ಮೈಸೂರು

ಗೋ.ಮ ವಿರುದ್ಧ ಕ್ರಮ ಜರುಗಿಸಲು ಆಗ್ರಹಿಸಿ ನ.22ರಂದು ಮೈಸೂರು ಬಂದ್

ಮೈಸೂರು, ನ.20 : ದೇಶದ ಸಂವಿಧಾನಕ್ಕೆ ಅವಮಾನಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಅವರ ವಿರುದ್ಧ ಕ್ರಮ ಕೈಗೊಳ್ಳಲು ನಿಷ್ಕ್ರಿಯವಾಗಿರುವ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಧೋರಣೆ ಖಂಡಿಸಿ ನ.22ರಂದು ಸಂಪೂರ್ಣ ಮೈಸೂರು ಬಂದ್ ಗೆ ಕರೆ ನೀಡಲಾಗಿದೆ ಎಂದು ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ತಿಳಿಸಿದರು.

ನಗರದ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ, ಪ್ರಗತಿಪರ ಸಂಘಟನೆಗಳ ಒಕ್ಕೂಟಗಳು ಗೋ. ಮಧುಸೂದನ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕಳೆದ ನ.9ರಿಂದ ನಡೆಸಿರುವ ಹೋರಾಟವನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದ್ದು ಇದನ್ನು ಖಂಡಿಸಿ ಶಾಂತಿಯುತ ಹೋರಾಟಕ್ಕೆ ಹಲವಾರು ಸಂಘಟನೆಗಳು ಮುಂದಾಗಿದ್ದು, ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು, ಸಂಶೋಧಕರು, ವಕೀಲರು, ಸಾಹಿತಿಗಳು, ಅಂಬೇಡ್ಕರ್ ಅಭಿಮಾನಿಗಳು, ಪಿಎಫ್.ಐ, ಎಸ್ ಡಿಪಿಐ ದಲಿತ ಸಂಘಟನೆಗಳ ಮುಖಂಡರು, ಅಲ್ಪಸಂಖ್ಯಾತ ಮಠಾಧೀಶರು, ಹಲವಾರು ಪ್ರಗತಿಪರ ಸಂಘಟನೆಗಳು ಪಾಲ್ಗೊಳ್ಳುವವು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿಭಟನಾ ಮೆರವಣಿಗೆಯು ಅಶೋಕಪುರಂ ನಿಂದ ಬಲ್ಲಾಳ್ ವೃತ್ತದ ಮೂಲಕ  ಸಾಗಿ  ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು

ಈಗಾಗಲೇ ಗೋ.ಮಧುಸೂದನ್ ವಿರುದ್ಧ ರಾಯಚೂರು ಜಿಲ್ಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಅಂಬೇಡ್ಕರ್ ಸೇನೆ ಕಾರ್ಯಕರ್ತ ಭೀಮಾಶಂಕರ ಅವರು ಎಫ್ ಐ ಆರ್ ದಾಖಲಿಸಿದ್ದು, ಈ ನಿಟ್ಟಿನಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಅವರು, ಮೈಸೂರು ಬಂದ್ ನಲ್ಲಿ ಶಾಲಾ ಕಾಲೇಜು, ಸಾರಿಗೆ ವ್ಯವಸ್ಥೆಯನ್ನು ಬಂದ್ ಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಗೋಷ್ಠಿಯಲ್ಲಿ ದಲಿತ ವೆಲ್ ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಚಿತ್ರದುರ್ಗದ ಚಲುವಾದಿ ಮಠದ ನಾಗಲಿಂಗ ಸ್ವಾಮೀಜಿ, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಸಂಚಾಲಕ ಬಾಸ್ಕರ್ ಎನ್. ಎಸ್ ಟಿಪಿಐ ಉಪಾಧ್ಯಕ್ಷ ಪುಟ್ಟನಂಜಯ್ಯ, ಸಿದ್ಧಾರ್ಥ ಬಡಾವಣೆಯ ಸ್ನೇಹ ಸೌಹಾರ್ಧ ಸಂಘದ ಅಧ್ಯಕ್ಷ ಆರ್.ಸಿದ್ದ ಬಸವಯ್ಯ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: