ಕರ್ನಾಟಕ

ವೈಜ್ಞಾನಿಕ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಯಶಸ್ವಿ ರೈತರಾಗಬೇಕು : ಜಾನಕೀರಾಂ

ರಾಜ್ಯ(ಮಂಡ್ಯ)ನ.20:- ರೈತರು ವೈಜ್ಞಾನಿಕ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಯಶಸ್ವಿ ರೈತರಾಗಿ ಹೊರಹೊಮ್ಮಬೇಕು. ಇದಕ್ಕೆ ಪ್ರಗತಿಪರ ರೈತರ ಭೇಟಿ, ಕೃಷಿ ಮೇಳದಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಬೇಸಾಯದ ಅನುಭವಗಳನ್ನು ಪಡೆದುಕೊಳ್ಳಬಹುದು ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಜಾನಕೀರಾಂ ಹೇಳಿದರು.

ಅವರು ಕೆ.ಆರ್.ಪೇಟೆ ಪಟ್ಟಣದ ಕೃಷಿ ಇಲಾಖೆ ಕಚೇರಿಯ ಆವರಣದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಆಯೋಜಿಸಿರುವ ಕೃಷಿಮೇಳ ಮತ್ತು ಕೃಷಿ ಅಧ್ಯಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಾಗೂ ಕೃಷಿ ಅಧ್ಯಯನ ಪ್ರವಾಸಕ್ಕೆ ಹೊರಟ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ರೈತರು ಕೇವಲ ಭತ್ತ, ಕಬ್ಬು ಬೆಳೆಗಳನ್ನು ಮಾತ್ರ ಬೆಳೆಯಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆದರೆ ಹೆಚ್ಚು ಬೇಡಿಕೆ ಇರುವ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಬಹುದಾದ ರೇಷ್ಮೆ ಬೆಳೆಯನ್ನು ಕೈಗೊಳ್ಳಬೇಕು. ತರಕಾರಿ ಬೆಳೆಗಳನ್ನು ಬೆಳೆಯಬೇಕು. ಬೇಸಾಯದ ಜೊತೆಗೆ ಉಪಕಸುಬುಗಳನ್ನು ಕೈಗೊಳ್ಳಬೇಕು. ಕುರಿ, ಮೇಕೆ, ಕೋಳಿ, ಹಂದಿ, ಮೊಲ ಸಾಕಾಣಿಕೆ, ಹೈನುಗಾರಿಕೆ ಮಾಡುವುದರಿಂದ ಖಚಿತ ಆದಾಯವನ್ನು ಗಳಿಸಬಹುದು. ಮಳೆಯ ಪ್ರಮಾಣ ಕಡಿಮೆ ಇರುವ ಕಾರಣ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಅಳವಡಿಸಿಕೊಂಡರೆ ಕಡಿಮೆ ನೀರಿನಲ್ಲಿ ಪೂರ್ಣ ಪ್ರಮಾಣದ ಬೆಳೆಗಳನ್ನು ಬೆಳೆಯಬಹುದು. ನೀರಿನ ಪ್ರಮಾಣದಿಂದ ಬೆಳೆಗಳು ಒಣಗುವುದನ್ನು ತಪ್ಪಿಸಬಹುದು. ಈ ಬಗ್ಗೆ ಬೆಂಗಳೂರು ಕೃಷಿ ವಿವಿ ವತಿಯಿಂದ ಆಯೋಜಿಸಿರುವ ಕೃಷಿ ಅಧ್ಯಯನ ಪ್ರವಾಸದ ಸಂದರ್ಭದಲ್ಲಿ ತಜ್ಞರಿಂದ ಮಾಹಿತಿ ಪಡೆದುಕೊಳ್ಳಬೇಕು. ಅಲ್ಲದೆ ತಾಲೂಕು ಮಟ್ಟದಲ್ಲಿ ಕೃಷಿ ಅಧಿಕಾರಿಗಳು, ರೇಷ್ಮೆ ಅಧಿಕಾರಿಗಳು, ಪಶು ವೈದ್ಯ ಇಲಾಖಾ ಅಧಿಕಾರಿಗಳ ಸಲಹೆಗಳನ್ನು ಪಡೆದುಕೊಂಡು ಉತ್ತಮ ಬೇಸಾಯ ಮಾಡಬೇಕು ಎಂದು ಜಾನಕೀರಾಂ ಸಲಹೆ ನೀಡಿದರು.

ತಾಲೂಕು ಪಂಚಾಯಿತಿ ಸದಸ್ಯರಾದ ನಿಂಗೇಗೌಡ, ಸತ್ಯಮ್ಮ, ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ್, ಕೃಷಿ ಅಧಿಕಾರಿಗಳಾದ ಜಯಶಂಕರಆರಾಧ್ಯ, ಶ್ರೀನಿವಾಸ್, ಶ್ರೀಧರ, ಪ್ರಗತಿಪರ ರೈತರಾದ ಪೂವನಹಳ್ಳಿ ಸ್ವಾಮಿನಾಯಕ್, ಸಿಂದುಘಟ್ಟ ರವಿ ಸೇರಿದಂತೆ ಅನೇಕ ರೈತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: