
ಕರ್ನಾಟಕ
ನಾಲಾ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ ಡಿ. 11 ರಂದು ತಾಲೂಕಿನ ಮಠಾಧೀಶರ ನೇತೃತ್ವದಲ್ಲಿ ತಾಲೂಕು ಬಂದ್
ರಾಜ್ಯ(ತುಮಕೂರು)ನ.17:- ಚಿಕ್ಕನಾಯಕನಹಳ್ಳಿ ತಾಲೂಕಿನ 26 ಕೆರೆಗಳ ಹೇಮಾವತಿ ಕುಡಿಯುವ ನೀರಿನ ಯೋಜನೆಯು ಸರ್ಕಾರ ಹಾಗೂ ಜಿಲ್ಲಾಡಳಿತದ ವಿಫಲದಿಂದ 10 ವರ್ಷವಾದರೂ ಕಾಮಾಗಾರಿ ಪೂರ್ಣಗೊಂಡಿಲ್ಲ. ಶೀಘ್ರವಾಗಿ ನಾಲಾ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ ಡಿ. 11 ರಂದು ತಾಲೂಕಿನ ಮಠಾಧೀಶರ ನೇತೃತ್ವದಲ್ಲಿ ತಾಲೂಕು ಬಂದ್ ಮಾಡಲಾಗುವುದು ಎಂದು ಹೇ.ಕು.ನೀ ಸಮಿತಿ ಅಧ್ಯಕ್ಷ ಡಾ ಪರಮೇಶ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕು ಹಲವು ವರ್ಷಗಳಿಂದ ಸತತ ಬರಗಾಲದಲ್ಲಿ ನರಳುತ್ತಿದ್ದು, ಕುಡಿಯುವ ನೀರಿಗೂ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ತಾಲ್ಲೂಕಿನ ರೈತರ ಜೀವನ ಸಂಕಷ್ಟದಲ್ಲಿದೆ. ಕಳೆದ 10 ವರ್ಷಗಳ ಹಿಂದೆ ತಾಲ್ಲೂಕಿಗೆ 102 ಕೋಟಿ ರೂ. ವೆಚ್ಚದಲ್ಲಿ 26 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿಯಲ್ಲಿ ರೈತರ ಸಮಸ್ಯೆ, ತಾಂತ್ರಿಕ ಹಾಗೂ ಜಿಲ್ಲಾಡಳಿತ ಮತ್ತು ಗುತ್ತಿಗೆದಾರರ ಹೊಂದಾಣಿಕೆಯಲ್ಲಿನ ಸಮಸ್ಯೆಗಳನ್ನು ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ಬಗೆಹರಿಸಿ ನಾಲಾ ಕಾಮಗಾರಿಯನ್ನು ಶೀಘ್ರವಾಗಿ ಈ ವರ್ಷದಲ್ಲಿಯೇ ಮುಗಿಸಬೇಕು ಎಂದು ಒತ್ತಾಯಿಸಿದರು. ತಾಲೂಕಿನ ಮಠಾಧೀಶರ ನೇತೃತ್ವದಲ್ಲಿ ಡಿ. 11 ರಂದು ಇಡೀ ತಾಲ್ಲೂಕನ್ನು ಬಂದ್ ಮಾಡುವುದಾಗಿ ತೀರ್ಮಾನಿಸಲಾಗಿದ್ದು, ತಾಲ್ಲೂಕಿನ ಎಲ್ಲಾ ಸಂಘ, ಸಂಸ್ಥೆಗಳು, ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಅಂಗಡಿ ವ್ಯಾಪಾರಿಗಳು, ವಾಹನ ಚಾಲಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹೇ.ಕು.ನೀ.ಹೋರಾಟ ಸಮಿತಿಯ ಉಪಾಧ್ಯಕ್ಷ ಬೇವಿನಹಳ್ಳಿ ಚನ್ನಬಸವಯ್ಯ, ಪ್ರಧಾನ ಕಾರ್ಯದರ್ಶೀ ಸಿ.ಹೆಚ್.ಚಿದಾನಂದ್, ಶೆಟ್ಟಿಕೆರೆ ಶರತ್, ರೈತ ಮುಖಂಡ ಕೆಂಕೆರೆ ಸತೀಶ್, ತಿಮ್ಮಾಲಪುರ ಶಂಕರಣ್ಣ, ಸಿ.ಡಿ. ಸುರೇಶ್, ಕರವೇ ಅಧ್ಯಕ್ಷ ಸಿ.ಟಿ. ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)