ದೇಶಪ್ರಮುಖ ಸುದ್ದಿವಿದೇಶ

ಮಿತಿಮೀರಿದ ತೆರಿಗೆ ಭಾರ : ಪಾಕಿಸ್ತಾನದ ವಿರುದ್ಧ ಸಿಡಿದೆದ್ದ ಗಿಲ್ಗಿಟ್, ಬಾಲ್ಟಿಸ್ತಾನ್ ಜನ

ಸ್ಕರ್ದು (ನ.18): ಕಾಶ್ಮೀರ ವಿವಾದದ ಭಾಗವೇ ಆಗಿರುವ ಗಿಲ್ಗಿಟ್, ಬಾಲ್ಟಿಸ್ತಾನ್ ಪ್ರದೇಶದ ಜನರ ಮೇಲೆ ಪಾಕಿಸ್ತಾನ ಮಿತಿಮೀರಿದ ತೆರಿಗೆ ಏರುತ್ತಿರುವುದನ್ನು ಖಂಡಿಸಿ ಅಲ್ಲಿನ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಕಾನೂನು ಬಾಹಿರ ತೆರಿಗೆ ವಿಧಿಸಿರುವ ಕ್ರಮವನ್ನು ತೀವ್ರವಾಗಿ ವಿರೋಧಿಸಿರುವ ಜನರು ಪಾಕಿಸ್ತಾನದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪಾಕಿಸ್ತಾನ ಸರ್ಕಾರವು ಸ್ಕರ್ದು, ಗಿಲ್ಗಿಟ್, ಬಾಲ್ಟಿಸ್ತಾನ್ ಪ್ರಾಂತ್ಯದ ಮೇಲೆ ಹೇರಿರುವ ಕಾನೂನು ಬಾಹಿರವಾಗಿದೆ. ಇದರಿಂದ ಜನರು, ಸಣ್ಣ ವ್ಯಾಪಾರಸ್ಥರು ಮತ್ತು ಉದ್ಯಮಿಗಳು ಭಾರೀ ತೊಂದರೆಗೀಡಾಗಿದ್ದು ಮಡುಗಟ್ಟಿದ ಆಕ್ರೋಶ ಇದೀಗ ಸ್ಫೋಟಗೊಂಡಿದೆ.

ಪ್ರತಿಭಟನೆ ವೇಳೆ ಮಾತನಾಡಿರುವ ಪ್ರತಿಭಟನಾಕಾರರು, ಮನೆಯಲ್ಲಿಟ್ಟಿರುವ ಕೋಳಿಗಳಿಗೆ ನೀವು ತೆರಿಗೆ ವಿಧಿಸಿದ್ದೀರಿ. ಹಾಲಿಗಾಗಿ ಮನೆಯಲ್ಲಿ ಸಾಗಿರುವ ಹಸುಗಳಿಗೆ ನೀವು ತೆರಿಗೆ ವಿಧಿಸಿದ್ದೀರಿ. ಮನೆಯಲ್ಲಿ ಹೆಚ್ಚುವರಿಯಾಗಿ ಸದಸ್ಯರಿದ್ದರೆ ಅವರಿಗೆ ತೆರಿಗೆ ಕಟ್ಟಬೇಕಿದೆ. ಒಂದು ಕುಟುಂಬದಲ್ಲಿ 5 ಸದಸ್ಯರಿಗಿಂತಲೂ ಹೆಚ್ಚು ಜನರಿದ್ದರೆ, ನಾವು ತೆರಿಗೆ ಕಟ್ಟಬೇಕಿದೆ. ಇದು ಯಾವ ರೀತಿಯ ಆಡಳಿತ. ಎಂತಹ ಸಂದರ್ಭ ಬಂದರೂ ನಾವು ತೆರಿಗೆ ಹಣ ಕಟ್ಟುವುದಿಲ್ಲ ಎಂದಿದ್ದಾರೆ.

ಇಷ್ಟೇ ಅಲ್ಲದೆ ಕರಾಚಿ, ಖೆಟ್ಟಾ, ಲಾಹೋರ್ ಹಾಗೂ ಪಾಕಿಸ್ತಾನದ ಇನ್ನಾವುದೇ ಭಾಗದಲ್ಲಿರುವ ಗಿಲ್ಗಿಟ್, ಬಾಲ್ಟಿಸ್ತಾನದ ಜನರು ತೆರಿಗೆ ಹಣವನ್ನು ಕಟ್ಟಬಾರದು ಎಂದು ನಾವು ಆಗ್ರಹಿಸಲು ಇಚ್ಛಿಸುತ್ತೇವೆ. ಈ ಪ್ರತಿಭಟನೆಯನ್ನು ಪಾಕಿಸ್ತಾನದಾದ್ಯಂತ ಹಮ್ಮಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಸಾಮಾನ್ಯ ಮೂಲಭೂತ ಹಕ್ಕುಗಳು, ಸಬ್ಸಿಡಿಗಳು ಹಾಗೂ ಸಾಂವಿಧಾನಿಕ ಸ್ಥಾನವನ್ನು ನೀಡದೆ ನಮ್ಮ ಮೇಲೆ, ವ್ಯಾಪಾರಸ್ಥರ ಮೇಲೆ ದೊಡ್ಡ ಮಟ್ಟದ ತೆರಿಗೆ ವಿಧಿಸಲಾಗುತ್ತಿದೆ. ತೆರಿಗೆ ಹಣವನ್ನು ಸಂಗ್ರಹಿಸುವ ಅಧಿಕಾರಿಗಳು ಗಿಲ್ಗಿಟ್, ಬಾಲ್ಟಿಸ್ತಾನದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನೂ ನಡೆಸುತ್ತಿಲ್ಲ ಎಂದು ಅಲ್ಲಿನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾನೂನು ಬಾಹಿರವಾಗಿ ಪಾಕಿಸ್ತಾನ ಸರ್ಕಾರ ನಮಗೆ ತೆರಿಗೆ ವಿಧಿಸುತ್ತಿದೆ. ತೆರಿಗೆ ಕುರಿತು ಪಾಕಿಸ್ತಾನ ಸರ್ಕಾರ ನೀಡಿರುವ ಸೂಚನೆಗಳನ್ನು ಹಿಂದಕ್ಕೆ ಪಡೆಯದೇ ಹೋದರೆ, ನಮ್ಮ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುತ್ತದೆ. ಇಸ್ಲಾಂ ಧರ್ಮದಲ್ಲಿ ತತ್ವವಿದ್ದು, ಹಕ್ಕುಗಳಿಲ್ಲದ ಮೇಲೆ ಯಾವುದೇ ತೆರಿಗೆ ಕಟ್ಟುವಂತಿಲ್ಲ ಎಂದು ತಿಳಿಸಲಾಗಿದೆ. ನಮಗೆ ನಮ್ಮತನ ಉಳಿಸಿಕೊಳ್ಳಲು ಅವಕಾಶವಿಲ್ಲ ಎಂದಾದ ಮೇಲೆ ಈ ಸರ್ಕಾರಕ್ಕೆ ನಾವೇಕೆ ತೆರಿಗೆ ಕಟ್ಟಬೇಕು ಎಂದು ಹೋರಾಟಗಾರರೊಬ್ಬರು ಪ್ರಶ್ನಿಸಿದ್ದಾರೆ.

(ಎನ್‍ಬಿಎನ್‍)

Leave a Reply

comments

Related Articles

error: