ಪ್ರಮುಖ ಸುದ್ದಿಮೈಸೂರು

ಆರೋಗ್ಯ ಸೇವಾ ವ್ಯವಸ್ಥೆ ಜನಸಾಮಾನ್ಯರಿಗೆ ಸಿಗುತ್ತಿಲ್ಲ : ಡಾ.ವಿಜಯಕುಮಾರ್

ದೇಶದಲ್ಲಿ ಐದು ವರ್ಷದೊಳಗಿನ ಶೇ.42ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಇಲ್ಲಿನ ಆರೋಗ್ಯ ಸೇವಾ ವ್ಯವಸ್ಥೆ ಜನಸಾಮಾನ್ಯರಿಗೆ ಕೈಗೆಟುಕದಂತಾಗಿದೆ ಎಂದು ನೀತಿ ಆಯೋಗ ಸದಸ್ಯ ಡಾ.ವಿಜಯಕುಮಾರ್ ಸಾರಸ್ವತ ಕಳವಳ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಜೆ.ಎಸ್.ಎಸ್ ವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ಏಳನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಡಾ. ವಿಜಯಕುಮಾರ್ ಮಾತನಾಡಿದರು. ವೈದ್ಯಕೀಯ ವೃತ್ತಿ ಬದುಕಿನಲ್ಲಿ ವೈದ್ಯರು ಅರ್ಥ ಮಾಡಿಕೊಂಡು ಅನುಸರಿಸಬೇಕಾದ ಹಲವು ವಿಚಾರಗಳಿವೆ. ತಾನೊಬ್ಬ ವೈದ್ಯ ಎಂಬುದನ್ನು ಅರಿತುಕೊಂಡು ರೋಗಿಯನ್ನು ಗುಣಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು. ನಮ್ಮ ಆರೋಗ್ಯ ವ್ಯವಸ್ಥೆ ವಿದೇಶಿಯರಿಗೆ ಪರಿಣಾಮಕಾರಿಯಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಲಭ್ಯವಾಗುತ್ತಿದೆ. ದೇಶದ ಸಾಮಾನ್ಯರಿಗೆ ಪರಿಣಾಮಕಾರಿ ಹಾಗೂ ಕಡಿಮೆ ವೆಚ್ಚದ ಆರೋಗ್ಯ ಸೇವಾ ಸಂಸ್ಥೆ ಮಾತ್ರ ಲಭಿಸುತ್ತಿಲ್ಲ. ಕನಸಾಗಿಯೇ ಉಳಿದಿದೆ ಎಂದು ಖೇದ ವ್ಯಕ್ತಪಡಿಸಿದರು.

ಚೀನಾದಲ್ಲಿ ಶೇ.7ರಷ್ಟು, ಥಾಯ್ಲೆಂಡ್ ನಲ್ಲಿ ಶೇ.7ರಷ್ಟು ಘನಾದಲ್ಲಿ ಶೇ.14ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ದೇಶದಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳೂ ಹೆಚ್ಚುತ್ತಿವೆ. ಪ್ರತಿವರ್ಷ 2ಕೋಟಿ ಜನರು ಮಲೇರಿಯಾ, ಡೆಂಗೆ ಮೊದಲಾದ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ವಿವರಿಸಿದರು. ವೈದ್ಯರು ವೃತ್ತಿ ಬದುಕಿನಲ್ಲಿ ಹಸನ್ಮುಖರಾಗಿ ಕೆಲಸ ಮಾಡಿ ಮಾನವೀಯತೆ ಮೆರೆಯುವುದರೊಂದಿಗೆ ದೇಶ ಸೇವೆಗೆ ಸದಾ ಸಿದ್ಧ  ಎಂಬ ಅಂಶವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿ ಚಿನ್ನದ ಪದಕ ಗಳಿಸಿದ 41 ಪದವೀಧರರಿಗೆ ಚಿನ್ನದ ಪದಕ ಪ್ರದಾನಿಸಲಾಯಿತು. ಈ ಸಂದರ್ಭ ಶಿವರಾತ್ರೀ ದೇಶಿಕೇಂದ್ರ ಸ್ವಾಮಿಜಿ, ಕುಲಪತಿ ಡಾ.ಬಿ.ಸುರೇಶ್, ಪರೀಕ್ಷಾ ನಿಯಂತ್ರಕ ಡಾ.ಆರ್.ವಿಜಯಸಿಂಹ, ಕುಲಸಚಿವ ಡಾ.ಬಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: