ಕರ್ನಾಟಕಪ್ರಮುಖ ಸುದ್ದಿ

ರಾಜ್ಯದಲ್ಲಿ ಈಗಾಗಲೇ ಘೋಷಣೆಯಾಗಿರುವ 50 ಹೊಸ ತಾಲೂಕುಗಳನ್ನು 2018ರ ಜನವರಿ ಅಂತ್ಯದೊಳಗೆ ಅಸ್ತಿತ್ವಕ್ಕೆ ತರಲಾಗುವುದು : ಕಾಗೋಡು ತಿಮ್ಮಪ್ಪ

ರಾಜ್ಯ(ಬೆಳಗಾವಿ)ನ.20:- ರಾಜ್ಯದಲ್ಲಿ ಈಗಾಗಲೇ ಘೋಷಣೆಯಾಗಿರುವ 50 ಹೊಸ ತಾಲೂಕುಗಳನ್ನು 2018ರ ಜನವರಿ ಅಂತ್ಯದೊಳಗೆ ಅಸ್ತಿತ್ವಕ್ಕೆ ತರಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿಧಾನಸಭೆಯಲ್ಲಿಂದು ಹೇಳಿದರು.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಬೋಪಯ್ಯ ಹಾಗೂ ಅಪ್ಪಚ್ಚುರಂಜನ್, ಕಾಂಗ್ರೆಸ್‌ನ ರಘುಮೂರ್ತಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸುಮಾರು 50 ಹೊಸ ತಾಲೂಕುಗಳನ್ನು ರಚಿಸಲು ಸರ್ಕಾರ ಈಗಾಗಲೇ ತೀರ್ಮಾನಿಸಿದೆ. ಅದರಂತೆ 2018ರ ಜನವರಿ ಅಂತ್ಯದೊಳಗೆ ಈ ತಾಲೂಕುಗಳನ್ನು ಅಸ್ತಿತ್ವಕ್ಕೆ ತರಲು ಹಣಕಾಸು ಹಾಗೂ ಮತ್ತಿತರ ಸೌಲಭ್ಯಗಳನ್ನು ಕ್ರೋಢೀಕರಿಸಲಾಗುತ್ತಿದೆ ಎಂದರು. ಹೊಸದಾಗಿ 50 ತಾಲೂಕುಗಳು ರಚನೆಯಾದರೂ ಇನ್ನೂ ಹೊಸ ತಾಲೂಕುಗಳ ರಚನೆಗೆ ಸದಸ್ಯರಿಂದ ಬೇಡಿಕೆ ಇದೆ. ಹೊಸ ತಾಲೂಕುಗಳ ರಚನೆ ಸಂದರ್ಭದಲ್ಲಿ ಸದಸ್ಯರ ಬೇಡಿಕೆಗಳನ್ನು ಆದ್ಯತೆ ಮೇಲೆ ಪರಿಗಣಿಸಲಾಗುವುದು. ಸದ್ಯ 50 ತಾಲೂಕುಗಳನ್ನು ಮಾತ್ರ ಹೊಸದಾಗಿ ರಚಿಸಲಾಗುತ್ತಿದೆ ಎಂದರು. ಹೊಸ ತಾಲೂಕುಗಳ ರಚನೆ ಮಾಡುವಾಗ ಕಳಸವನ್ನು ಪರಿಗಣಿಸಿ ಎಂದು ಚಿಕ್ಕಮಗಳೂರು ಜಿಲ್ಲೆಯ ಶಾಸಕರಾದ ಜೀವರಾಜ್, ವೈ.ಎಸ್.ವಿ. ದತ್ತ ಬೇಡಿಕೆ ಇಟ್ಟರೆ, ಕಾಂಗ್ರೆಸ್‌ನ ಬಿ.ಆರ್. ಯಾವಗಲ್ ಅವರು ಉಪರಾಷ್ಟ್ರಪತಿ ಬಿ.ಡಿ. ಜತ್ತಿ ಅವರ ಜನನ ಸ್ಥಳವಾದ ಸಾವಳಗಿ ತಾಲೂಕು ಆಗಬೇಕು ಎಂದು ಒತ್ತಾಯಿಸಿದರು. ಬಿಎಸ್ಆರ್ ಕಾಂಗ್ರೆ‌ಸ್‌ನ ರಾಜೀವ್ ಅವರು ಹಾರೋಗೆರೆ ತಾಲೂಕು ರಚನೆಗೆ ಒತ್ತಾಯಿಸಿದರೆ, ದೇವನಹಳ್ಳಿಯ ಶಾಸಕ ಪಿಳ್ಳ ಮುನಿಸ್ವಾಮಪ್ಪ ಅವರು ವಿಜಯಪುರ ತಾಲೂಕು ಆಗಬೇಕು ಎಂದರು. ರಘುಮೂರ್ತಿ ಅವರು ಚಳ್ಳಕೆರೆಯ ಪರುಶುರಾಮಪುರವನ್ನು ಹೊಸ ತಾಲೂಕು ಆಗಿ ಘೋಷಿಸಬೇಕು ಎಂಬ ಬೇಡಿಕೆಯನ್ನು ಸದನದಲ್ಲಿ ಇಟ್ಟರು.  ಆಗ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ್ ಅವರು ಮುಂದೆ ತಾಲೂಕು ರಚನೆ ಮಾಡಿದಾಗ ಇವುಗಳನ್ನು ಪರಿಗಣಿಸುವುದಾಗಿ ಸಚಿವರು ಹೇಳಿದ್ದಾರೆ. ಈ ಬಗ್ಗೆ ಹೆಚ್ಚಿನ ಚರ್ಚೆ ಬೇಡ ಎಂದು ಹೊಸ ತಾಲೂಕುಗಳು ಕುರಿತು ಹೆಚ್ಚಿನ ಚರ್ಚೆಗೆ ತೆರೆ ಎಳೆದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: