಿ ಅಂಗಡಿ ವ್ಯಾಪಾರಿ ನಿರ್ಮಲ್ ಕುಮಾರ್ ಜೈನ್ ಬಿಚ್ಚಿಟ್ಟರು.

ಕಳೆದ 50 ವರ್ಷಗಳಿಂದಲೂ ಅಗ್ರಹಾರದ ಬಹುತೇಕ ಚಿನ್ನದ ವ್ಯಾಪಾರಿಗಳು ಗಿರವಿ ವ್ಯವಹಾರ ನಡೆಸುತ್ತಿದ್ದಾರೆ. ಎಷ್ಟೋ ವರ್ಷಗಳಿಂದ ವಸ್ತುಗಳನ್ನು ಕೇಳದವರು ಇಂದು ಧಿಡೀರನೇ ಪ್ರತ್ಯೇಕ್ಷವಾಗುತ್ತಿದ್ದಾರೆ ಎನ್ನುವುದು ಇಲ್ಲಿನ ವ್ಯಾಪಾರಿಗಳ ಅನಿಸಿಕೆ.

 

ಕೆ.ಆರ್. ಬ್ಯಾಂಕ್ ನಿರ್ದೇಶಕ ಬಸವರಾಜು
ಕೆ.ಆರ್. ಬ್ಯಾಂಕ್ ನಿರ್ದೇಶಕ ಬಸವರಾಜು

ಕೇಳುವವರೇ ಇರಲಿಲ್ಲ:

ಕೆ.ಆರ್. ಬ್ಯಾಂಕ್ ನಿರ್ದೇಶಕ ಬಸವರಾಜು ಅವರದ್ದೂ ಇದೇ ಅಭಿಪ್ರಾಯ. “ಗಿರವಿಯಿಟ್ಟ ವಸ್ತುಗಳನ್ನು ಕೇಳುವವರೇ ದಿಕ್ಕಿರಲಿಲ್ಲ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹಣಕಾಸು ನೀತಿಯಿಂದ ಕಳೆದೆರಡು ದಿನಗಳಿಂದ ಬಿಡಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ವ್ಯಾಪಾರದಲ್ಲಿ 500 ಹಾಗೂ 1000 ರೂಪಾಯಿ ಮೌಲ್ಯದ ನೋಟುಗಳನ್ನು ತೆಗೆದುಕೊಳ್ಳಲು ಹಿಂಜರಿಕೆಯಾಗುತ್ತಿದೆ. ಭಾರತ ಸರ್ಕಾರದ ಆದೇಶದಂತೆ ನಡೆಯುವುದು ಪ್ರತಿಯೊಬ್ಬರ ಕರ್ತವ್ಯ. ಬ್ಯಾಂಕ್‍ಗೆ ನೀಡುವಷ್ಟು ಹಣ ನೀಡಿ ಉಳಿದಿದ್ದನ್ನು ಗಿರವಿ ವಸ್ತು ಬಿಡಿಸಿಕೊಳ್ಳಲು ಏಕಾಏಕಿ ಬರುತ್ತಿರುವುದರಿಂದ ವ್ಯಾಪಾರಿಗಳಿಗೆ ಸರಿದೂಗಿಸಲು ಕಷ್ಟಸಾಧ್ಯವಾಗಿದೆ. ಇನ್ನೂ ಹದಿನೈದು ದಿನದೊಳಗೆ ಉದ್ಯಮವು ಸಹಜಸ್ಥಿತಿ ಮರಳುವುದು ಎನ್ನುತ್ತಾರೆ ಅವರು.

ಮುಂಬೈ, ಚೆನೈ ಹಾಗೂ ಇತರೆ ಮಹಾನಗರಗಳಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗಿದೆ. ಸ್ಥಳೀಯವಾಗಿ ಲಭ್ಯವಾಗುತ್ತಿಲ್ಲ, ಬೆಲೆಯೂ ಏರಿಕೆಯಾಗಿದೆ. ಗ್ರಾಹಕರಿಗೆ ನಿಗದಿತ ಸಮಯದಲ್ಲಿ ವಸ್ತುಗಳನ್ನು ಪೂರೈಸಲಾಗುತ್ತಿಲ್ಲ” ಎನ್ನುವುದು ಬಾಬು ಎಂಬುವವರ ಅಭಿಪ್ರಾಯವಾಗಿತ್ತು.

ಚಿನ್ನದಲ್ಲಿ ಹೂಡಿಕೆ:

ಹಳೆ ನೋಟು ಚಲಾವಣೆ ಸ್ಥಗಿತ ಸುದ್ದಿ ತಿಳಿಯುತ್ತಿದ್ದಂತೆ ಕಪ್ಪು ಹಣವಿರುವ ಬಹುತೇಕರು ಚಿನ್ನದಲ್ಲಿ ತೊಡಗಿಸಿದ್ದು, ಕಳೆದ ನ.9ರಿಂದ ಇಂದಿನವರೆಗೂ ಚಿನ್ನದ ದರದಲ್ಲಿ ಏರಿಕೆಯಾಗುತ್ತಲೇ ಇದೆ. ನ.9ರಂದು ಚಿನ್ನವೂ ಪ್ರತಿ ಗ್ರಾಮ್‍ ಗೆ ನಾಲ್ಕು ಸಾವಿರದ ವರೆಗೂ ಅನಧಿಕೃತವಾಗಿ ಮಾರಾಟವಾಗಿರುವ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಹಣಕ್ಕೆ ಬೆಲೆಯಿಲ್ಲವೆಂದು ಪರಿಗಣಿಸಿದ ಕಪ್ಪು ಹಣದ ಹೊಂದಿರುವವರು ಚಿನ್ನದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದರು. ಹಾಗಾಗಿ ಕೇಂದ್ರ ಸರ್ಕಾರ ಚಿನ್ನದ ವ್ಯಾಪಾರದ ಮೇಲೆ ನಿಗಾ ವಹಿಸುವುದಾಗಿ ಎಚ್ಚರಿಕೆ ನೀಡಿದೆ.

~ ಕೆ.ಎಂ. ರೇಖಾ ಪ್ರಕಾಶ್

Leave a Reply

comments

Related Articles

error: