ಕರ್ನಾಟಕಮೈಸೂರು

ಗ್ರಂಥಾಲಯಗಳು ಜ್ಞಾನ ವಿತರಣೆಯ ಕೇಂದ್ರಗಳಾಗಬೇಕು: ಪ್ರೊ. ಲಿಂಗರಾಜ ಗಾಂಧಿ

ಮೈಸೂರು ವಿಶ್ವವಿದ್ಯಾಲಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿದ್ಯಾರ್ಥಿ ಸಂಘ (MULISSA) : 2016-17 ರ ಉದ್ಘಾಟನಾ ಕಾರ್ಯಕ್ರಮವು ಶುಕ್ರವಾರ ನಡೆಯಿತು.

ಮಾನಸ ಗಂಗೋತ್ರಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗದ ವತಿಯಿಂದ ಏರ್ಪಾಡಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರು ವಿವಿಯ ಪಿ.ಎಂ.ಇ.ಬಿ. ನಿರ್ದೇಶಕ ಪ್ರೊ. ಲಿಂಗರಾಜ ಗಾಂಧಿ ಅವರು “ಪುಸ್ತಕ, ಶಿಕ್ಷಕರು, ಚರ್ಚೆ–ಸಂವಾದಗಳಿಂದ ಪಠ್ಯದ ಕಲಿಕೆಯ ಜೊತೆಗೆ ಮಾಹಿತಿಯನ್ನೂ ಪಡೆಯಬಹುದಾಗಿದೆ. ಇದೆಲ್ಲವನ್ನು ಸಾಧ್ಯ ಮಾಡುವುದು ಗ್ರಂಥಾಲಯ. ಇದು ಎಲ್ಲ ಜನರನ್ನು, ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುತ್ತದೆ. ಗ್ರಂಥಾಲಯವಿಲ್ಲದ ವಿಶ್ವವಿದ್ಯಾಲಯ ಕಾಣಲು ಸಾಧ್ಯವಿಲ್ಲ. ಇಂದು ನಾವೆಲ್ಲರೂ ಜ್ಞಾನ ಸಮಾಜದಲ್ಲಿದ್ದೇವೆ. ಯಾವುದೇ ವಿಷಯದ ಬಗ್ಗೆ ಕ್ಷಣಾರ್ಧದಲ್ಲಿ ನಮಗೆ ಮಾಹಿತಿ ಸಿಗುತ್ತದೆ. ಆದ್ದರಿಂದ ಜ್ಞಾನವನ್ನು ಸಂಪಾದನೆ ಮಾಡಬೇಕು, ವಿತರಣೆ ಮಾಡಬೇಕು ಮತ್ತು ಸೃಷ್ಟಿ ಮಾಡಬೇಕು” ಎಂದರು.

ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಮೂಲಕ ಮತ್ತು ಅಂತರ್ಜಾಲದಲ್ಲಿ ವಿಷಯಗಳನ್ನು ತಿಳಿಯುವ ಮೂಲಕ ನಮ್ಮ ಜ್ಞಾನಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಇಂದು ಕಲಿಕೆ ಪ್ರಜಾಪ್ರಭುತ್ವದಂತಾಗಿದೆ. ಕೆಲವೊಂದು ವಿದ್ವಾಂಸರು ಸಮಾಜಕ್ಕೆ ಜ್ಞಾನ ನೀಡುವಲ್ಲಿ ಸ್ವಾರ್ಥಿಗಳಾಗುತ್ತಿದ್ದಾರೆ. ನಿರಂತರ ಕಲಿಕೆ ನಿರಂತರ ಪರಿಶ್ರಮದಿಂದ ಮಾತ್ರ ಸಾಧ‍್ಯ. ಇಂಗ್ಲಿಷ್ ಭಾಷೆಯನ್ನು ಕಲಿತು ಈ ಕ್ಷೇತ್ರದಲ್ಲಿನ ನಿಮ್ಮ ಗುರಿ-ಕನಸುಗಳನ್ನು ಸಾಕಾರಗೊಳಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅಲ್ಲದೇ ವಿದ್ಯಾರ್ಥಿಗಳಿಗೆ ಸ್ವೀಕೃತ ಜ್ಞಾನವಿರಬೇಕು. ಅಬ್ದುಲ್ ಕಲಾಂರವರು “ನೀವು ಮಲಗಿದ್ದಾಗ ಕಾಣುವುದು ಕನಸಲ್ಲ, ಯಾವುದು ನಿಮ್ಮನ್ನು ಮಲಗಲು ಬಿಡುವುದಿಲ್ಲವೋ ಅದು ಕನಸು” ಎಂದು ಹೇಳಿದ್ದಾರೆ. ಆದ್ದರಿಂದ ಎಲ್ಲರೂ ಅವರ ಮಾರ್ಗದರ್ಶನದಲ್ಲಿ ನಡೆಯಬೇಕು. ಇಂದು ಪದವಿಗಳು ಹೆಚ್ಚಾಗಿವೆ ವಿವೇಕ ಕಡಿಮೆಯಾಗಿದೆ. ಆರೋಗ್ಯ ಕಡಿಮೆಯಾಗಿದೆ ಔಷಧಿಗಳು ಹೆಚ್ಚಾಗಿವೆ. ಹಣ ಆಸ್ತಿ ಹೆಚ್ಚಾಗುತ್ತಿದೆ ಮೌಲ್ಯಗಳು ಕಡಿಮೆಯಾಗುತ್ತಿವೆ ಎಂದು ಇಂದಿನ ಜಾಗತೀಕರಣದ ಸಮಾಜ ಕುರಿತು ಮಾತನಾಡಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ಬಿ. ಮಂಜುನಾಥ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು. “ವಿದ್ಯಾರ್ಥಿಗಳು ಕೇವಲ ಕೆಲಸ ಪಡೆಯುವ ಉದ್ದೇಶದಿಂದ ಮಾತ್ರ ಓದಬೇಡಿ. ನಿಮ್ಮ ಕ್ಷೇತ್ರದಲ್ಲಿ ಏನಾದರೊಂದು ಸಾಧನೆ ಮಾಡಿ. ಭಾಷಾ ಕೀಳರಿಮೆ ಬೇಡ. ಇಂಗ್ಲಿಷ್ ಭಾಷೆಯನ್ನು ಕಲಿಯಲು ಪ್ರಯತ್ನಿಸಿ ಎಂದು ಸಲಹೆ ನೀಡಿದರು. ಜೊತೆಗೆ ತಮ್ಮ ವಿದ್ಯಾಭ್ಯಾಸದ ದಿನಗಳನ್ನು ನೆನೆಸಿಕೊಂಡರು.

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗ ಮತ್ತು ‘ಮುಲಿಸ್ಸಾ’ದ  ಅಧ್ಯಕ್ಷೆ ಶಾಲಿನಿ ಆರ್ ಅರಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ, ಸಲಹೆಗಾರ ಪ್ರೊ. ಎಂ. ಚಂದ್ರಶೇಖರ್ ಮತ್ತು ಕಾರ್ಯದರ್ಶಿ ಎಂ. ರಾಜೇಶ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: